ಜಿಲ್ಲೆ

ವಿದ್ಯಾರ್ಥಿನಿಗಳ ಫೋಟೊ ತಿರುಚಿದವರಿಗೆ ಶಿಕ್ಷೆ ನೀಡಿ

ಹುಬ್ಬಳ್ಳಿ : ವಿದ್ಯಾರ್ಥಿನಿಯರ ಫೋಟೊಗಳನ್ನು ಅಸಹ್ಯವಾಗಿ ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಈ ರೀತಿಯ ಘಟನೆಗಳಿಂದ ವಿದ್ಯಾರ್ಥಿನಿಯರು ಹಾಗೂ ಪಾಲಕರಲ್ಲಿ ಆತಂಕ ಮೂಡಿದೆ. ಮಕ್ಕಳನ್ನು ಕಾಲೇಜಿಗೆ ಕಳುಹಿಸುವ ಬಗ್ಗೆ ಪಾಲಕರು ಯೋಚಿಸುವಂತಾಗಿದೆ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದರು.

ಇಂತಹ ಘಟನೆಗಳಿಂದ ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಬಗ್ಗೆನೇ ಪ್ರಶ್ನಿಸುವಂತಾಗಿದೆ. ಇಂತಹ ಘಟನೆ ನಡೆಯದಂತೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಘಟನೆ ನಡೆದ ಬಗ್ಗೆ ವಿದ್ಯಾರ್ಥಿಗಳು ಜೂ. 20ರಂದು ಕಾಲೇಜಿನ ಆಡಳಿತ ಮಂಡಳಿ ಗಮನಕ್ಕೆ ತಂದರೂ, ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಆಡಳಿತ ಮಂಡಳಿಯವರು ಕಾಲೇಜಿನ ಪ್ರತಿಷ್ಠೆ ಬಗ್ಗೆ ಯೋಚಿಸದೇ ವಿದ್ಯಾರ್ಥಿಗಳ ಹಿತಾಸಕ್ತಿ ಬಗ್ಗೆ ಚಿಂತಿಸಬೇಕು ಎಂದು ಆಗ್ರಹಿಸಿದರು.

ಲ್ಯಾಮಿಂಗ್ಟನ್ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ, ಚನ್ನಮ್ಮ ವೃತ್ತದ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು, ನಂತರ ಗೃಹಸಚಿವರಿಗೆ ಹುಬ್ಬಳ್ಳಿ ತಹಸೀಲ್ದಾರ ಮುಖಾಂತರ ಮನವಿ ಸಲ್ಲಿಸಲಾಯಿತು. ಪರಿಷತ್ ಪ್ರಾಂತ ಸಂಘಟನಾ ಕಾರ್ಯದರ್ಶಿ ಪೃಥ್ವಿ ಕುಮಾರ, ಪ್ರಾಂತ ಕಾರ್ಯದರ್ಶಿ ಮಣಿಕಂಠ ಕಳಸ, ನಗರ ಕಾರ್ಯದರ್ಶಿ ಸುಶೀಲ್ ಇಟಗಿ, ನವೀನ, ರಾಘು ಹಾಗೂ ಇತರರು ಇದ್ದರು.