ಜಿಲ್ಲೆ

ಅರ್ಚಕರ ಸಮಸ್ಯೆ ನಿವಾರಿಸುವಂತೆ ಹೋರಾಟ

ಅವಿನಾಶ್ ಜೈನಹಳ್ಳಿ

ಮುಜರಾಯಿ ದೇವಾಲಯಗಳ ಅರ್ಚಕರು, ಆಗಮಿಕರು ಹಾಗೂ ನೌಕರರ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿ ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸಲಾಗುವುದು ಎಂದು ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರು, ಆಗಮಿಕರು ಹಾಗೂ ನೌಕರರ ಸಂಘದ ಅಧ್ಯಕ್ಷ ಶ್ರೀವತ್ಸ ತಿಳಿಸಿದರು.

ಜಿಲ್ಲಾ ಮುಜರಾಯಿ ದೇವಾಲಯಗಳ ಅರ್ಚಕರು, ಆಗಮಿಕರು ಹಾಗೂ ನೌಕರರ ಸಂಘದಿಂದ ನಗರದ ದಿಗಂಬರ ಜೈನ ಬಸದಿಯಲ್ಲಿ ಆಯೋಜಿಸಿದ್ದ ಪದಾಧಿಕಾರಿಗಳ ಮಹಾಸಭೆ ಮತ್ತು ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು.

ದೇವರನ್ನು ಪೂಜಿಸುವ ಅರ್ಚಕರಾಗುವುದು ಪೂರ್ವ ಜನ್ಮದ ಪುಣ್ಯ. ಆದರೆ ಗ್ರಾಮೀಣ ಪ್ರದೇಶದ ಅರ್ಚಕರು ಬಹಳ ಆರ್ಥಿಕ ತೊಂದರೆ ಅನುಭವಿಸುತ್ತಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು, ಮದುವೆ ಮಾಡಲು ಬಹಳ ತೊಂದರೆ ಎದುರಿಸುತ್ತಿದ್ದಾರೆ. ರಾಜ್ಯದ 35 ಸಾವಿರ ದೇವಸ್ಥಾನಗಳು ಉಳಿಯಲು ಅರ್ಚಕರೇ ಕಾರಣ. ಅವರು ನಿತ್ಯವೂ ಬಂದು ಪೂಜೆ ಸಲ್ಲಿಸುತ್ತಿರುವುದರಿಂದ ದೇವಸ್ಥಾನಗಳು ಉಳಿದಿವೆ. ಇಲ್ಲದಿದ್ದರೆ ಒತ್ತುವರಿ ಆಗುತ್ತಿದ್ದವು ಎಂದು ತಿಳಿಸಿದರು.