ಇಳಕಲ್ಲ ತಾಲೂಕಿನ ಕರಡಿ ಗ್ರಾಮದ ಬಳಿ ಹಳ್ಳದ ರಸ್ತೆ ದಾಟಲು ಹರಸಾಹಸ ಪಡುತ್ತಿರುವ ಬೈಕ್ ಸವಾರ. 
ಜಿಲ್ಲೆ

ಕರಡಿ ಹಳ್ಳ ದಾಟಲು ಹರಸಾಹಸ

ದತ್ತಾತ್ರೇಯ ಪಿ ಕುಲಕರ್ಣಿ

ಇಳಕಲ್ಲ(ಗ್ರಾ): ತಾಲೂಕಿನ ಕರಡಿ ಗ್ರಾಮದ ಬಳಿ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿ ಮಂದಗತಿಯಲ್ಲಿ ಸಾಗಿದ್ದು, ಮಳೆಗಾಲದಲ್ಲಿ ತುಂಬಿ ಹರಿಯುವ ಹಳ್ಳವನ್ನು ದಾಟಲು ಜನರು ಹರೋಹರ ಎನ್ನುವಂತಾಗಿದೆ.

ಕರಡಿ ಗ್ರಾಮದ ಕಡೆಯಿಂದ ಜಾಲಕಮಲದಿನ್ನಿ, ಬೇಕಮಲದಿನ್ನಿ, ದಾಸಬಾಳ, ಪಾಲ್ತಿ ಮುಂತಾದ ಗ್ರಾಮಗಳಿಗೆ ಹೋಗಬೇಕಾದರೆ ಮಹಿಳೆಯರು ಮತ್ತು ಮಕ್ಕಳು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲಿ ಮಳೆ ಬಂದರಂತೂ ಸಂಚಾರದ ಸಂಕಟ ಹೇಳತೀರದಾಗಿದೆ. ದೊಡ್ಡ ದೊಡ್ಡ ವಾಹನಗಳನ್ನು ಪರ್ಯಾಯ ರಸ್ತೆಯಲ್ಲಿ ಚಾಲಕರು ಅಷ್ಟಿಷ್ಟು ಧೈರ್ಯ ಮಾಡಿ ಸಂಚರಿಸುತ್ತಾರೆ.

ದ್ವಿಚಕ್ರ ವಾಹನಗಳ ಸವಾರರು ಕೈಯಲ್ಲಿ ಹಿಡಿದುಕೊಂಡೇ ಹಳ್ಳ ದಾಟುವ ಸ್ಥಿತಿ ಇದೆ. ಈಗ ಸುರಿಯುತ್ತಿರುವ ಮಳೆ ನೀರಿನ ಜೊತೆಗೆ ಕಾಲುವೆ ನೀರು ಸಹ ಈ ಹಳ್ಳದತ್ತ ಬರುತ್ತಿದ್ದು, ಇಲ್ಲಿನ ಗ್ರಾಮಸ್ಥರಿಗೆ ನುಂಗಲಾರದ ತುತ್ತಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನ ಹರಿಸಿ ಸೇತುವೆ ಕಾಮಗಾರಿ ಕೂಡಲೇ ಮುಗಿಸುವತ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.