ಮೈಸೂರು: ಬಿಜೆಪಿ ಕರೆಯಂತೆ ಪ್ರತಿ ಗ್ರಾಮ, ಬೂತ್‌ಗಳಲ್ಲಿ ‘ಮತ್ತೊಮ್ಮೆ ನರೇಂದ್ರ ಮೋದಿ’ ಎಂಬ ಸಂದೇಶವನ್ನು ಗೋಡೆಗಳಲ್ಲಿ ಬರೆಯುವುದರ ಮೂಲಕ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಲು ನಾವೆಲ್ಲರೂ ಒಕ್ಕೊರಲಿನಿಂದ ಹೋರಾಟ ಮಾಡಬೇಕಿದೆ ಎಂದು ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಕಾರ್ಯಕರ್ತರಿಗೆ ಸಲಹೆ ನೀಡಿದರು.
ಬಿಜೆಪಿ ಗ್ರಾಮಾಂತರ ವಿಭಾಗದಿಂದ ಪಕ್ಷದ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಗಾವ್ ಚಲೋ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಕಾರ್ಯಕ್ರಮದ ಸಂಚಾಲಕರು ಹಾಗೂ ಸಹ ಸಂಚಾಲಕರನ್ನು ಉದ್ದೇಶಿಸಿ ಅವರು ಮಾತನಾಡಿದರು.
ತಾಲೂಕಿನಲ್ಲಿರುವ ಪ್ರತಿ ಗ್ರಾಮದಲ್ಲಿ ಕಾಯಂಗೊಳ್ಳದೆ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಪೋಸ್ಟ್‌ಮ್ಯಾನ್‌ಗಳು, ಆಶಾ ಕಾರ್ಯಕರ್ತರು ಸೇರಿದಂತೆ ಇತರರನ್ನು ಭೇಟಿಯಾಗಿ ಅವರ ಸಮಸ್ಯೆ ಆಲಿಸಬೇಕು. ಅಲ್ಲದೆ ಗ್ರಾಮದ ಯಜಮಾನರು, ವಿವಿಧ ಸಂಘ ಸಂಸ್ಥೆಗಳು, ಮುಖಂಡರನ್ನು ಭೇಟಿಯಾಗಿ ಬೆಂಬಲ ವ್ಯಕ್ತಪಡಿಸುವಂತೆ ಕೋರಬೇಕು ಎಂದು ಹೇಳಿದರು.
ಹಾಗೆಯೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾವೆಲ್ಲರೂ ಕಾರ್ಯಪ್ರವೃತ್ತರಾಗುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕು. ಈ ಮೂಲಕ ಮತ್ತೊಮ್ಮೆ ನಮ್ಮ ದೇಶದ ಪ್ರಧಾನ ಸೇವಕರಾಗಿ ಕರ್ತವ್ಯ ನಿರ್ವಹಿಸಲು ಮೋದಿ ಅವರನ್ನು ಬೆಂಬಲಿಸಬೇಕು ಎಂದು ಕೋರಿದರು.
ಅಭಿಯಾನದ ಸಂಚಾಲಕ ರಮೇಶ್‌ಕುಮಾರ್, ಸಹ ಸಂಚಾಲಕರಾದ ದಾಸಯ್ಯ, ಸಿ.ಎಂ ಮಹದೇವಯ್ಯ, ವಿವಿಧ ತಾಲೂಕುಗಳು ಬಿಜೆಪಿ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಸಭೆಯಲ್ಲಿ ಭಾಗವಹಿಸಿದ್ದರು.