ಜಿಲ್ಲೆ

ಅಂಪಾರು ಸಹಕಾರಿ ಸಂಘದ ವಿರುದ್ಧ ಪ್ರತಿಭಟನೆ

ಇಂದಿರಾ ಎನ್ ಕೆ

ವಿಜಯವಾಣಿ ಸುದಿಜಾಲ ಸಿದ್ದಾಪುರ

ಅಂಪಾರು ಸಹಕಾರಿ ವ್ಯವಸಾಯಿಕ ಸಂಘದ ವಾರ್ಷಿಕ ಲೆಕ್ಕಪರಿಶೋಧನಾ ವರದಿಯಲ್ಲಿ 3.95 ಕೋಟಿ ರೂ. ಹಣದ ದುರುಪಯೋಗವಾಗಿರುವುದು ಬೆಳಕಿಗೆ ಬಂದಿದ್ದು, ಈ ಕುರಿತು ಸಂಘದ ಕಚೇರಿ ಮುಂದೆ ಸ್ವಾಭಿಮಾನಿ ಸಹಕಾರಿಗಳ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ವಕೀಲ ಉಮೇಶ ಶೆಟ್ಟಿ ಶಾನ್ಕಟ್ಟು ಮಾತನಾಡಿ, ಮಹಾಸಭೆಯ ನಿರ್ಣಯ ತಿದ್ದಲಾಗಿದ್ದು, ಕೃತ್ಯ ನಡೆಸಿದವರ ವಿರುದ್ಧ ಕೂಡಲೇ ತನಿಖೆಯಾಗಬೇಕು. ಮೂರು ವರ್ಷಗಳಿಂದ ಸಂಘದ ಮಹಾಸಭೆಯಲ್ಲಿ ಹಣದ ದುರುಪಯೋಗ ಹಾಗೂ ಆಡಳಿತ ವೈಫಲ್ಯದ ವಿರುದ್ಧ ಧ್ವನಿ ಎತ್ತುತ್ತಾ ಬಂದಿರುವುದರ ಪರಿಣಾಮ ಈ ಬಾರಿ ಲೆಕ್ಕಪರಿಶೋಧನಾ ವರದಿಯಲ್ಲಿ ಹಣದ ದುರುಪಯೋಗ ಬೆಳಕಿಗೆ ಬಂದಿದೆ ಎಂದರು.

ಸಂಘದ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಳಿಕ ಮಾತನಾಡಿದ ಕೆ.ಪ್ರದೀಪಕುಮಾರ ಶೆಟ್ಟಿ ಗುಡಿಬೆಟ್ಟು, 3.95 ಕೋಟಿ ರೂ. ಹಣ ಅಸಲು ಆಗಿದ್ದು, ಬಡ್ಡಿ ಸಹಿತ ಒಟ್ಟು 8 ಕೋಟಿ ರೂ.ಗೂ ಅಧಿಕ ಅವ್ಯವಹಾರ ನಡೆದಿದೆ. ಸಂಘದ ಅವ್ಯವಹಾರದ ಬಗ್ಗೆ ಕಾನೂನಿನ ಹೋರಾಟ ಮುಂದುವರಿಸಲಾಗುವುದು ಎಂದರು.

ಸ್ವಾಭಿಮಾನಿ ಸಹಕಾರಿಗಳ ನೇತೃತ್ವ ವಹಿಸಿದ ನವೀನ್ ಶೆಟ್ಟಿ ಶಾನ್ಕಟ್ಟು ಮತ್ತು ಉದಯಕುಮಾರ ಶೆಟ್ಟಿ ಮೂಡುಬಗೆ ಮಾತನಾಡಿದರು. ಶಂಕರನಾರಾಯಣ ವೃತ್ತನೀರಿಕ್ಷಕ ಜಯರಾಮ ಗೌಡ, ಉಪನೀರಿಕ್ಷಕ ನಾಸೀರ್ ಹುಸೇನ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ನಿರ್ವಹಿಸಲಾಯಿತು.

ಸಂಘದ ಚುನಾವಣೆ ಮುಂದೂಡಿಕೆ

ಸಂಘದ ಅವ್ಯಹಾರದ ಬಗ್ಗೆ ಸಮಗ್ರ ತನಿಖೆಗೆ ಆಗ್ರಹಿಸಿ, ವಿಶೇಷ ಮಹಾಸಭೆ ನಡೆಸಬೇಕು. ತನಿಖೆ ನಡೆಯುವ ತನಕ ಸಂಘದ ಚುನಾವಣೆ ಮುಂದೂಡಬೇಕು ಎಂದು ಆಗ್ರಹಿಸಿ ಸಂಘದ ಅಧ್ಯಕ್ಷ ಕೆ.ಮೋಹನ್ ವೈದ್ಯ ಹಾಗೂ ಪ್ರಭಾರ ಮುಖ್ಯ ಕಾರ್ಯನಿರ್ವಹರ್ಣಾಧಿಕಾರಿ ಪ್ರವೀಣ್‌ಕುಮಾರ ಶೆಟ್ಟಿ ಅವರಿಗೆ ಮನವಿ ನೀಡಿದರು.