ಮೈಸೂರು: ಇತ್ತೀಚಿನ ದಿನಗಳಲ್ಲಿ ಕನ್ನಡಪರ ಸಂಘಟನೆಗಳು ಹುಟ್ಟಿಕೊಂಡರೂ ನಿರ್ದಿಷ್ಠ ಗುರಿ ಇಲ್ಲದೇ ಕೆಲ ವರ್ಷಗಳಲ್ಲಿ ಅವುಗಳು ನಾಪತ್ತೆಯಾಗಿ ಬಿಡುತ್ತಿವೆ ಎಂದು ಶಾಸಕ ಜಿ.ಟಿ.ದೇವೇಗೌಡ ಬೇಸರ ವ್ಯಕ್ತಪಡಿಸಿದರು.
ನಗರದ ರೋಟರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಘಟನೆಗಳ ಹೋರಾಟಗಳಿಗೆ ಅದರದ್ದೇ ಅದ ಮಹತ್ವವಿತ್ತು. ಆದರೆ ಅಂತಹ ಮಹತ್ವ ಈಗ ಕಡಿಮೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಕನ್ನಡಪರ ಸಂಘಟನೆಗಳು ಹುಟ್ಟಿಕೊಳ್ಳುತ್ತವೆ. ಆದರೆ ನಿರ್ಧಿಷ್ಟ ಗುರಿ ಇಲ್ಲದೆ ಕೆಲ ವರ್ಷಗಳಲ್ಲೇ ನಾಪತ್ತೆಯಾಗಿ ಬಿಡುತ್ತವೆ ಎಂದರು.
ಯಾವುದೇ ಸಂಘಟನೆಗಳು ಹೋರಾಟಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಅದರ ಸಾಧಕ ಬಾಧಕಗಳನ್ನು ಆಲೋಚಿಸಿ ಮುನ್ನುಗ್ಗಬೇಕು. ಹೋರಾಟಗಳು ಯಶಸ್ವಿಯಾದಲ್ಲಿ ಸಂಘಟನೆ ಬಲಿಷ್ಠವಾಗುತ್ತದೆ. ನಿರ್ಧಿಷ್ಟ ಗುರಿ, ಸದುದ್ದೇಶದಿಂದ ಹೋರಾಟಗಳು ನಡೆಯುತ್ತಿಲ್ಲ. ಈ ರೀತಿಯಾದಾಗ ಹೋರಾಟದ ಮೂಲ ಆಶಯ ಹಳ್ಳ ಹಿಡಿಯುತ್ತದೆ ಎಂದು ಹೇಳಿದರು.
ಕನ್ನಡ ಭಾಷೆಗೆ ವಿಶ್ವದಲ್ಲಿ ಮಹತ್ವದ ಸ್ಥಾನವಿದೆ. ಕನ್ನಡಕ್ಕಾಗಿ ಡಾ.ರಾಜಕುಮಾರ್, ವಾಟಾಳ್ ನಾಗರಾಜ್ ಹೋರಾಟ ಮಾಡಿದ್ದರೆ, ಕುವೆಂಪು, ಬೇಂದ್ರೆ, ಮಾಸ್ತಿ ಸೇರಿದಂತೆ ಅನೇಕ ಸಾಹಿತಿಗಳು ಕನ್ನಡವನ್ನು ಗಟ್ಟಿಗೊಳಿಸಿದ್ದಾರೆ. ಎಲ್ಲರ ಪರಿಶ್ರಮದಿಂದ ಇಂದು ಸ್ವಲ್ಪವಾದರೂ ಕನ್ನಡ ಉಳಿದಿದೆ. ಇದನ್ನು ನಿಮ್ಮಂತಹ ಸಂಘಟನೆಗಳು ಮುಂದುವರಿಸಿಕೊಂಡು ಹೋಗಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಮಾತನಾಡಿ, ಕನ್ನಡಪರ ಹೋರಾಟ ಮಾಡುವವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದರೆ ಅವರ ನೈತಿಕ ಸ್ಥೈರ್ಯ ಕುಗ್ಗುತ್ತದೆ. ಹೀಗಾದಲ್ಲಿ ಮುಂದೆ ಕನ್ನಡ ನೆಲ, ಜಲದ ಪರವಾಗಿ ಹೋರಾಟ ಮಾಡುವವರು ಯಾರು? ಎಂದು ಪ್ರಶ್ನಿ ಮೂಡುತ್ತದೆ. ಹಾಗಾಗಿ ಕನ್ನಡಪರ ಹೋರಾಟದಲ್ಲಿ ಭಾಗವಹಿಸಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಗಳಿಗೆ ಅಲೆಯುತ್ತಿರುವ ಹೋರಾಟಗಾರರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ವಾಪಸ್ ಪಡೆಯುವಂತೆ ಸದನದಲ್ಲಿ ಹೋರಾಟ ನಡೆಸುತ್ತೇನೆ ಎಂದು ಹೇಳಿದರು.
ಸಂಘದ ಅಧ್ಯಕ್ಷ ಎಂ.ಲಿಂಗರಾಜು, ಕಾರ್ಯದರ್ಶಿ ಕೆ.ಆರ್.ಚರಣ್ ರಾಜ್, ಉಪಾಧ್ಯಕ್ಷರಾದ ಎಂ.ಮಲ್ಲೇಶ್, ಆನಂದ್‌ಕುಮಾರ್‌ಗೌಡ, ಖಜಾಂಚಿ ಮಹದೇವಸ್ವಾಮಿ, ಮಾನವ ಹಕ್ಕು ಸಮಿತಿಯ ಅಧ್ಯಕ್ಷ ಬಿ.ಪಿ.ಸುಶೀಲಾ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಇದ್ದರು.