ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‌ನಲ್ಲಿ ಎಲ್ಲಿಯೂ ಷರತ್ತು ಉಲ್ಲೇಖಿಸಿಲ್ಲ. ಗ್ಯಾರಂಟಿಗಳ ಜಾರಿಗಾಗಿ ಜೂನ್ 1ರವರೆಗೆ ಕಾಯುತ್ತೇವೆ. ಅಂದಿನಿಂದಲೇ ಗ್ಯಾರಂಟಿ ಭಾಗ್ಯಗಳನ್ನು ಯಾವುದೇ ಷರತ್ತುಗಳಿಲ್ಲದೆ ಜಾರಿಗೊಳಿಸಬೇಕು. ಇಲ್ಲವಾದರೆ ದೊಡ್ಡ ಮಟ್ಟದ ಹೋರಾಟ ನಡೆಸಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ ನೀಡಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ರಾಜ್ಯಗಳ ಚುನಾವಣೆಯಲ್ಲಿಯೂ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಮೂಲಕ ಮತ ಬೇಟೆ ನಡೆಸಿದೆ. ಈ ಸಂಬಂಧ ಬಿಜೆಪಿ ಎಚ್ಚೆತ್ತುಕೊಂಡಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಈ ಫಲಿತಾಂಶ ಲೋಕಸಭಾ ಚುನಾವಣೆ ಮೇಲೆ ಪ್ರಭಾವ ಬೀರಲ್ಲ. ದೇಶಕ್ಕೆ ಎಂತಹ ನಾಯಕ ಬೇಕು ಅನ್ನೋದು ಕನ್ನಡಿಗರಿಗೆ ಗೊತ್ತು ಎಂದರು.
ಆದಾಯದ ಆಧಾರದ ಮೇಲೆ ಖರ್ಚು ಮಾಡಬೇಕು ಎಂಬ ನಿಯಮವನ್ನು ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ವಿಧಾನಸಭೆಯಲ್ಲಿ ಜಾರಿಗೆ ತಂದಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರಿಗೆ ರಾಜ್ಯದ ಅರ್ಥವ್ಯವಸ್ಥೆಯ ಅರಿವಿದ್ದರೂ ಉಚಿತ ಘೋಷಣೆ ಮಾಡಿದ್ದಾರೆ. ಇಂತಹ ಉಚಿತಗಳ ಮೂಲಕ ಮುಂದಿನ ತಲೆಮಾರನ್ನು ಅಪಾಯಕ್ಕೆ ತಳ್ಳಬೇಡಿ ಎಂದು ಹೇಳಿದರು.
ಮತದಾರರು ಈ ಬಾರಿ ಕಾಂಗ್ರೆಸ್‌ಗೆ ಮತ ಹಾಕಿಲ್ಲ. ಐದು ಗ್ಯಾರಂಟಿ ಉಚಿತಗಳನ್ನು ನೋಡಿ ಮತ ಹಾಕಿದ್ದಾರೆ. ನಾವು ಸೋತಿದ್ದೇವೆ, ಹೊರತು ಸತ್ತಿಲ್ಲ. ನಿಮಗೆ ಜನ ಬೆಂಬಲ ಸಿಕ್ಕಿದೆ. ಕೊಟ್ಟ ಭರವಸೆ ಈಡೇರಿಸುವಂತೆ ತಾಕೀತು ಮಾಡಿದರು.
ಹಾಗೆಯೇ ನಾವು ಸಹ ವಿರೋಧ ಪಕ್ಷವಾಗಿ ಜನರ ಪ್ರತಿನಿಧಿಗಳಾಗಿದ್ದು, ಜನರ ಆಶೋತ್ತರಗಳ ಪರವಾಗಿ ಹೋರಾಟ ಮಾಡುತ್ತೇವೆ. ಕಾಂಗ್ರೆಸ್ ಇದುವರೆವಿಗೂ ಎಲ್ಲೆಲ್ಲಿ ಇಂತಹ ಉಚಿತಗಳನ್ನು ಘೋಷಿಸಿ ಏನು ಮಾಡಿದೆ ಎಂಬುದು ಗೊತ್ತಿದೆ. ರಾಜಸ್ಥಾನದಲ್ಲಿ ಇದೇ ರೀತಿ ಹೇಳಿ ಇವತ್ತಿನವರೆಗೆ ಮಾಡಿಲ್ಲ ಎಂದರು.