ನರಗುಂದ ಲೋಕೋಪಯೋಗಿ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಡಾ.ಸಂಗಮೇಶ ಕೊಳ್ಳಿಯವರ ಮಾತನಾಡಿದರು. ಬಸವರಾಜ ಸಾಬಳೆ, ವಿಜಯ ಕುಲಕರ್ಣಿ, ಎಸ್.ಬಿ. ಜೋಗಣ್ಣವರ, ಈರಬಸಪ್ಪ ಹೂಗಾರ, ವಿಠ್ಠಲ ಜಾಧವ, ಚನ್ನು ನಂದಿ ಇತರರಿದ್ದರು. 
ಜಿಲ್ಲೆ

ಪುತ್ಥಳಿ ನಿರ್ಮಾಣಕ್ಕೆ ಜಾಗ ಕೊಡದಿದ್ದರೆ ಹೋರಾಟ

ಸೋಮನಾಥ ರೆಡ್ಡಿ

ನರಗುಂದ: ಪಟ್ಟಣದಲ್ಲಿ ಜು.21 ರಂದು ಆಚರಿಸಲಾಗುವ 44ನೇ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರದಲ್ಲಿ ತಾಲೂಕು ಮಟ್ಟದ ವಿವಿಧ ರೈತಪರ, ಕನ್ನಡಪರ ಸಂಘಟನೆಗಳ ಮುಖಂಡರ ಪೂರ್ವಭಾವಿ ಸಭೆ ಜರುಗಿತು.

ರೈತಸಂಘದ ಜಿಲ್ಲಾಧ್ಯಕ್ಷ ಬಸವರಾಜ ಸಾಬಳೆ ಮಾತನಾಡಿ, ನರಗುಂದ ಬಂಡಾಯದಲ್ಲಿ ಮಡಿದ ಹುತಾತ್ಮ ರೈತನ ಸ್ಮಾರಕ ಭವನ, ಪುತ್ಥಳಿ ನಿರ್ಮಾಣಕ್ಕೆ ಜು.21 ರೊಳಗಾಗಿ ನಿವೇಶನ ನೀಡದಿದ್ದರೆ ನರಗುಂದದಲ್ಲಿ ಪ್ರತ್ಯೇಕ ರಾಜ್ಯದ ಘೋಷಣೆ ಹಾಕಲಾಗುತ್ತೆ ಎಂದರು.

ಕಳಸಾ ಬಂಡೂರಿ ಹೋರಾಟಗಾರ ವಿಜಯ ಕುಲಕರ್ಣಿ ಮಾತನಾಡಿ, ಇಡೀ ರೈತ ಕುಲಕ್ಕೆ ಒಳಿತಾಗಲೆಂದು 1980ರಲ್ಲಿ ಚಿಕ್ಕನರಗುಂದದ ಯುವರೈತ ವೀರಪ್ಪ ಕಡ್ಲಿಕೊಪ್ಪ ಹುತಾತ್ಮರಾಗಿದ್ದಾರೆ. ಖಾಸಗಿಯವರ ಜಮೀನಿನಲ್ಲಿ 1981 ರಲ್ಲಿ ಹುತಾತ್ಮ ರೈತ ವೀರಪ್ಪ ಕಡ್ಲಿಕೊಪ್ಪರ ಅವರ ವೀರಗಲ್ಲು ನಿರ್ಮಿಸಲಾಗಿತ್ತು. ಪ್ರತಿಯೊಬ್ಬ ರೈತರು ಅಹಂಭಾವನೆ ತೊರೆದು ಹುತಾತ್ಮ ರೈತನ ಪುತ್ಥಳಿ ನಿರ್ಮಾಣದ ಹೋರಾಟಕ್ಕೆ ಅಣಿಯಾಗಬೇಕಿದೆ ಎಂದರು.

ಡಾ. ಸಂಗಮೇಶ ಕೊಳ್ಳಿಯವರ ಮಾತನಾಡಿ, ನರಗುಂದ ಹಳೇ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಹುತಾತ್ಮ ರೈತ ವೀರಪ್ಪ ಕಡ್ಲಿಕೊಪ್ಪರ ಅವರ ಪುತ್ಥಳಿ ನಿರ್ಮಿಸಲು ವೈಯಕ್ತಿಕವಾಗಿ 1ಲಕ್ಷ ರೂ. ಕೊಡುತ್ತೇನೆ. ಕೃಷಿ ಇಲಾಖೆ ಬಳಿಯಿರುವ ಹುತಾತ್ಮ ರೈತನ ವೀರಗಲ್ಲು, ಸ್ಮಾರಕ ಭವನ ನಿರ್ಮಾಣಕ್ಕೆ ಸರ್ಕಾರ ಉಚಿತ ನಿವೇಶನ ಕೊಡದಿದ್ದರೆ 10 ಗುಂಟೆ ಜಾಗವನ್ನು ನಾನೇ ಉಚಿತವಾಗಿ ಕೊಡುತ್ತೇನೆ. ಉತ್ತರ ಕರ್ನಾಟಕದ ಪ್ರತಿಯೊಂದು ನೀರಾವರಿ ಯೋಜನೆಗಳಿಗೆ ಸಕಾರ್ರ್ರ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದರು.

ಎಸ್.ಬಿ. ಜೋಗಣ್ಣವರ, ಈರಬಸಪ್ಪ ಹೂಗಾರ, ವಿಠ್ಠಲ ಜಾಧವ, ಚನ್ನು ನಂದಿ ಮಾತನಾಡಿದರು. ನರಗುಂದ ಹಳೇ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಹುತಾತ್ಮ ರೈತನ ಪುತ್ಥಳಿ ನಿರ್ಮಿಸುವುದು. ಕೃಷಿ ಇಲಾಖೆ ಹತ್ತಿರವಿರುವ ನೀರಾವರಿ ಇಲಾಖೆಯ 2 ಎಕರೆ ಜಮೀನನ್ನು ಸರ್ಕಾರ ನೀಡಿದರೆ ಅದರಲ್ಲಿ ರೈತ ಭವನ ಹಾಗೂ ಪುತ್ಥಳಿ ನಿರ್ಮಿಸುವುದು. ಕೋರ್ಟ್ ಸರ್ಕಲ್ ಹುಬ್ಬಳ್ಳಿ, ವಿಜಯಪುರ ರಸ್ತೆಗೆ ಹೊಂದಿಕೊಂಡಿರುವ ಒಂದೂವರೆ ಗುಂಟೆ ಖಾಸಗಿ ನಿವೇಶನದಲ್ಲಿ ವೀರಗಲ್ಲು ಅಭಿವೃದ್ಧಿಪಡಿಸಲು ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.