ತಿ.ನರಸೀಪುರ ಪಟ್ಟಣದ ಕಬಿನಿ ಅತಿಥಿಗೃಹದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಎಂ.ರಮೇಶ್ ಮಾತನಾಡಿದರು. ಮಹದೇವಸ್ವಾಮಿ, ಮಹೇಶ್, ಚಿನ್ನಬುದ್ಧಿ, ನಂಜುಂಡೇಗೌಡ, ನಾಗರಾಜು ಇತರರು ಇದ್ದರು. 
ಜಿಲ್ಲೆ

ಪ್ರತ್ಯೇಕ ಸಂಘ ರಚನೆಗೆ ಅವಕಾಶ ಮಾಡಿಕೊಡದಿದ್ದಲ್ಲಿ ಹೋರಾಟ

ಅಭಿನಯ್ ಎಚ್.ಎಂ

ತಿ.ನರಸೀಪುರ: ಕಸಬಾ ಕೃಷಿ ಪತ್ತಿನ ಸಹಕಾರ ಸಂಘದಿಂದ ಕಿರಗಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳನ್ನು ಬಿಡುಗಡೆಗೊಳಿಸಿ ಪ್ರತ್ಯೇಕ ಸಹಕಾರ ಸಂಘ ರಚನೆಗೆ ಅವಕಾಶ ಮಾಡಿಕೊಡದಿದ್ದಲ್ಲಿ ಅಧಿಕಾರಿಗಳ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ರಮೇಶ್ ಎಚ್ಚರಿಕೆ ನೀಡಿದರು.

ಪಟ್ಟಣದ ಕಬಿನಿ ಅತಿಥಿ ಗೃಹದಲ್ಲಿ ಮಂಗಳವಾರ ಹೋರಾಟದ ಪೂರ್ವಭಾವಿಯಾಗಿ ಕರೆಯಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು, ಕಿರಗಸೂರು ಗ್ರಾಪಂ ವ್ಯಾಪ್ತಿಯಲ್ಲಿರುವ ಹುಣಸೂರು, ಬಿಲಿಗೆರೆಹುಂಡಿ, ಕಿರಗಸೂರು, ಕೂಡ್ಲೂರು, ಮನ್ಬೇಹುಂಡಿ ಹಾಗೂ ಡಣಾಯಕನಪುರ ಗ್ರಾಮಸ್ಥರು ನಿಯೋಜಿತ ಕೃಷಿ ಪತ್ತಿನ ಸಹಕಾರ ಸಂಘವನ್ನು ನೋಂದಣಿ ಮಾಡುವ ಸಂಬಂಧ ಸಭೆ ಸೇರಿ ಈಗಾಗಲೇ ಪ್ರವರ್ತಕರನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಅದಕ್ಕಾಗಿ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ 6 ಗ್ರಾಮಗಳನ್ನು ಬಿಡುಗಡೆಗೊಳಿಸುವಂತೆ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಆದೇಶ ನೀಡಿದ್ದಾರೆ. ಆದರೆ ಕಸಬಾ ಸಹಕಾರ ಸಂಘದ ಸಿಇಒ ಡಿ.ಎಂ.ಶಿವಕುಮಾರ್ ಸೇರಿದಂತೆ ಆಡಳಿತ ಮಂಡಳಿ ತಡೆಯಾಜ್ಞೆ ತರುವ ಮೂಲಕ ಸಂಘ ರಚನೆಗೆ ಅಡ್ಡಗಾಲು ಹಾಕಿ ರೈತರಿಗೆ ಅನ್ಯಾಯ ಮಾಡಲು ಹೊರಟಿದೆ ಎಂದು ಆರೋಪಿಸಿದರು.

ತಡೆಯಾಜ್ಞೆ ತರವಲ್ಲ: ಸಹಾಯಕ ನಿಬಂಧಕರು ಕೆಲ ಗ್ರಾಮಗಳನ್ನು ಬಿಡುಗಡೆಗೊಳಿಸುವಂತೆ ಆದೇಶ ನೀಡುತ್ತಿದ್ದಂತೆ ಕಸಬಾ ಸಂಘದ ಕಾರ್ಯಕಾರಿ ಮಂಡಳಿ ತಡೆಯಾಜ್ಞೆ ಕೋರಿ ಅರ್ಜಿ ಸಲ್ಲಿಸಿರುವುದು ಎಷ್ಟರ ಮಟ್ಟಿಗೆ ಸರಿ. ಇಂತಹವರು ರೈತರ ಪರವಾಗಿ ಕೆಲಸ ಮಾಡಲು ಸಾಧ್ಯವೇ ಎಂದು ರಮೇಶ್ ಕಿಡಿಕಾರಿದರು.

ಹುಣಸೂರು, ಕಿರಗಸೂರು, ಬಿಲಿಗೆರೆಹುಂಡಿ, ಕೂಡ್ಲೂರು, ಮನ್ನೇಹುಂಡಿ ಮತ್ತು ಡಣಾಯಕನಪುರ ಗ್ರಾಮಗಳಿಂದ ಷೇರು ಪಡೆದಿದ್ದೇವೆಯೇ ಹೊರತು ಬೇರೆ ಗ್ರಾಮಗಳಿಂದಲ್ಲ. ಹಾಗಾಗಿ ಪ್ರತ್ಯೇಕ ಸಹಕಾರ ಸಂಘದ ಅವಶ್ಯಕತೆ ಇದ್ದು ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಂಸದ ಸುನೀಲ್ ಬೋಸ್ ಹಾಗು ಎಂಎಲ್ಸಿ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗುವುದು. ಕೂಡಲೇ ಸಮಸ್ಯೆ ಸರಿಪಡಿಸದಿದ್ದಲ್ಲಿ ಹೋರಾಟದ ಮೂಲಕ ನಮ್ಮ ಹಕ್ಕು ಪಡೆಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕುರುಬರ ಸಂಘದ ತಾಲೂಕು ಅಧ್ಯಕ್ಷ ಎಂ.ಎಸ್.ಮಹದೇವಸ್ವಾಮಿ ಮಾತನಾಡಿ, ಡಣಾಯಕನಪುರದಿಂದ ಸಂಘಕ್ಕೆ ರೈತರು ಹೋಗಿ ಬರಲು 10 ಕಿ.ಮೀ. ಆಗಲಿದೆ ಎಂದರು.

ಸಭೆಯಲ್ಲಿ ಬಿಲಿಗೆರೆಹುಂಡಿ ನಂಜುಂಡೇಗೌಡ, ಡಣಾಯಕನಪುರ ಚಿನ್ನಬುದ್ದಿ, ಕೂಡ್ಲೂರು ಶಿವನಂಜು, ಗ್ರಾಪಂ ಸದಸ್ಯ ಬಿ.ಮಹದೇವಸ್ವಾಮಿ, ಮಹೇಶಾಚಾರಿ, ರಾಜೀವ, ಬಿಜೆಪಿ ಮಹದೇವಸ್ವಾಮಿ, ಗ್ರಾ.ಪಂ. ಮಾಜಿ ಸದಸ್ಯ ಮಹದೇವ, ಮಹದೇವನಾಯಕ, ಏಳುಮಲೆ ಮಂಜು, ಮನ್ನೇಹುಂಡಿ ಚಿನ್ನಸ್ವಾಮಿ, ಶಿವರಾಜು, ಕಿರಗಸೂರು ಪುಟ್ಟರಾಜು, ಸೋಮು, ಡಣಾಯಕನಪುರ ಮಹದೇವಸ್ವಾಮಿ, ಕೂಡ್ಲೂರು ದೇವರಾಜು, ಬಿ.ಸಿದ್ದರಾಜು, ಕಿರಗಸೂರು ಪುಟ್ಟರಾಜು, ಇತರರು ಇದ್ದರು.