ಜಿಲ್ಲೆ

ನಮ್ಮ ಹಕ್ಕುಗಳಿಗಾಗಿ ಸಂಘಟಿತರಾಗಿ ಹೋರಾಡಿ

ಲಲಾಟಾಕ್ಷ ಎಸ್

ಮದ್ದೂರು: ವಿಶ್ವಕರ್ಮರು ಜಗತ್ತನ್ನೇ ನಿರ್ಮಿಸುತ್ತಾರೆ. ಆದರೆ ಅವರಿಗೆ ಇಂದು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಸೂಕ್ತ ಸ್ಥಾನಮಾನಗಳು ಸಿಗದಿರುವುದು ಬೇಸರ ತಂದಿದೆ ಎಂದು ಶಹಾಪೂರ ಏಕದಂಡಗಿ ಮಠದ ಶ್ರೀ ಕಳಸ್ತೇ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.


ಪಟ್ಟಣದ ತಾಲೂಕು ಕಚೇರಿಯಲ್ಲಿ ಭಾನುವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ವಿಶ್ವಕರ್ಮ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಶ್ವಕರ್ಮರು ಸಮಾಜದ ಎಲ್ಲ ವರ್ಗದವರಿಗೂ ಅನುಕೂಲ ಕಲ್ಪಿಸುತ್ತಿದ್ದಾರೆ. ಆದರೆ ಇಂತಹ ಸಮಾಜವನ್ನು ಸರ್ಕಾರಗಳು ಮುಖ್ಯವಾಹಿನಿಗೆ ತರುವಲ್ಲಿ ಯಾವುದೇ ವಿಶೇಷ ಯೋಜನೆಗಳನ್ನು ರೂಪಿಸದಿರುವುದು ಸರಿಯಾದ ಕ್ರಮವಲ್ಲ ಎಂದು ಸರ್ಕಾರಗಳ ವಿರುದ್ಧ ಚಾಟಿ ಬೀಸಿದರು.


ವಿಶ್ವಕರ್ಮ ಸಮಾಜ ಮುಖಂಡರು ತಮ್ಮಲ್ಲಿರುವ ಭಿನ್ನಾಭಿಪ್ರಾಯ ಮರೆತು ಸಂಘಟಿತರಾಗಿ ಹೋರಾಟ ಮಾಡಿದಾಗ ಮಾತ್ರ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ವಿಶ್ವಕರ್ಮ ಜನಾಂಗದವರ ಸಮಸ್ಯೆ ಕುರಿತು ಜಿಲ್ಲಾ ಯುವ ಘಟಕದ ಅಧ್ಯಕ್ಷ ತೈಲೂರು ಆನಂದಚಾರಿ ವಿವರಿಸಿದರು.


ಅಭಿನಂದನೆ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿಶ್ವಕರ್ಮ ಜನಾಂಗದ ವೀರಭದ್ರಚಾರ್, ಪುಟ್ಟಸ್ವಾಮಿ, ಲಕ್ಷ್ಮಣಚಾರ್, ಶಿವರುದ್ರಚಾರ್, ಶ್ರೀನಿವಾಸ್, ಸ್ವಾಮಿ, ವಿಜಯ್ ವಿಶ್ವಕರ್ಮ, ರಾಜಣ್ಣ, ಸ್ವಾಮಿ, ಪುಟ್ಟರಾಜು ಅವರನ್ನು ಸನ್ಮಾನಿಸಲಾಯಿತು.


ಚಿಂತಕ ಶಿವನಂಜಪ್ಪ ವಿಶ್ವಕರ್ಮರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಯುವ ಘಟಕದ ಜಿಲ್ಲಾಧ್ಯಕ್ಷ ಆನಂದಚಾರಿ, ತಾಲೂಕು ಅಧ್ಯಕ್ಷ ನಗರಕೆರೆ ಬಸವಚಾರಿ, ಮಹಿಳಾ ಅಧ್ಯಕ್ಷೆ ಸುವರ್ಣ ಪ್ರಸಾದ್, ಗ್ರೇಡ್-2 ತಹಸೀಲ್ದಾರ್ ಸೋಮಶೇಖರ್, ಬಿಇಒ ಸಿ.ಎಚ್.ಕಾಳೀರಯ್ಯ ಮುಖಂಡರಾದ ಸಿದ್ದಪ್ಪಾಜಿ, ರವಿಪ್ರಸಾದ್ ಆಚಾರ್, ರವೀಂದ್ರ, ಶಿವಕುಮಾರ್, ನಾಗೇಶ್, ಗಣೇಶ್, ರವಿ ಆಚಾರ್ ಇದ್ದರು.