ಜಿಲ್ಲೆ

ಒಳಮೀಸಲಾತಿಗಾಗಿ ಹೋರಾಟ ಇಂದಿನಿಂದ

ಗಿರೀಶ ಸಗರ

ತಂಗಡಗಿ: ಯಾವುದೇ ಕುಂಟುನೆಪ ಹೇಳದೆ ಒಳಮೀಸಲಾತಿ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಅ.21 ರಿಂದ 30 ರವರೆಗೆ ಮುದ್ದೇಬಿಹಾಳ ತಾಲೂಕಿನಾದ್ಯಂತ ಬಹಿರಂಗ ಸಭೆ, ಹೋರಾಟ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಮಾದಿಗ ದಂಡೋರ ಹೋರಾಟ ಸಮಿತಿಯ ಮುದ್ದೇಬಿಹಾಳ ತಾಲೂಕು ಅಧ್ಯ ತಿಪ್ಪಣ್ಣ ದೊಡಮನಿ ಹೇಳಿದರು.

ಈ ಕುರಿತು ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಅ.21 ರಂದು ಬೆಳಗ್ಗೆ 10 ಗಂಟೆಗೆ ತಂಗಡಗಿ ಗ್ರಾಮದ ದುರ್ಗಾದೇವಿ ದೇವಸ್ಥಾನದಿಂದ ಹೋರಾಟಕ್ಕೆ ಚಾಲನೆ ನೀಡಲಾಗುತ್ತದೆ.

ಮುದ್ದೇಬಿಹಾಳ ತಾಲೂಕಿನಾದ್ಯಂತ ಗ್ರಾಪಂಗಳ ವ್ಯಾಪ್ತಿಯಲ್ಲಿ ಹೋರಾಟ ನಡೆಯಲಿದೆ. 30ರಂದು ಮುದ್ದೇಬಿಹಾಳ ಪಟ್ಟಣದಲ್ಲಿ ಬೃಹತ್​ ಪ್ರತಿಭಟನೆ ನಡೆಸಿ ತಹಸೀಲ್ದಾರ್​ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸುವ ಮೂಲಕ ಸಾಂಕೇತಿಕ ಹೋರಾಟ ಸಮಾರೋಪಗೊಳಿಸಲಾಗುತ್ತದೆ ಎಂದರು.

ತಂಗಡಗಿಯಲ್ಲಿ ಪ್ರಾರಂಭಗೊಳ್ಳುವ ರ್ಯಾಲಿ ಅ.21 ರಂದು ಸಂಜೆ ಆಲೂರು ಗ್ರಾಪಂನಲ್ಲಿ, 22 ರಂದು ರಕ್ಕಸಗಿ, ಬಿಜ್ಜೂರ ಪಂಚಾಯಿತಿ ಮಾರ್ಗವಾಗಿ ಸಂಚರಿಸಿ ನಾಲತವಾಡ ಪಪಂನಲ್ಲಿ, 23ರಂದು ನಾಗಬೇನಾಳ, ಅಡವಿಸೋಮನಾಳ ಪಂಚಾಯಿತಿ ಮಾರ್ಗವಾಗಿ ಸಂಚರಿಸಿ ನಾಗರಬೆಟ್ಟ ಗ್ರಾಪಂನಲ್ಲಿ, 24ರಂದು ಹಿರೇಮುರಾಳ, ಕವಡಿಮಟ್ಟಿ ಗ್ರಾಪಂ ಮಾರ್ಗವಾಗಿ ಸಂಚರಿಸಿ ಕೋಳೂರ ಗ್ರಾಪಂನಲ್ಲಿ, 25ರಂದು ಕುಂಟೋಜಿ, ಇಂಗಳಗೇರಿ ಗ್ರಾಪಂ ಮಾರ್ಗವಾಗಿ ಸಂಚರಿಸಿ ಬಾವೂರ ಗ್ರಾಪಂನಲ್ಲಿ, 26ರಂದು ಕೊಣ್ಣೂರ, ಮಡಿಕೇಶ್ವರ ಗ್ರಾಪಂ ಮಾರ್ಗವಾಗಿ ಸಂಚರಿಸಿ ಢವಳಗಿ ಗ್ರಾಪಂನಲ್ಲಿ, 27ರಂದು ಹಡಲಗೇರಿ, ಯರಝರಿ ಗ್ರಾಪಂ ಮಾರ್ಗವಾಗಿ ಸಂಚರಿಸಿ ಕಾಳಗಿ ಗ್ರಾಪಂನಲ್ಲಿ, 28ರಂದು ಯಲಗೂರ, ಹುಲ್ಲೂರ ಗ್ರಾಪಂ ಮಾರ್ಗವಾಗಿ ಸಂಚರಿಸಿ ಬಸರಕೋಡ ಗ್ರಾಪಂನಲ್ಲಿ, 29ರಂದು ರೂಢಗಿ ಗ್ರಾಪಂ ಮಾರ್ಗವಾಗಿ ಸಂಚರಿಸಿ ಬಿದರಕುಂದಿ ಗ್ರಾಪಂನಲ್ಲಿ ವಾಸ್ತವ್ಯ ಮಾಡಲಿದೆ. 30ರಂದು ಬೆಳಗ್ಗೆ 10ಕ್ಕೆ ಮುದ್ದೇಬಿಹಾಳ ಪಟ್ಟಣದ ಅಂಬೇಡ್ಕರ್​ ವೃತ್ತದಿಂದ ಸಂಗೊಳ್ಳಿ ರಾಯಣ್ಣ, ವಾಲ್ಮೀಕಿ ವೃತ್ತ, ದ್ಯಾಮವ್ವನ ಗುಡಿ, ಇಂದಿರಾ, ಬಸವೇಶ್ವರ, ರಾಣಿ ಚನ್ನಮ್ಮ ವೃತ್ತ ಮಾರ್ಗವಾಗಿ ಹುಡ್ಕೋದಲ್ಲಿರುವ ಶಾಸಕರ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಿದ ನಂತರ ತಹಸೀಲ್ದಾರ್​ ಕಚೇರಿಗೆ ಆಗಮಿಸಿ ಅಲ್ಲಿ ಬೃಹತ್​ ಬಹಿರಂಗ ಸಭೆ ನಡೆಸಿ ತಹಸೀಲ್ದಾರ್​ಗೆ ಮನವಿ ಸಲ್ಲಿಸಲಾಗುತ್ತದೆ ಎಂದರು.