ಇಂಡಿ: ಹೊಸದಾಗಿ ಅಸ್ತಿತ್ವಕ್ಕೆ ಬಂದ ಜಿಲ್ಲಾ ಹೋರಾಟ ಸಮಿತಿ ಪದಾಧಿಕಾರಿಗಳು ಇಂಡಿ ಜಿಲ್ಲೆ ಮಾಡಬೇಕೆಂದು ಆಗ್ರಹಿಸಿ ಮಂಗಳವಾರ ಪ್ರತಿಭಟನೆ ನಡೆಸಿ ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆ ಮೆರವಣಿಗೆ ಪ್ರವಾಸಿಮಂದಿರದಿಂದ ಆರಂಭವಾಗಿ ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ಪ್ರಮುಖ ಬೀದಿಗಳಲ್ಲಿ ಹಾಯ್ದು ಮಿನಿ ವಿಧಾನಸೌಧ ತಲುಪಿತು.
ಹೋರಾಟ ಸಮಿತಿಯ ಅಧ್ಯಕ್ಷ ಜಟ್ಟೆಪ್ಪ ರವಳಿ ಮಾತನಾಡಿ, ಈಗಾಗಲೇ ಇಂಡಿಯ ಶಾಸಕ ಯಶವಂತರಾಯಗೌಡ ಪಾಟೀಲರು ಇಂಡಿ ಜಿಲ್ಲೆ ಮಾಡಬೇಕು ಆಗ್ರಹಿಸಿ ವಿಧಾನಸಭೆ ಕಲಾಪದಲ್ಲಿ ಮಾತನಾಡಿದ್ದಾರೆ. ಹೀಗಾಗಿ ಶಾಸಕರ ಬೆಂಬಲಾರ್ಥ ಇಂಡಿಯಲ್ಲಿ ಹಲವಾರು ಬಾರಿ ಪ್ರತಿಭಟನೆ ನಡೆದಿವೆ. ಅದಲ್ಲದೆ ಇಂಡಿಯಲ್ಲಿ 234ಕ್ಕೂ ಹೆಚ್ಚು ಸಂಘಟನೆಗಳಿದ್ದು ಅವರೆಲ್ಲರೂ ಹೋರಾಟ ಮಾಡಲು ನಿರ್ಧರಿಸಿದ್ದಾರೆ ಎಂದರು.
ಮುಖಂಡ ಇಲಿಯಾಸ ಬೋರಾಮಣಿ ಮಾತನಾಡಿ, ಸ್ವಾತಂತ್ರದ ನಂತರ ಇಂಡಿ ತಾಲೂಕಿನಲ್ಲಿ ನೀರಿಗಾಗಿ ಅನೇಕ ಹೋರಾಟಗಳು ನಡೆದಿವೆ. ಆದರೂ ಕೊನೆಯ ಭಾಗದವರೆಗೆ ನೀರು ಹರಿಯುತ್ತಿಲ್ಲ ಎಂದರು.
ಮುಖಂಡ ಪ್ರಶಾಂತ ಕಾಳೆ ಮಾತನಾಡಿ, ಇಂಡಿ ಜಿಲ್ಲಾ ಮಾಡಬೇಕೆಂದು ಪಕ್ಷಾತೀತ, ಜಾತ್ಯಾತೀತ ಹೋರಾಟ ನಡೆಯುತ್ತಿದೆ. ಪ್ರಸ್ತಾವನೆ ಮುಖ್ಯಮಂತ್ರಿಗಳ ಹತ್ತಿರವಿದ್ದು ಸರ್ಕಾರ ಪ್ರಸ್ತಾವನೆಗೆ ಬೆಂಬಲಿಸಬೇಕು ಎಂದು ಆಗ್ರಹಿಸಿದರು.
ಬ್ರಿಟಿಷರ ಕಾಲದಲ್ಲಿ ವಿಜಯಪುರ ಜಿಲ್ಲೆಯಲ್ಲಿ ಇಂಡಿ ಮತ್ತು ಬಾಗಲಕೋಟೆ ಉಪವಿಭಾಗವಿದ್ದವು. ಬಾಗಲಕೋಟ ಜಿಲ್ಲೆಯಾಗಿದ್ದು ಇಂಡಿ ಜಿಲ್ಲೆ ಮಾಡಬೇಕು. ಈಗಾಗಲೇ ಚಡಚಣ, ಆಲಮೇಲ, ದೇವರಹಿಪ್ಪರಗಿ ಮತ್ತು ಸಿಂದಗಿಯವರು ತಮ್ಮ ಕೆಲಸಗಳಿಗೆ ಇಂಡಿ ಉಪವಿಭಾಗಕ್ಕೆ ಬರುತ್ತಾರೆ ಎಂದರು.
ಜಾವೇದ ಮೋಮಿನ, ಹೋರಾಟ ಸಮಿತಿಯ ಉಪಾಧ್ಯಕ್ಷ ಭೀಮಣ್ಣ ಕವಲಗಿ, ತಾ.ಪಂ ಮಾಜಿ ಅಧ್ಯಕ್ಷ ಅಣ್ಣಪ್ಪ ಬಿದರಕೋಟಿ, ಬಿ.ಸಿ. ಸಾವಕಾರ, ನಿರ್ಮಲಾ ತಳಕೇರಿ, ಧರ್ಮರಾಜ ವಾಲಿಕಾರ ಮಾತನಾಡಿದರು.
ರಾಜು ಪಡಗಾನೂರ, ರಾಜು ಕುಲಕರ್ಣಿ, ಕೆಪಿಸಿಸಿ ಸದಸ್ಯ ಮಲ್ಲನಗೌಡ ಪಾಟೀಲ, ಸದಾಶಿವ ಪ್ಯಾಟಿ, ಶ್ರೀಕಾಂತ ಕುಡಿಗನೂರ, ಸತ್ತಾರ ಬಾಗವಾನ, ಭೀಮಾಶಂಕರ ಮೂರಮನ, ಮಹಿಬೂಬ ಅರಬ, ಮುನ್ನಾ ಡಾಂಗೆ, ಯಾಕುಬ ಮಾಶ್ಯಾಳಕರ, ರಾಯಿಸ್ ಅಷ್ಟೆಕರ, ಸುನಂದಾ ಬಿರಾದಾರ, ಚಂದ್ರಕಲಾ ಮೇಲಿನಕೇರಿ, ಬೌರಮ್ಮ ಗೌಡತಿ ಬಿರಾದಾರ ಇತರರಿದ್ದರು.