ಜಿಲ್ಲೆ

ಬರ ಅಧ್ಯಯನ ವರದಿ ಒಪ್ಪಿಸಿ ಹೋರಾಟ

Mysuru - Desk - Yashavanth Kumar N

ಪಾಂಡವಪುರ: ಮಳೆ ಅಭಾವದಿಂದ ಎದುರಾಗಿರುವ ಬರದಿಂದ ಬೆಳೆ ನಷ್ಟ ಉಂಟಾಗಿ ರೈತರು ಅನುಭವಿಸುತ್ತಿರುವ ಸಂಕಷ್ಟ ಅರಿವಿಗೆ ಬಂದಿದೆ. ಬರ ಅಧ್ಯಯನದ ಸಂಪೂರ್ಣ ವರದಿಯನ್ನು ಜೆಡಿಎಸ್ ವರಿಷ್ಠರಿಗೆ ತಲುಪಿಸಿ ಸೂಕ್ತ ಪರಿಹಾರಕ್ಕಾಗಿ ಹೋರಾಟ ಮಾಡಲಾಗುವುದು ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.

ಮೇಲುಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ ಜೆಡಿಎಸ್ ಮುಖಂಡರ ತಂಡದೊಂದಿಗೆ ಗುರುವಾರ ಬರ ಅಧ್ಯಯನ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಪಕ್ಷದ ಜಿಲ್ಲಾಧ್ಯಕ್ಷ ಡಿ.ರಮೇಶ್ ನೇತೃತ್ವದಲ್ಲಿ ಜಿಲ್ಲಾ ಜೆಡಿಎಸ್ ನಾಯಕರ ತಂಡ ಮಂಡ್ಯದ ಎಲ್ಲ ಕ್ಷೇತ್ರಗಳಲ್ಲೂ ಬರ ಅಧ್ಯಯನ ನಡೆಸಿ ರೈತರ ಸಮಸ್ಯೆ ಆಲಿಸಲಾಗಿದೆ. ಇದರ ವರದಿಯನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನೀಡಲಾಗುವುದು. ರಾಜ್ಯದ ಎಲ್ಲ ಜಿಲ್ಲೆಗಳ ವರದಿ ಆಧಾರದ ಮೇಲೆ ಜೆಡಿಎಸ್ ನಾಯಕರು ಮುಂದಿನ ಅಧಿವೇಶನದಲ್ಲಿ ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡುತ್ತಾರೆ ಎಂದರು.

ಡಿ.4 ರಿಂದ ನಡೆಯುವ ಅಧಿವೇಶನದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಬರ ನಿರ್ವಹಣೆಯಲ್ಲಿ ವಿಫಲರಾಗಿರುವ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡುತ್ತಾರೆ. ಅದೇ ರೀತಿ ಎಚ್.ಡಿ.ದೇವೇಗೌಡರು ಸಂಸತ್ ಅಧಿವೇಶನದಲ್ಲಿ ಕೇಂದ್ರದಿಂದ ಬರಬೇಕಾದ ಪರಿಹಾರದ ಮೊತ್ತದ ಬಿಡುಗಡೆ ಸಂಬಂಧ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡುತ್ತಾರೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬರ ನಿರ್ವಹಣೆಯಲ್ಲಿ ಎಲ್ಲ ವಿಭಾಗದಲ್ಲೂ ವಿಫಲವಾಗಿದ್ದು, ಈವರೆಗೆ ಬಿಡಿಗಾಸೂ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.

ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಮಾತನಾಡಿ, ಎನ್‌ಡಿಆರ್‌ಎಫ್ ಹಣ ಬಂದಿಲ್ಲವೆಂದು ಕೇಂದ್ರದ ವಿರುದ್ಧ ಬೊಟ್ಟು ಮಾಡಿ ತೋರಿಸುತ್ತಿರುವ ರಾಜ್ಯ ಸರ್ಕಾರ, ತನ್ನ ಪಾಲಿನ ಹಣವನ್ನು ಬರ ನಿರ್ವಹಣೆಗೆ ಏಕೆ ಬಳಸುತ್ತಿಲ್ಲ? ಒಬ್ಬೊಬ್ಬ ಸಚಿವರು ಒಂದೊಂದು ರೀತಿ ಬರ ನಷ್ಟದ ಬಗ್ಗೆ ಕೇಂದ್ರಕ್ಕೆ ವರದಿ ಸಲ್ಲಿಸುತ್ತಾರೆ. ರಾಜ್ಯ ಸರ್ಕಾರದ ಯಾವೊಬ್ಬ ಸಚಿವರಾಗಲಿ, ಅಧಿಕಾರಿಗಳಾಗಲಿ, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಸೇರಿದಂತೆ ಯಾರೊಬ್ಬರೂ ಬರ ಅಧ್ಯಯನಕ್ಕಾಗಿ ಒಬ್ಬನೇ ಒಬ್ಬ ರೈತನನ್ನು ಭೇಟಿ ಮಾಡಿ ಮಾತನಾಡಿಸಿಲ್ಲ. ರಾಜ್ಯ ಸರ್ಕಾರ ಎಕರೆಗೆ ಕನಿಷ್ಠ 25 ರಿಂದ 30 ಸಾವಿರ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಮಾಜಿ ಶಾಸಕ ಸುರೇಶ್‌ಗೌಡ ಮಾತನಾಡಿ, ಸರ್ಕಾರ ರೈತರಿಗೆ ಪೊಳ್ಳು ಆಶ್ವಾಸನೆ ನೀಡುತ್ತಿದೆ. ಈ ಸರ್ಕಾರ ಜನಪ್ರಿಯತೆಯ ಸ್ಕೀಂಗಳನ್ನು ನೀಡಿ ದಿವಾಳಿಯಾಗಿರುವ ವಿಚಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಚೆನ್ನಾಗಿ ಗೊತ್ತಿದೆ. ಆದರೆ ಅಧಿಕಾರಕ್ಕಾಗಿ ಸುಳ್ಳು ಹೇಳುತ್ತಿದ್ದಾರೆ ಎಂದು ದೂರಿದರು.
ಬರ ಅಧ್ಯಯನ ನಡೆಸಿದ ಜೆಡಿಎಸ್ ಮುಖಂಡರು ಬಳಿಕ ಮೇಲುಕೋಟೆಗೆ ತೆರಳಿ ಚೆಲುವನಾರಾಯಣಸ್ವಾಮಿ ದರ್ಶನ ಪಡೆದರು. ಸುದ್ದಿಗೋಷ್ಠಿಯಲ್ಲಿ ಶಾಸಕ ಎಚ್.ಟಿ.ಮಂಜು, ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ, ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಇತರರು ಇದ್ದರು.