ಬಿಡದಿ: ಮಹಿಳೆಯರ ಆರೋಗ್ಯದ ಮೂಲಕ ಕುಟುಂಬದ ಆರ್ಥಿಕ ಮತ್ತು ಸಾಮಾಜಿಕ ಸುಧಾರಣೆ ಸಾಧ್ಯ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸ್ವಸ್ಥ ನಾರಿ&ಸಶಕ್ತ ಪರಿವಾರ ಆರೋಗ್ಯ ಅಭಿಯಾನ ಹಾಗೂ ಉಚಿತ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಆರೋಗ್ಯವಂತ ತಾಯಿ ಕುಟುಂಬವನ್ನು ಬಲಪಡಿಸುತ್ತಾಳೆ. ಆರೋಗ್ಯವಂತ ಕುಟುಂಬ ಸಮಾಜವನ್ನು ಸಶಕ್ತಗೊಳಿಸುತ್ತದೆ ಮತ್ತು ಅದರಿಂದ ಸಮೃದ್ಧ ಭಾರತ ನಿಮಾರ್ಣವಾಗುತ್ತದೆ ಎಂಬ ಸಂದೇಶವನ್ನು ಈ ಅಭಿಯಾನ ಸಾರುತ್ತದೆ ಎಂದರು.
ಆಯುಷ್ಮಾನ್ ಭಾರತ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಈ ಯೋಜನೆಯನ್ನು ಮನೆಮನೆಗೂ ತಲುಪಿಸಿ ತಾಯಿ ಮತ್ತು ಮಕ್ಕಳ ಆರೋಗ್ಯವನ್ನು ಕಾಪಾಡಲು ಶ್ರಮವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರ ಕಾರ್ಯ ಶ್ಲಾನೀಯ ಎಂದರು.
ಶಿಬಿರದಲ್ಲಿ ಗರ್ಭಿಣಿ ಮಹಿಳೆಯರಿಗೆ ರಕ್ತದೊತ್ತಡ, ಶುಗರ್, ಹಿಮೋಗ್ಲೋಬಿನ್ ಪರೀಕ್ಷೆ ಸೇರಿ ಸ್ತನ ಮತ್ತು ಗರ್ಭಾಶಯ ಕ್ಯಾನ್ಸರ್ ತಪಾಸಣೆಗಳನ್ನು ಉಚಿತವಾಗಿ ನಡೆಸಲಾಯಿತು. ಮಹಿಳೆಯರಲ್ಲಿ ಅಪೌಷ್ಟಕತೆ ನಿವಾರಣೆಗಾಗಿ ಪೌಷ್ಟಿಕ ಆಹಾರ ಕುರಿತು ಅರಿವು ಮೂಡಿಸಿದ್ದು, ಅನೀಮಿಯಾಮುಕ್ತ ಭಾರತ ಕಾರ್ಯಕ್ರಮದಡಿ ಪೌಷ್ಟಿಕ ಕಿಟ್ಗಳನ್ನು ವಿತರಿಸಲಾಯಿತು.
ಬಿಜೆಪಿ ಮುಖಂಡರಾದ ಪ್ರಸಾದ್ ಗೌಡ, ಗೌತಮ್ ಗೌಡ ಸೇರಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಶಿಬಿರದಲ್ಲಿ ಭಾಗವಹಿಸಿದ್ದರು.