ಜಿಲ್ಲೆ

ರಾಜ್ಯಕ್ಕೆ ಕೇಂದ್ರದ ಸ್ಟ್ರೋಕ್

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಬರಗಾಲ, ಕಾವೇರಿ ನೀರು ಹಂಚಿಕೆ ಸೇರಿದಂತೆ ಯಾವುದೇ ವಿಷಯವಾದರೂ ಸಿದ್ದರಾಮಯ್ಯ ಸರ್ಕಾರ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಕೇಂದ್ರದ ಸ್ಟ್ರೋಕ್ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿದ್ಯುತ್ ಅಭಾವಕ್ಕೂ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುವ ಮೂಲಕ ರಾಜ್ಯ ಸರ್ಕಾರ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿದ್ಯುತ್ ಉತ್ಪಾದನಾ ಘಟಕಗಳಿಗೆ ಸರಿಯಾಗಿ ಕಲ್ಲಿದ್ದಲು ಒದಗಿಸಿ, ವಿದ್ಯುತ್ ಉತ್ಪಾದನೆ ಮಾಡಿದರೆ ಈ ಸಮಸ್ಯೆ ಬರುತ್ತಿರಲಿಲ್ಲ. ಹಣಕಾಸಿನ ದುಸ್ಥಿತಿ ಹಾಗೂ ಅಸಮರ್ಪಕ ಕೆಲಸದಿಂದ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಬಿಗಡಾಯಿಸಿದೆ. ಸಮರ್ಪಕ ವಿದ್ಯುತ್ ಪೂರೈಸುವುದು ರಾಜ್ಯ ಸರ್ಕಾರದ ಕರ್ತವ್ಯ. ವಿದ್ಯುತ್ ಉತ್ಪಾದನೆಗೆ ಕೇಂದ್ರ ಏನು ಸಹಾಯ ಮಾಡಬೇಕು ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರ ಬಿಡುಗಡೆಗೊಳಿಸಲು ಹೊರಟಿರುವುದು ಜಾತಿ ಗಣತಿ ಹೌದೊ ಅಥವಾ ಅಲ್ಲವೋ ಎಂಬುವುದು ಮೊದಲು ಸ್ಪಷ್ಟಪಡಿಸಲಿ. ಯಾವುದೇ ಒಂದು ವರದಿ ನೀಡಬೇಕಾದರೆ ಸರ್ಕಾರ ಅದರ ಸಾಧಕ, ಬಾಧಕಗಳ ಬಗ್ಗೆ ಚರ್ಚೆ ನಡೆಸಬೇಕು. ಇದರಿಂದ ಸಮಾಜದ ಮೇಲೆ ಯಾವ ರೀತಿ ಪರಿಣಾಮ ಬಿರಲಿದೆ ಎಂಬುವುದನ್ನು ಅರಿತುಕೊಳ್ಳುವುದು ಮುಖ್ಯ ಎಂದರು.

ಹಿಂದಿನ ಕಾಂಗ್ರೆಸ್ ಸರ್ಕಾರ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿ ಜಾರಿ ಮಾಡಬಹುದಿತ್ತು. ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಆ ಸಮಯದಲ್ಲಿ ವರದಿ ಜಾರಿ ಮಾಡಲಿಲ್ಲ. ಈಗ ಈ ಬಗ್ಗೆ ಕಾಂಗ್ರೆಸ್​ನವರು ಮಾತನಾಡುತ್ತಿದ್ದಾರೆ ಎಂದರು.

ಹಮಾಸ್ ಉಗ್ರರಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಲ ಭಯೋತ್ಪಾದಕರೂ ಒಂದೇ. ಅಮಾಯಕರು, ಹೆಣ್ಣು ಮಕ್ಕಳು, ಮಕ್ಕಳ ಮೇಲೆ ಬಾಂಬ್ ದಾಳಿ ಮಾಡಲಾಗುತ್ತಿದೆ. ಇದನ್ನು ಯಾವುದೇ ಸಮಾಜ ಹಾಗೂ ಸಮುದಾಯ ಒಪ್ಪಲು ಸಾಧ್ಯವಿಲ್ಲ. ಆದರೆ, ಕಾಂಗ್ರೆಸ್ ಹಮಾಸ್ ಉಗ್ರರನ್ನು ಬೆಂಬಲಿಸುವ ಮೂಲಕ ತುಷ್ಠೀಕರಣ ರಾಜಕಾರಣ ಮಾಡುತ್ತಿದೆ ಎಂದು ದೂರಿದರು.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಎಲ್ಲ ಇಲಾಖೆಗಳ ಕಾಮಗಾರಿಗಳ ತನಿಖೆ ಮಾಡಲಿ.

ಎಲ್ಲ ಕಾಮಗಾರಿಗಳು ಪೂರ್ಣಗೊಂಡು, ಬಿಲ್​ಗಳನ್ನು ಸಹ ಪಾವತಿಸಲಾಗಿದೆ. ಆದರೆ, ಕಾಂಗ್ರೆಸ್ ಸರ್ಕಾರ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆಯ ಕಾಮಗಾರಿಗಳ ಬಿಲ್​ಗಳನ್ನು ಇನ್ನೂ ಪಾವತಿಸಿಲ್ಲ. ಮೊದಲು ಬಿಲ್​ಗಳನ್ನು ಪಾವತಿಸಲಿ, ನಂತರ ತಪು್ಪಗಳ ತನಿಖೆಯಾಗಲಿ ಎಂದು ಒತ್ತಾಯಿಸಿದರು.