ಜಿಲ್ಲೆ

ಸಹಕಾರ ಸಂಘಗಳ ಬಲವರ್ಧನೆಗೆ ಶ್ರಮಿಸಿ: ಎಂ.ಸಿ.ನಾಣಯ್ಯ

ಮಡಿಕೇರಿ: ಸಹಕಾರ ಸಂಘಗಳು ಆರ್ಥಿಕ ಪ್ರಗತಿಯನ್ನು ಮತ್ತಷ್ಟು ವೃದ್ಧಿಸಿಕೊಂಡು, ಕೃಷಿಕರು ಹಾಗೂ ಬಡವರಿಗೆ ಸಾಲ ಸೌಲಭ್ಯ ಕಲ್ಪಿಸಿ ಆರ್ಥಿಕ ಬೆಳವಣಿಗೆಗೆ ಸಹಕರಿಸುವಂತೆ ಹಿರಿಯ ಸಹಕಾರಿ ಹಾಗೂ ಮಾಜಿ ಸಚಿವ ಎಂ.ಸಿ.ನಾಣಯ್ಯ ಅವರು ಸಲಹೆ ಮಾಡಿದರು.

ನಗರದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಆವರಣದಲ್ಲಿ ಸಹಕಾರ ಸಪ್ತಾಹದ ಧ್ವಜಾರೋಹಣ ನಂತರ ಪಂದ್ಯಂಡ ಬೆಳ್ಯಪ್ಪ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಹಕಾರ ಕ್ಷೇತ್ರದಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಇರಬಾರದು. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಇದ್ದಲ್ಲಿ ಸಹಕಾರ ಸಂಘಗಳ ಬಲವರ್ಧನೆ ಸಾಧ್ಯ ಎಂದರು.

ಸಹಕಾರ ಸಂಘಗಳಿಗೆ ದೇಶದಲ್ಲಿ ತಮ್ಮದೇ ಆದ ಸ್ಥಾನವಿದ್ದು, ಸಂಪತ್ತನ್ನು ಎಲ್ಲರೂ ಹಂಚಿಕೊಂಡು ಸಮಾನವಾಗಿ ಬದುಕುವುದು ಸಹಕಾರದ ಧ್ಯೇಯೋದ್ದೇಶವಾಗಿದೆ. ಸಹಕಾರ ಕ್ಷೇತ್ರದಲ್ಲಿ ಪ್ರಾಮಾಣಿಕತೆ ಮತ್ತು ದಕ್ಷತೆ ಇದ್ದಲ್ಲಿ ಸಹಕಾರ ಸಂಘಗಳನ್ನು ಮತ್ತಷ್ಟು ಬಲಪಡಿಸಬಹುದಾಗಿದೆ. ಆ ನಿಟ್ಟಿನಲ್ಲಿ ಸಹಕಾರ ಸಂಘಗಳು ಪಕ್ಷಾತೀತವಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಸಹಕಾರ ಸಂಘದಲ್ಲಿ ಲಕ್ಷಾಂತರ ಜನರು ಸದಸ್ಯತ್ವವನ್ನು ಹೊಂದಿದ್ದಾರೆ. ಸಹಕಾರ ಕ್ಷೇತ್ರಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಬೇಕು. ಸಹಕಾರ ಸಂಘಗಳು ರಾಜಕೀಯ ರಹಿತವಾಗಿರಬೇಕು. ರಾಜ್ಯದಲ್ಲಿ ೨೧ ಕೇಂದ್ರ ಸಹಕಾರ ಬ್ಯಾಂಕುಗಳು ಇದ್ದು, ಕೊಡಗು ಜಿಲ್ಲೆಯ ಸಹಕಾರ ಬ್ಯಾಂಕು ಅತ್ಯುತ್ತಮವಾಗಿ ಆರ್ಥಿಕ ಚಟುವಟಿಕೆ ನಡೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಎಂದು ಎಂ.ಸಿ.ನಾಣಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಮಾತನಾಡಿ, ೭೧ನೇ ಸಹಕಾರ ಸಪ್ತಾಹವನ್ನು ಆಚರಿಸಲಾಗುತ್ತಿದ್ದು, ಕೊಡಗು ಡಿಸಿಸಿ ಬ್ಯಾಂಕ್ ವತಿಯಿಂದ ೩ ರಿಂದ ೫ ಲಕ್ಷ ರೂ ವರೆಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿಕರಿಗೆ ಸಾಲ ನೀಡಲಾಗುತ್ತಿದ್ದು, ಕೃಷಿಕರ ಶ್ರೇಯೋಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದರು.

ಸಹಕಾರ ಕಾಯ್ದೆ ತಿದ್ದುಪಡಿಯಿಂದ ಸಹಕಾರ ಸಂಘಗಳ ಬೆಳವಣಿಗೆ ಕಷ್ಟಸಾಧ್ಯ. ನೂತನ ಸಹಕಾರ ಕಾಯ್ದೆ ಜಾರಿಗೊಂಡಲ್ಲಿ ಸಹಕಾರ ಸಂಘಗಳು ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಸಹಕಾರ ಸಂಘಗಳು ಸಮರ್ಥವಾಗಿ ಬೆಳೆಯುವಲ್ಲಿ ಅವಕಾಶ ಮಾಡಬೇಕು. ಸಹಕಾರ ಸಂಘಗಳು ವಿಕೇಂದ್ರೀಕರಣ ಆಗಬೇಕು ಎಂಬ ಉದ್ದೇಶದಿಂದ ಜಾರಿಗೊಳಿಸಿದರೂ ಸಹ, ಸಹಕಾರಿಗಳಿಂದ ಒಂದು ಸಹಕಾರಿ ಸಂಸ್ಥೆ ಬೆಳೆಯುತ್ತದೆ ಎಂಬುದನ್ನು ಮನಗಾನಬೇಕು. ಪಂಚಾಯತ್ ರಾಜ್ ವ್ಯವಸ್ಥೆಗೂ, ಸಹಕಾರ ಸಂಘಗಳ ವ್ಯವಸ್ಥೆಗೂ ಬಹಳ ವ್ಯತ್ಯಾಸವಿದೆ. ಆದ್ದರಿಂದ ಈ ಬಗ್ಗೆ ಯೋಚಿಸಬೇಕು ಎಂದರು.

ಕೊಡಗಿನ ಸಹಕಾರ ಕ್ಷೇತ್ರ ರಾಜ್ಯಕ್ಕೆ ಮಾದರಿಯಾಗಿದೆ. ನಬಾರ್ಡ್ ಮೂಲಕ ಬರುವ ಸಾಲ ಸೌಲಭ್ಯ ಕಡಿಮೆಯಾಗಿರುವುದರಿಂದ ಕೃಷಿಕರಿಗೆ ಸಾಲ ಸೌಲಭ್ಯ ಒದಗಿಸುವುದು ಕಷ್ಟಸಾಧ್ಯವಾಗಿದೆ. ಆದ್ದರಿಂದ ನಮ್ಮ ಪಾಲನ್ನು ಬಿಡುಗಡೆ ಮಾಡಬೇಕು ಎಂದರು.

ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ನಿವೃತ್ತ ಪ್ರಾಂಶುಪಾಲ ಎಂ.ಎಂ.ಶ್ಯಾಮಲ ಮಾತನಾಡಿ, ಸಹಕಾರ ಸಪ್ತಾಹದಲ್ಲಿ ಸಹಕಾರ ಸಂಘಗಳ ಪ್ರಗತಿ ಬಗ್ಗೆ ವಿಮರ್ಶೆಗಳು ನಡೆಯಬೇಕು. ಸಹಕಾರ ಚಳುವಳಿಯನ್ನು ಬಲಪಡಿಸಿ ಸಾಮೂಹಿಕ ಪ್ರಯತ್ನದಿಂದ ಪ್ರಗತಿ ಸಾಧಿಸುವುದು ಸಹಕಾರದ ತತ್ವವಾಗಿದೆ. ಸಹಕಾರ ಕ್ಷೇತ್ರದ ಆರ್ಥಿಕ ಬೆಳವಣಿಗೆಗೆ ಸಾಕಷ್ಟು ಕಾರ್ಯಕ್ರಮ ರೂಪಿಸಲಾಗಿದೆ ಎಂದು ಶ್ಯಾಮಲ ಹೇಳಿದರು.

ಸಹಕಾರ ಕ್ಷೇತ್ರದಲ್ಲಿ ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ ಹೀಗೆ ವಿವಿಧ ರೀತಿಯ ಉದ್ಯೋಗಾವಕಾಶಗಳು ದೊರೆಯಲಿವೆ. ಆ ನಿಟ್ಟಿನಲ್ಲಿ ಸಹಕಾರ ಕ್ಷೇತ್ರ ಬಲಪಡಿಸಲು ಮುಂದಾಗಬೇಕಿದೆ. ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಸಹಕಾರ ಕ್ಷೇತ್ರವನ್ನು ಮತ್ತಷ್ಟು ಸುಧಾರಿಸಬೇಕು. ಮೂಲ ಸೌಲಭ್ಯ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದರು.

ಸಮಗ್ರ ಗ್ರಾಮೀಣ ಅಭಿವೃದ್ಧಿ ಸಾಧಿಸುವುದೇ ಸಹಕಾರ ಕ್ಷೇತ್ರದ ಮೂಲ ಉದ್ದೇಶವಾಗಿದೆ. ಆ ನಿಟ್ಟಿನಲ್ಲಿ ವೃತ್ತಿಪರತೆ, ಪಾರದರ್ಶಕತೆ ಕಾಪಾಡಿಕೊಂಡು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಹಕಾರ ಕ್ಷೇತ್ರವನ್ನು ಅಭಿವೃದ್ಧಿಪಡಿಸಬೇಕು ಎಂದು ಶ್ಯಾಮಲ ತಿಳಿಸಿದರು.

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ಕೇಟೋಳಿರ ಎಸ್.ಪೂವಯ್ಯ, ನಿರ್ದೇಶಕರಾದ ಹೊಟ್ಟೆಂಗಡ ಎಂ.ರಮೇಶ್, ಹೊಸೂರು ಸತೀಶ್ ಕುಮಾರ್, ಕೆ.ಅರುಣ್ ಭೀಮಯ್ಯ, ಕಾಂಗೀರ ಎನ್.ಸತೀಶ್, ಪೂಳಂಡ ಪಿ.ಪೆಮ್ಮಯ್ಯ, ಎಚ್.ಕೆ.ಮಾದಪ್ಪ, ಎಸ್.ಸಿ.ಶರತ್‌ಶೇಖರ್, ಶರವಣ ಕುಮಾರ್.ಟಿ.ಆರ್ ಇತರರು ಇದ್ದರು.