ಮುಂಡರಗಿ: ಶಿಕ್ಷಕ ವೃಂದ ಮುತುವರ್ಜಿ ವಹಿಸಿ ಮಕ್ಕಳಿಗೆ ಪಾಠ ಮಾಡಬೇಕು. ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣದ ಬಗ್ಗೆ ಒಳ್ಳೆಯ ವಾತಾವರಣ ಸೃಷ್ಟಿಸಬೇಕು. ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಸರ್ಕಾರಿ ಶಾಲೆಗಳ ಉಳಿವಿಗಾಗಿ ಶ್ರಮಿಸಬೇಕು ಎಂದು ಶಾಸಕ ಕಳಕಪ್ಪ ಬಂಡಿ ಹೇಳಿದರು.
ಪಟ್ಟಣದಲ್ಲಿ ರಾಜ್ಯ ಶಿಕ್ಷಕರ ಕಲ್ಯಾಣ ಮತ್ತು ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ವತಿಯಿಂದ ಶನಿವಾರ ಏರ್ಪಡಿಸಿದ್ದ ನೂತನ ಗುರು ಭವನ ಉದ್ಘಾಟಿಸಿ ಅವರು ಮಾತನಾಡಿದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ‘ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಫಲಿತಾಂಶಗಳು ತುಂಬಾ ಕಳಪೆಯಾಗಿವೆ. ಶಿಕ್ಷಕರು ತುಂಬಾ ಕಾಳಜಿಪೂರಕವಾಗಿ ಪಾಠ ಮಾಡಿ ಫಲಿತಾಂಶವನ್ನು ಸುಧಾರಿಸಬೇಕು. ಶಿಕ್ಷಕರು ಶ್ರದ್ಧೆ, ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಬೇಕು. ಶಿಕ್ಷಕರು ಗುರುಭವನದ ಸದುಪಯೋಗ ಪಡೆದುಕೊಳ್ಳುವುದರ ಜೊತೆಗೆ ಅದರ ನಿರ್ವಹಣೆಗೆ ಕಾಳಜಿ ವಹಿಸಬೇಕು’ ಎಂದರು.
ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ವಿವಿಧ ಹಂತಗಳ ಜನಪ್ರತಿನಿಧಿಗಳು ಹಾಗೂ ಶಿಕ್ಷಕರ ಅಪಾರ ಪರಿಶ್ರಮದಿಂದ ಪಟ್ಟಣದಲ್ಲಿ ಸುಂದರವಾದ ಗುರು ಭವನ ನಿರ್ವಣವಾಗಿದೆ. ಇಲ್ಲಿ ಸದಾ ವಿವಿಧ ಕಾರ್ಯಕ್ರಮಗಳು ನಡೆಯುವಂತಾಗಬೇಕು ಎಂದರು.
ಸಮಾರಂಭಕ್ಕೂ ಮುನ್ನ ಗುರುಭವನದಲ್ಲಿ ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ ಅವರಿಗೆ ಪಾದಪೂಜೆ ನೆರವೇರಿಸಲಾಯಿತು. ನಂತರ ಶ್ರೀಗಳು ಆಶೀರ್ವಚನ ನೀಡಿದರು. ಜಿ.ಪಂ. ಉಪಾಧ್ಯಕ್ಷೆ ಶೋಭಾ ಮೇಟಿ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಕವಿತಾ ಉಳ್ಳಾಗಡ್ಡಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಎಸೆಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಸರ್ಕಾರಿ ಶಾಲೆಯ ಮೂವರು ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಿಸಲಾಯಿತು. ಜಿ.ಪಂ. ಸದಸ್ಯರಾದ ಶಕುಂತಲಾ ಚವ್ಹಾಣ, ಈರಣ್ಣ ನಾಡಗೌಡ್ರ, ಪುರಸಭೆ ಉಪಾಧ್ಯಕ್ಷ ಶಿವಪ್ಪ ಚಿಕ್ಕಣ್ಣವರ, ಬಿಜೆಪಿ ಮುಂಡರಗಿ ಮಂಡಳ ಅಧ್ಯಕ್ಷ ಹೇಮಗಿರೀಶ ಹಾವಿನಾಳ, ತಾ.ಪಂ. ಸದಸ್ಯರಾದ ರುದ್ರಗೌಡ ಪಾಟೀಲ, ವೆಂಕಪ್ಪ ಬಳ್ಳಾರಿ, ತಹಸೀಲ್ದಾರ್ ಆಶಪ್ಪ ಪೂಜಾರಿ, ತಾ.ಪಂ. ಇಒ ಎಸ್.ಎಸ್. ಕಲ್ಮನಿ, ಪ್ರಕಾಶಗೌಡ ಪಾಟೀಲ, ಎಸ್.ಎಸ್. ಇಮ್ರಾಪೂರ, ಚಂದ್ರಶೇಖರ ಹುಗ್ಲಿ, ರವಿ ಗುಂಜಿಕರ, ಡಾ.ಬಸವರಾಜ ಬಳ್ಳಾರಿ, ಪುರಸಭೆ ಸದಸ್ಯರು ಉಪಸ್ಥಿತರಿದ್ದರು. ಬಿಇಒ ಗಂಗಾಧರ ಅಣ್ಣಿಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ನಿಂಗು ಸೊಲಗಿ ಹಾಗೂ ಎ.ಡಿ. ಬಂಡಿ ಕಾರ್ಯಕ್ರಮ ನಿರೂಪಿಸಿದರು.