ಹೊಸಕೋಟೆ : ಗಂಡು ಮಗುವಿಗೆ ಶಿಕ್ಷಣ ನೀಡಿದರೆ ವಿದ್ಯಾವಂತನಾಗುತ್ತಾನೆ, ಆದರೆ ಒಂದು ಹೆಣ್ಣು ಮಗುವಿಗೆ ಶಿಕ್ಷಣ ನೀಡಿದರೆ ಇಡೀ ಕುಟುಂಬ ವಿದ್ಯಾವಂತರಾಗುತ್ತಾರೆ ಎಂದು ಕಿಯೋನಿಕ್ಸ್ ಅಧ್ಯಕ್ಷ ಹಾಗೂ ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು. ನಗರದ ಶ್ರೀವಾರಿ ಕಲ್ಯಾಣಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ನಮ್ಮ ತಾಲೂಕಿನಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರನ್ನು ಮಾತ್ರ ಸೇರಿಸಿಕೊಂಡು ಈ ಕಾರ್ಯಕ್ರಮ ಮಾಡದೆ ಅನುಧಾನಿತ ಹಾಗೂ ಅನುದಾನ ರಹಿತ ಶಾಲೆಯ ಎಲ್ಲ ಶಿಕ್ಷಕರನ್ನು ಸೇರಿಸಿಕೊಂಡು ಕಾರ್ಯಕ್ರಮ ಆಚರಿಸುತ್ತಿರುವುದು ಸಂತಸ ತಂದಿದ್ದು, ಮಕ್ಕಳ ಸರ್ವತೋಮುಖ ಬೆಳೆವಣಿಗೆಗೆ ಶ್ರಮಿಸಬೇಕು ಎಂದರು.
ತಾಲೂಕಿನಲ್ಲಿ ಹೋಬಳಿಗೊಂದು ಕರ್ನಾಟಕ ಪಬ್ಲಿಕ್ ಶಾಲೆ ಎಂದ ಯೋಜನೆ ರೂಪಗೊಂಡಿತ್ತು ನಂತರ ಪ್ರತಿ ಗ್ರಾಪಂಗೊಂದು ಪಬ್ಲಿಕ್ ಶಾಲೆ ತೆರೆಯಲು ಇನ್ಪೋಸಿಸ್ ಸಹಯೋಗದಲ್ಲಿ 40 ಕೋಟಿ ರೂ. ಅನುದಾನದಲ್ಲಿ ತಾಲೂಕಿನಲ್ಲಿ 30 ಶಾಲೆಗಳನ್ನು ತೆರೆಯಲು ಮುಂದಾದ ಸಂದರ್ಭದಲ್ಲಿ ಸರ್ಕಾರ ಮ್ಯಾಗ್ನೆಟ್ ಶಾಲೆಯನ್ನು ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಹೊಸಕೋಟೆಗೆ ಜಾರಿ ಮಾಡಿ, ಅನುದಾನ ಬಿಡುಗಡೆ ಮಾಡಿ ಒಟ್ಟು 90 ಕೋಟಿ ರೂ. ವೆಚ್ಚದಲ್ಲಿ ಎಲ್ಕೆಜಿಯಿಂದ ಪಿಯುಸಿ ಶಿಕ್ಷಣ ಒಂದೇ ಸೂರಿನಲ್ಲಿ ನೀಡಲು ನಿರ್ಧರಿಸಿದ್ದು ಇದರಿಂದ ಪ್ರಾಥಮಿಕ ಮಾಧ್ಯಮ, ಪ್ರೌಢಶಾಲೆಗೆ ದಾಖಲಾಗುವಾಗ ಶಾಲೆ ಬಿಡುವವರ ಸಂಖ್ಯೆ ಸಂಪೂರ್ಣ ಕಡಿತಗೊಳಿಸಬಹುದು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು. ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣಯ್ಯ ಮಾತನಾಡಿ, ಶಿಕ್ಷಕರ ಸಮಸ್ಯೆ ಕುರಿತು ಸರ್ಕಾರದ ಜತೆ ಚರ್ಚಿಸಲಾಗುತಿದೆ ಎಂದರು.
ತಾಪಂ ಇಒ ಮುನಿಯಪ್ಪ, ಡಿವೈಎಸ್ ಪಿ.ಮಲ್ಲೇಶ್, ಡಿಡಿಪಿಐ ಬೈಲಾಂಜಿನಪ್ಪ, ಬಿಇಒ ಪಧ್ಭನಾಬ್, ಯೋಜನಾ ಪ್ರಾಧಿಕಾರದ ನಿರ್ದೇಶಕ ಕೊರಳೂರು ಸುರೇಗೌಡ, ತಾಲೂಕು ಸರ್ಕಾರಿ ಶಾಲಾ ಶಿಕ್ಷಕರ ಸಂಘದ ಮುನಿಶಾಮಯ್ಯ, ಮುಖಂಡರಾದ ಡಾ.ಡಿ.ಟಿ.ವೆಂಕಟೇಶ್, ಇಂತಿಯಾಜ್ ಪಾಷಾ, ರಾಜಗೋಪಾಲ್, ಗಂಗಾಧರ್, ಸುಬ್ಬರಾಯಪ್ಪ ಇದ್ದರು.