ಜಿಲ್ಲೆ

ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಶ್ರಮಿಸಿ

ಜಿ.ಹೆಚ್. ಧನ್ಯಕುಮಾರ್

ಆಲ್ದೂರು: ಮಕ್ಕಳ ಬೌದ್ಧಿಕ ಬೆಳವಣಿಗೆಯಲ್ಲಿ ಪಾಲಕರು ಹಾಗೂ ಶಿಕ್ಷಕರ ಪಾತ್ರ ಮಹತ್ವದ್ದು ಎಂದು ಪೂರ್ಣಪ್ರಜ್ಞಾ ವಿದ್ಯಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಶ್ರೀ ಈಶಪ್ರಿಯ ಸ್ವಾಮೀಜಿ ಹೇಳಿದರು.

ಪೂರ್ಣಪ್ರಜ್ಞಾ ಶಾಲೆಯ 43ನೇ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಕಾಲಘಟ್ಟದಲ್ಲಿ ಮಕ್ಕಳನ್ನು ಸೂಕ್ಷ್ಮವಾಗಿ ನಿರ್ವಹಿಸಬೇಕು. ಮಕ್ಕಳಿಗೆ ಮಾನಸಿಕವಾಗಿ ಆತ್ಮಸ್ಥೈರ್ಯ ತುಂಬಿ ಓದಿನ ಜತೆಗೆ ದೈಹಿಕವಾಗಿ ಸದೃಢರನ್ನಾಗಿ ಮಾಡಬೇಕಿದೆ. ಮನೆಯೊಳಗಿನ ಪರಿಸರದ ಜತೆ ಹೊರಗಿನ ಪರಿಸರವನ್ನು ಅರ್ಥೈಸಿಕೊಂಡು ಬದುಕು ರೂಪಿಸಿಕೊಳ್ಳವುದನ್ನು ಮಕ್ಕಳಿಗೆ ಕಲಿಸುವ ಹೊಣೆ ಪಾಲಕರ ಮೇಲಿದೆ ಎಂದರು.

ಮುಖ್ಯ ಅತಿಥಿ ಡಾ. ಸತ್ಯನಾರಾಯಣ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಮೌಲ್ಯಗಳನ್ನು ಬೆಳೆಸಿಕೊಂಡು ದೇಶಕ್ಕೆ ಉತ್ತಮ ಕೊಡುಗೆ ನೀಡಬೇಕು. ಇಂದು ವಿದ್ಯಾರ್ಥಿಗಳಿಗೆ ಎಲ್ಲ ರಂಗದಲ್ಲೂ ಉತ್ತಮ ಅವಕಾಶಗಳಿದ್ದು ,ಕಠಣ ಪರಿಶ್ರಮವಿದ್ದರೆ ಉತ್ತಮ ಸಾಧನೆ ಮಾಡಬಹುದು. ವಿದ್ಯಾರ್ಥಿಗಳು ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ಹೆಚ್ಚಸಿಕೊಳ್ಳಲು ಧ್ಯಾನ, ಯೋಗ ಸಹಕಾರಿಯಾಗಿದೆ. ಮಕ್ಕಳಿಗೆ ಓದಿನ ಜತೆಗೆ ವ್ಯಾಯಾಮವೂ ಆಗತ್ಯ ಎಂದು ಸಲಹೆ ನೀಡಿದರು.

ಶಾಲೆ ಹಳೇ ವಿದ್ಯಾರ್ಥಿ ಡಾ.ಮೇಘಾ ಪದ್ಮನಾಭ ಹಾಗೂ ಕಳೆದ ಸಾಲಿನ ಹೆಚ್ಚು ಅಂಕಪಡೆದ ವಿದ್ಯಾರ್ಥಿ ತನಿಷಾ, ಅಂಕಿತಾ, ವಿಹಾರ್ ಜೈನ್, ಶ್ರಾವಣಿ ಎಸ್.ಭಟ್ ಅವರನ್ನು ಸನ್ಮಾನಿಸಲಾಯಿತು. ಶಾಲೆ ಸಹಕಾರ್ಯದರ್ಶಿ ಎಚ್.ಆರ್.ಸುಧಾಕರ್, ಪ್ರಾಚಾರ್ಯ ವೆಂಕಟೇಶ್, ಯುಎಸ್‌ಎಎಂಇಸಿ ಸದಸ್ಯ ಮುಂಜುನಾಥ್, ವಕೀಲ ಸುಧಾಕರ್, ವಿದ್ಯಾರ್ಥಿಗಳಾದ ವಿಹಾತ್ ಜೈನ್, ಅಲಿಯಾ ಾತಿಮಾ, ಚಾರ್ವಿ, ಶಿಕ್ಷಕಿ ಸಿಂಧು, ಮನು ಇದ್ದರು.