ಬಳ್ಳಾರಿ ನಗರದ ಕೋಟೆ ಪ್ರದೇಶದಲ್ಲಿರುವ ಸಂತಜಾನ್ ಪ್ರೌಢಶಾಲೆ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮವನ್ನು ಡಿಡಿಪಿಐ ಬಿ.ಉಮಾದೇವಿ ಉದ್ಘಾಟಿಸಿದರು. ಜಿಲ್ಲಾ ನೋಡೆಲ್ ಅಧಿಕಾರಿ ವೀರೇಶಪ್ಪ, ವಿದ್ಯಾಸಂಸ್ಥೆಯ ವ್ಯವಸ್ಥಾಪಕ ಫಾ.ವಾಲ್ಟೇರ್ ಮೆನೆಜೆಸ್, ಮುಖ್ಯಶಿಕ್ಷಕ ಶಾಂತುಶೀಲನ್ ಇನ್ನಿತರರಿದ್ದರು.  
ಜಿಲ್ಲೆ

ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿ

ಬಳ್ಳಾರಿ : ಶಾಲಾ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಮತ್ತು ಅವರ ಪ್ರತಿಭೆಯನ್ನು ಹೊರಹಾಕುವಲ್ಲಿ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಂತಹ ಕಾರ್ಯಕ್ರಮಗಳು ಸಹಕಾರಿ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಬಿ.ಉಮಾದೇವಿ ಅಭಿಪ್ರಾಯಪಟ್ಟರು.

ನಗರದ ಕೋಟೆ ಪ್ರದೇಶದಲ್ಲಿರುವ ಸಂತಜಾನ್ ಪ್ರೌಢಶಾಲೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ 2023-24ನೇ ಸಾಲಿನ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರತಿಯೊಂದು ಮಕ್ಕಳಲ್ಲಿ ಒಂದೊಂದು ಶಕ್ತಿ(ಪ್ರತಿಭೆ) ಅಡಗಿದ್ದು, ಅವುಗಳನ್ನು ಗುರುತಿಸಿ ಸೂಕ್ತ ವೇದಿಕೆ ಕಲ್ಪಿಸಿ ಅವರನ್ನು ಪ್ರೋತ್ಸಾಹಿಸುವ ಕೆಲಸ ನಮ್ಮ ಶಿಕ್ಷಕರು ಹಾಗೂ ಪಾಲಕರು ಮಾಡಬೇಕು ಎಂದು ಸಲಹೆ ನೀಡಿದರು.

ಶಾಲೆ ಮಕ್ಕಳಿಗೆ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೆ ಒತ್ತು ನೀಡುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಪಾಠದ ಜತೆಗೆ ಕಲೆ ಮತ್ತು ಸಂಸ್ಕೃತಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ತಿಳಿಸುವ ಕೆಲಸ ಮಾಡಬೇಕು. ನಮ್ಮ ಜಿಲ್ಲೆಯ ಹೆಚ್ಚಿನ ಮಕ್ಕಳು ರಾಜ್ಯಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಮಿಂಚಿ, ಹೆಚ್ಚಿನ ಪ್ರಶಸ್ತಿಗಳನ್ನು ತರುವುದರ ಮೂಲಕ ಜಿಲ್ಲೆಗೆ ಕೀರ್ತಿ ತನ್ನಿ ಎಂದು ಶುಭ ಹಾರೈಸಿದರು.

ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಗೆ ನಿಯೋಜಿತರಾದ ತೀರ್ಪುಗಾರರರು ಅತ್ಯಂತ ನಿಷ್ಪಕ್ಷಪಾತವಾಗಿ ಪ್ರತಿಭಾವಂತರನ್ನು ಆಯ್ಕೆ ಮಾಡಬೇಕು ಎಂದು ಸಲಹೆ ನೀಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ನೋಡೆಲ್ ಅಧಿಕಾರಿ ವೀರೇಶಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿಭಾ ಕಾರಂಜಿಯ ಧ್ಯೇಯೊದ್ದೇಶಗಳನ್ನು ವಿವರಿಸಿದರು.

ಇದೇ ವೇಳೆ 2022-23ನೇ ಸಾಲಿನ ರಾಜ್ಯಮಟ್ಟದ ಪ್ರತಿಭಾ ಕಾರಂಜಿಯಲ್ಲಿ ರಸಪ್ರಶ್ನೆ, ಜಾನಪದ ನೃತ್ಯ, ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಶಾಲಾ ಶಿಕ್ಷಕರನ್ನು ಸನ್ಮಾನಿಸಲಾಯಿತು. ಸಂತಜಾನ್ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ಫಾ.ವಾಲ್ಟೇರ್ ಮೆನೆಜೆಸ್, ಮುಖ್ಯಶಿಕ್ಷಕ ಶಾಂತುಶೀಲನ್ ಮತ್ತಿತರರು ಉಪಸ್ಥಿತರಿರದ್ದರು.