ಜಿಲ್ಲೆ

Strike ಮಾಸಿಕ 15 ಸಾವಿರ ರೂ. ವೇತನ ಪಾವತಿಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ಕಾರವಾರ /Strike: ಮಾಸಿಕ ಕನಿಷ್ಠ 15 ಸಾವಿರ ರೂ. ವೇತನ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ಕಚೇರಿಯ ಎದುರು ಕೆಲಹೊತ್ತು ಧರಣಿ, ಸಭೆ ನಡೆಸಿದರು. ನಂತರ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರ ಮೂಲಕ ಸಿಎಂ ಅವರಿಗೆ ಮನವಿ ಸಲ್ಲಿಸಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಪೂರ್ವದಲ್ಲಿ ವೇತನ ಹೆಚ್ಚಳ ಮಾಡುವ ಭರವಸೆ ನೀಡಿತ್ತು. ಆದರೆ, ಗ್ಯಾರಂಟಿ ಈಡೇರಿಲ್ಲ ಎಂದು ದೂರಿದರು. ಘೋಷಣೆಗಳನ್ನು ಕೂಗಿದರು.

ಆಶಾ Strike

ಸಂಘಟನೆಯ ಜಿಲ್ಲಾ ಅಧ್ಯಕ್ಷೆ ಪದ್ಮಾ ಚಲುವಾದಿ ಮಾತನಾಡಿ, ಅಸಹಾಯಕ ಬಡ ಮಹಿಳೆಯರು, ವಿಧವೆಯರು, ವಿಚ್ಛೇದಿತರನ್ನು 'ಆಶಾ' ಗಳನ್ನಾಗಿ ನೇಮಕ ಮಾಡಿಕೊಂಡು ಅವರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿಸಲಾಗುತ್ತದೆ ಎಂಬುದು ಸರ್ಕಾರದ ಘೋಷಣೆ. ಆದರೆ, ಆಶಾಗಳ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕುತ್ತಿಲ್ಲವೆಂಬುದು ವಾಸ್ತವ.

ರಾಜ್ಯದಲ್ಲಿ ಪ್ರೋತ್ಸಾಹಧನ ನೀಡಲು ಆಶಾನಿಧಿ ಪೋರ್ಟಲ್‌ನಲ್ಲಿ ಆನ್ ಲೈನ್ ದಾಖಲು ಮಾಡಬೇಕಿದೆ. ಆದರೆ, ಆಶಾಗಳು ಮಾಡಿದ ಕೆಲಸಗಳು ದಾಖಲಾಗದ ಕಾರಣ ಕಳೆದ 8 ವರ್ಷಗಳಿಂದ ಪ್ರೋತ್ಸಾಹಧನ ಸಿಗದೇ, ಬಹು ದೊಡ್ಡ ಪ್ರಮಾಣದ ಅನ್ಯಾಯ ಆಗುತ್ತಿದೆ.

ಸಮಸ್ಯೆಗಳ ಕುರಿತು ಆರೋಗ್ಯ ಇಲಾಖೆ ಮತ್ತು ಸರ್ಕಾರಕ್ಕೆ ಕಳೆದ 8 ವರ್ಷಗಳಿಂದ ಲೆಕ್ಕವಿಲ್ಲದಷ್ಟು ದೂರುಗಳನ್ನು ಸಲ್ಲಿಸಲಾಗಿದೆ. ಆದರೆ, ಯಾವುದೇ ಸಮಸ್ಯೆಯೂ ಪರಿಹಾರವಾಗಿಲ್ಲ ಎಂದು ದೂರಿದರು.

Strike ಬೇಡಿಕೆಗಳು

ಆಶಾ ಕಾರ್ಯಕರ್ತೆಯರಿಂದ ಮೊಬೈಲ್ ಆಧಾರಿತ ಕೆಲಸಗಳನ್ನು ಒತ್ತಾಯ ಪೂರ್ವಕವಾಗಿ ಮಾಡಿಸಿಕೊಳ್ಳುತ್ತಿದ್ದು, ಅದಕ್ಕೆ ತಕ್ಕ ಡೇಟಾ ಒದಗಿಸಬೇಕು. ಇಲ್ಲವೇ ಮೊಬೈಲ್ ಆಧಾರಿತ ಕೆಲಸ ಕೈಬಿಡಬೇಕು. ಸೇವಾ ನಿವೃತ್ತಿ ಪಡೆಯುವವರಿಗೆ ಕನಿಷ್ಠ 3 ಲಕ್ಷ ರೂ. ನಿಶ್ಚಿತ ಇಡಿಗಂಟು ಇಡಬೇಕು. ಅನಾರೋಗ್ಯಕ್ಕೊಳಗಾಗಿ ಚಿಕಿತ್ಸೆ ಪಡೆಯುವ ಅವಧಿಯಲ್ಲಿ ಕನಿಷ್ಠ ಒಂದು ತಿಂಗಳು ನಿಶ್ಚಿತ ಗೌರವಧನ ಮತ್ತು ನಿಗದಿತ ಪ್ರೋತ್ಸಾಹಧನ ನೀಡಬೇಕು. ಆಶಾ ಸೇವೆಯಲ್ಲಿ ಇದ್ದಾಗ ಆಗುವ ಅನಾಹುತಗಳಿಗೆ ಸಂಪೂರ್ಣ ಜವಾಬ್ದಾರಿಯನ್ನು ಇಲಾಖೆ ವಹಿಸಿಕೊಳ್ಳಬೇಕು. ಕಾರ್ಯಕರ್ತೆಯರ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಬೇಕು. ತೀವ್ರ ಕಾಯಿಲೆಗಳಿದ್ದಲ್ಲಿ ಕೂಡಲೇ ಉಚಿತ ಚಿಕಿತ್ಸೆ ಮಾಡಬೇಕು. ಮತ್ತು ಆಶಾ ಕಾರ್ಯಕರ್ತೆಯರನ್ನು ಕಾರ್ಮಿಕರೆಂದು ಪರಿಗಣಿಸಿ, ಕನಿಷ್ಠ ವೇತನ, ಗ್ರಾಚ್ಯುಟಿ, ಪಿಎಫ್, ಇಎಸ್‌ಐ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿದರು. ಸಂಘಟನೆಯ ಸಂಯೋಜಕ ಗಂಗಾಧರ ಬಡಿಗೇರ್, ಜಿಲ್ಲಾ ಸಮಿತಿಯ ಉಪಾಧ್ಯಕ್ಷೆ ಕವಿತಾ ಗಾವಡಾ, ಶ್ವೇತಾ ಕಪಡಸ್ಕರ್, ನಿವೇದಿತಾ ಕೊಳಂಬಕರ್,ಚೇತನಾ ಕೊರ್ಚೆಕರ್, ಚಂದ್ರಕಲಾ ಅಂಕೋಲಾ ಪ್ರತಿಭಟನೆಯಲ್ಲಿದ್ದರು.