ಹೊಸದುರ್ಗ: ಬೆಂಬಲ ಬೆಲೆ ಯೋಜನೆಯಡಿ ರಾಗಿ ಮಾರಾಟ ಮಾಡಿರುವ ರೈತರಿಗೆ ಹಣ ಪಾವತಿಸುವಂತೆ ಆಗ್ರಹಿಸಿ ಆ.10ರಿಂದ ತಾಲೂಕು ಕಚೇರಿ ಆವರಣದಲ್ಲಿ ರೈತ ಸಂಘ ಅರ್ನಿಧಿಷ್ಟಾವದಿ ಮುಷ್ಕರ ಹಮ್ಮಿಕೊಂಡಿದೆ.
ಈ ಸಂಬಂಧ ಸೋಮವಾರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ ಮುಖಂಡರು, ರಾಗಿ ಮಾರಾಟ ಮಾಡಿದ 600 ರೈತರಿಗೆ ಅಧಿಕೃತ ಗೈನ್ ಓಚರ್ ನೀಡುವ ಬದಲು ಖರೀದಿ ಕೇಂದ್ರದ ಅಧಿಕಾರಿಗಳು ಬಿಳಿ ಚೀಟಿ ನೀಡಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದರು.
ರೈತರು ರಾಗಿ ಹಣಕ್ಕಾಗಿ ಹೋರಾಟ ನಡೆಸಿದಾಗ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಉಪವಿಭಾಗಾಧಿಕಾರಿಗಳು ಒಂದು ವಾರದಲ್ಲಿ ಬಿಳಿ ಚೀಟಿ ಪಡೆದಿರುವ ರೈತರಿಗೆ ಹಣ ಪಾವತಿ ಮಾಡಲಾಗುವುದು ಎಂದು ತಿಳಿಸಿದ್ದರು.
ಆದರೆ, ನಾಲ್ಕು ತಿಂಗಳು ಕಳೆದರೂ ಹಣ ಪಾವತಿಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಈ ಕೂಡಲೇ ರೈತರಿಗೆ ಹಣ ಬಿಡುಗಡೆ ಮಾಡದಿದ್ದರೆ ಗುರುವಾರ ತಾಲೂಕು ಕಚೇರಿ ಆವರಣದಲ್ಲಿ ಅರ್ನಿಧಿಷ್ಟಾವಧಿಯ ಮುಷ್ಕರ ನಡೆಸಲಾಗುವುದು.
ಹಣ ಬಿಡುಗಡೆಯಾಗುವರಗೆ ಸ್ಥಳದಲ್ಲೇ ಮೊಕ್ಕಾಂ ಹೂಡಲಾಗುವುದು ಎಂದು ಎಚ್ಚರಿಸಿದರು.
ಧರಣಿ ನಡೆಸುವ ಕುರಿತು ಪೋಲಿಸ್ ಹಾಗೂ ತಾಲೂಕು ಆಡಳಿತಕ್ಕೆ ಲಿಖಿತವಾಗಿ ಮನವಿ ಸಲ್ಲಿಸಲಾಗಿದೆ. ಕೂಡಲೇ ಸರ್ಕಾರ ರೈತರ ನೆರವಿಗೆ ಬಾರದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ತಾಲೂಕು ಅಧ್ಯಕ್ಷ ಬೋರೇಶ್, ಕಾರ್ಯಾಧ್ಯಕ್ಷ ಕೊರಟಿಕೆರೆ ಮಹೇಶ್ವರಪ್ಪ, ನೀರಗುಂದ ರಘು, ಕರಿಸಿದ್ದಯ್ಯ, ರಾಜಪ್ಪ, ಸತೀಶ, ಬಸವರಾಜ, ಚಿತ್ತಯ್ಯ ಇತರರಿದ್ದರು.