ಜಿಲ್ಲೆ

ಫೆ.೨೧ ರಂದು ಸಿಎನ್‌ಸಿಯಿಂದ ಧರಣಿ

ಆದರ್ಶ್. ಎಂ.ಕೆ.

ಮಡಿಕೇರಿ: ಕೊಡವ ಭಾಷೆಯನ್ನು ಸಂವಿಧಾನದ ೮ನೇ ಶೆಡ್ಯೂಲ್‌ಗೆ ಸೇರಿಸಬೇಕು ಎಂದು ಒತ್ತಾಯಿಸಿ ವಿಶ್ವ ರಾಷ್ಟ್ರ ಸಂಸ್ಥೆಯ ಅಂತರರಾಷ್ಟ್ರೀಯ ಮಾತೃಭಾಷಾ ದಿನವಾದ ಫೆ.೨೧ ರಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.


ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೆಳಗ್ಗೆ ೧೦.೩೦ ಗಂಟೆಗೆ ಶಾಂತಿಯುತ ಧರಣಿ ಸತ್ಯಾಗ್ರಹ ನಡೆಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುವುದು ಎಂದ ಅವರು, ಯುನೇಸ್ಕೋದ ೨೦೨೪ ರ ಘೋಷವಾಕ್ಯದಂತೆ ಅಂತರ ಜನಾಂಗದ ತಿಳುವಳಿಕೆಗೆ ವಿಶ್ವದಾದ್ಯಂತ ಎಲ್ಲಾ ಮಾತೃಭಾಷೆಗಳನ್ನು ಶಿಕ್ಷಣ ಸಂಸ್ಥೆಗಳಲ್ಲಿ ಪ್ರಚುರ ಪಡಿಸುವುದು ಈ ಬಾರಿಯ ಮಹತ್ವವಾಗಿದೆ. ಕೊಡವ ಭಾಷೆ, ಪ್ರಕೃತಿಯ ಆರಾಧಕರಾಗಿರುವ ಆದಿಮ ಸಂಜಾತ ಕೊಡವರ ಮಾತೃಭಾಷೆಯಾಗಿದ್ದು, ಜೀವನದ ಆತ್ಮವಾಗಿದೆ. ಜನ್ಮ ನೀಡಿದ ತಾಯಿ, ಮಾತೃಭಾಷೆ ಕೊಡವ, ಮಾತೃಭೂಮಿ ಕೊಡವ ಲ್ಯಾಂಡ್, ಮಾತೆ ಕಾವೇರಿ ಮತ್ತು ಪ್ರಕೃತಿ ಮಾತೆಯಿಂದ ಕೊಡವ ಜನಜೀವನವನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


ಸಂವಿಧಾನದ ೮ ನೇ ಶೆಡ್ಯೂಲ್‌ಗೆ ಕೊಡವ ಭಾಷೆಯನ್ನು ಸೇರಿಸಬೇಕು. ಕೊಡವ ಭಾಷಾ ಜನಾಂಗದ ಸಮಗ್ರ ಸಬಲೀಕರಣಕ್ಕಾಗಿ ಕೊಡವಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ ನೀಡಬೇಕು. ಕೊಡವ ಜನಾಂಗಕ್ಕೆ ಎಸ್‌ಟಿ ಟ್ಯಾಗ್‌ನೊಂದಿಗೆ ಆಂತರಿಕ ರಾಜಕೀಯ ಸ್ವ-ನಿರ್ಣಯದ ಹಕ್ಕುಗಳನ್ನು ನೀಡಬೇಕು ಎಂದು ಧರಣಿ ಸಂದರ್ಭ ಒತ್ತಾಯಿಸುವುದಾಗಿ ನಾಚಪ್ಪ ತಿಳಿಸಿದ್ದಾರೆ.