ಜಿಲ್ಲೆ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿಎನ್‌ಸಿಯಿಂದ ಧರಣಿ

ಮಡಿಕೇರಿ: ವಿಶ್ವ ಆದಿಮಸಂಜಾತ ಸ್ಥಳೀಯ ಜನರ ಅಂತರಾಷ್ಟ್ರೀಯ ದಿನದ ಪ್ರಯುಕ್ತ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶಾಂತಿಯುತ ಧರಣಿ ಸತ್ಯಾಗ್ರಹ ನಡೆಸಿತು.


ಧರಣಿಯ ನೇತೃತ್ವ ವಹಿಸಿ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ಕೊಡವ ಸ್ವಯಂ ನಿರ್ಣಯ ಹಕ್ಕು ಮತ್ತು ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತತ್ತೆಯನ್ನು ಒಳಗೊಂಡ ವಿವಿಧ ರಾಜ್ಯಾಂಗದತ್ತ ಹಕ್ಕುಗಳ ಬೇಡಿಕೆಗಳ ಕುರಿತು ಸರ್ಕಾರಗಳು ಸೂಕ್ತ ಸ್ಪಂದನೆಯನ್ನು ನೀಡಬೇಕೆಂದು ಒತ್ತಾಯಿಸಿದರು.


ಕೊಡವರು ವಿಶಿಷ್ಟವಾದ ಸಾಮಾಜಿಕ, ಸಾಂಸ್ಕೃತಿಕ ವ್ಯವಸ್ಥೆಯನ್ನು ಹೊಂದಿರುವ ಬುಡಕಟ್ಟು ಜನಾಂಗದವರಾಗಿದ್ದಾರೆ. ವಿಭಿನ್ನ ಭಾಷೆ ಮತ್ತು ನಂಬಿಕೆಗಳನ್ನು ಹೊಂದಿದ್ದಾರೆ. ಸಾಂಪ್ರದಾಯಿಕವಾಗಿ ಅವರು ಕೊಡವ ಭೂಮಿಯಲ್ಲೇ ಉಳಿದುಕೊಂಡಿದ್ದಾರೆ. ನಂಬಿಕೆ ಮತ್ತು ಸಂಸ್ಕೃತಿಯನ್ನು ತಮ್ಮ ಹೊಸ ಪೀಳಿಗೆಗೆ ರವಾನಿಸಿದ್ದಾರೆ. ಈ ರೀತಿಯ ವಿಶಿಷ್ಟ ಮತ್ತು ಅತಿಸೂಕ್ಷ್ಮ ಜನಾಂಗದ ಹಕ್ಕುಗಳನ್ನು ಆಡಳಿತ ವ್ಯವಸ್ಥೆ ಮುಂದೆ ಪ್ರತಿಪಾದಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.


ಸ್ಥಳೀಯ ಜನರ ಹಕ್ಕುಗಳ ಕುರಿತು ವಿಶ್ವ ರಾಷ್ಟ್ರಸಂಸ್ಥೆ ೨೦೦೭ ಸೆಪ್ಟಂಬರ್‌ನಲ್ಲಿ ಜನರಲ್ ಅಸೆಂಬ್ಲಿ ಆದಿಮಸಂಜಾತ ಸ್ಥಳೀಯರ ಹಕ್ಕುಗಳ ಘೋಷಣೆಯನ್ನು ಅಂಗೀಕರಿಸಿತು. ಈ ಘೋಷಣೆಯು ಸ್ಥಳೀಯ ಜನರ ಹಕ್ಕುಗಳನ್ನು ರಕ್ಷಿಸುತ್ತದೆ. ಸಾಂಪ್ರದಾಯಿಕ ಜ್ಞಾನ ಮತ್ತು ಸಂಪನ್ಮೂಲಗಳನ್ನು ಒಳಗೊಂಡಂತೆ ಅವರ ಸಾಮೂಹಿಕ ಜೈವಿಕ-ಸಾಂಸ್ಕೃತಿಕ ಪರಂಪರೆ, ಪ್ರಾಂತ್ಯಗಳು, ಮತ್ತು ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳು ಮತ್ತು ಸಾಂಪ್ರದಾಯಿಕ ಕಾಯ್ದೆಗಳನ್ನು ಕಾನೂನುಬದ್ಧವಾಗಿ, ಭಾರತ ಸೇರಿದಂತೆ ೧೪೬ ದೇಶಗಳು ಈ ಘೋಷಣೆಯನ್ನು ಅಂಗೀಕರಿಸಿವೆ ಎಂದರು.


೨೬ನೇ ವಿಧಿಯು ಸ್ಥಳೀಯ ಜನರಿಗೆ ಭೂಮಿಯ ಹಕ್ಕಿದೆ ಎಂದು ಹೇಳುತ್ತದೆ. ಭೂಪ್ರದೇಶಗಳು ಮತ್ತು ಅವರ ಸಾಂಪ್ರದಾಯಿಕ ಒಡೆತನದ, ಆಕ್ರಮಿಸಿಕೊಂಡ ಅಥವಾ ಇತರ ಸಂಪನ್ಮೂಲಗಳನ್ನು ಹೊಂದಲು, ಬಳಸಲು, ಅಭಿವೃದ್ಧಿಪಡಿಸಲು ಮತ್ತು ನಿಯಂತ್ರಿಸಲು ಅವರಿಗೆ ಹಕ್ಕಿದೆ. ೩೨ನೇ ವಿಧಿಯಂತೆ ಸ್ಥಳೀಯ ಜನರು ಆದ್ಯತೆಗಳನ್ನು ನಿರ್ಧರಿಸುವ ಮತ್ತು ಅಭಿವೃದ್ಧಿಪಡಿಸುವ ಹಕ್ಕನ್ನು ಹೊಂದಿದ್ದಾರೆ. ಸಿಎನ್‌ಸಿ ಸಂಘಟನೆ ಕೊಡವಲ್ಯಾಂಡ್‌ಗಾಗಿ ಶ್ರಮಿಸುತ್ತಿದೆ. ಭೌಗೋಳಿಕ-ರಾಜಕೀಯ ಸ್ವಾಯತ್ತತೆ, ಆಂತರಿಕ ರಾಜಕೀಯ ಸ್ವ-ನಿರ್ಣಯದ ಹಕ್ಕು ಮತ್ತು ಮಿನಿಸ್ಕ್ಯೂಲ್ ಮೈಕ್ರೋ ಕೊಡವ ಜನಾಂಗೀಯ ಬುಡಕಟ್ಟು ಕುಲಕ್ಕೆ ಎಸ್‌ಟಿ ಟ್ಯಾಗ್ ಪ್ರತಿಪಾದಿಸುತ್ತ ಕಳೆದ ೩೩ ವರ್ಷಗಳಿಂದ ಹಕ್ಕೊತ್ತಾಯ ಮಂಡಿಸುತ್ತಾ ಬಂದಿದೆ ಎಂದರು.


ಕೊಡವರು ಕೊಡಗಿಗೆ ಸಿಮೀತವಾದ ಜನರಾಗಿದ್ದು, ಹೊರಗೆ ಎಲ್ಲಿಯೂ ಕೊಡವರಿಗೆ ತಾಯಿ ಬೇರಿಲ್ಲ. ಆದಿಮಸಂಜಾತ ಜನರಾಗಿರುವ ಕೊಡವರು, ಭೂಮಿ ಸೃಷ್ಟಿಯಾದ ದಿನದಿಂದಲೂ ಕೊಡಗನ್ನು ತಮ್ಮ ಅವಿಭಾಜ್ಯ ಮತ್ತು ಸಾಂಪ್ರದಾಯಿಕ ಜನ್ಮಭೂಮಿಯನ್ನಾಗಿ ಪಡೆದಿದ್ದಾರೆ. ಆದ್ದರಿಂದ ಭಾರತದ ಈಶಾನ್ಯ ಪ್ರಾಂತ್ಯದಲ್ಲಿ ೧೦ ಸ್ವಾಯತ್ತ ಪ್ರದೇಶಗಳಿಗೆ ಸಮಾನವಾಗಿ ಸ್ವಯಂ ನಿರ್ಣಯದ ಹಕ್ಕನ್ನು ಕೊಡವರಿಗೂ ಅಳವಡಿಸಬೇಕು. ಆದಿವಾಸಿ ಮೂಲನಿವಾಸಿ ಕೊಡವ ಜನಾಂಗವನ್ನು ನಮ್ಮ ಸಂವಿಧಾನದ ಎಸ್.ಟಿ ಪಟ್ಟಿಯಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿದರು.


ಪ್ರತಿಭಟನಾ ನಿರತರು ಹೆಚ್ಚುವರಿ ಜಿಲ್ಲಾಧಿಕಾರಿ ಡಾ॥ ನಂಜುಂಡೇಗೌಡರವರ ಮೂಲಕ ಸರ್ಕಾರಕ್ಕೆ ಹಕ್ಕೊತ್ತಾಯಗಳ ಮನವಿ ಪತ್ರವನ್ನು ಸಲ್ಲಿಸಿದರು. ಸತ್ಯಾಗ್ರಹದಲ್ಲಿ ಕೊಡವ ಸಾಂಪ್ರದಾಯಿಕ ಪುರಾತನ ಕಲಾಕೃತಿಗಳನ್ನು ಪ್ರದರ್ಶಿಸಲಾಯಿತು.


ಪ್ರತಿಭಟನೆಯಲ್ಲಿ ಪುಲ್ಲೇರ ಸ್ವಾತಿ ಕಾಳಪ್ಪ, ಪಟ್ಟಮಾಡ ಲಲಿತ, ಕೂಪದಿರ ಪುಷ್ಪ, ಮುತ್ತಪ್ಪ, ಚೋಳಪಂಡ ಜ್ಯೋತಿ ನಾಣಯ್ಯ, ಕಲಿಯಂಡ ಪ್ರಕಾಶ್, ಜಮ್ಮಡ ಮೋಹನ್, ಬಾಚರಣಿಯಂಡ ಚಿಪ್ಪಣ್ಣ, ಅಜ್ಜಿಕುಟ್ಟಿರ ಲೋಕೇಶ್, ಪಟ್ಟಮಾಡ ಕುಶ, ಚಂಬಂಡ ಜನತ್, ಕಾಂಡೇರ ಸುರೇಶ್ ಇತರರು ಪಾಲ್ಗೊಂಡಿದ್ದರು.