ಜಿಲ್ಲೆ

ಹುಲಿ ಯೋಜನೆ, ಪರಿಸರ ಸೂಕ್ಷ್ಮ ವಲಯ ವಿರೋಧಿಸಿ ಬೃಹತ್ ಪ್ರತಿಭಟನೆ-ಖಾಂಡ್ಯ ಬಂದ್

madikerimailmanju

ಚಿಕ್ಕಮಗಳೂರು: ಮಲೆನಾಡಿಗೆ ಮಾರಕವಾದ ಹುಲಿ ಯೋಜನೆ, ಕಸ್ತೂರಿ ರಂಗನ್ ವರದಿ, ಪರಿಸರ ಸೂಕ್ಷ್ಮವಲಯ ಹಾಗೂ ಬಫರ್ ಜೋನ್ ಯೋಜನೆ ವಿರೋಧಿಸಿ ಖಾಂಡ್ಯ ನಾಗರಿಕ ರಕ್ಷಣಾ ವೇದಿಕೆ ಸೋಮವಾರ ಕರೆ ನೀಡಿದ್ದ ಖಾಂಡ್ಯ ಹೋಬಳಿ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸಂಗಮೇಶ್ವರಪೇಟೆಯ ಹೆಬ್ಬೆ ಭದ್ರಾ ಹುಲಿ ಸಂರಕ್ಷಿತಾ ಅರಣ್ಯಾಧಿಕಾರಿ ಕಚೇರಿಯಿಂದ ಹೊರಟ ನೂರಾರು ಪ್ರತಿಭಟನಾಕಾರರು ಕಾಲ್ನಡಿಗೆ ಜಾಥಾ ನಡೆಸಿ ಸಮೀಪದ ಕಡಬಗೆರೆಯ ಗಾಂಧಿ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಿ ಸರ್ಕಾರದ ನಿಲುವನ್ನು ವಿರೋಧಿಸಿದರು. ಯೋಜನೆಯನ್ನು ಪಕ್ಷಾತೀತವಾಗಿ ವಿರೋಧಿಸುವ ಪ್ರತಿಜ್ಞೆ ಕೈಗೊಂಡರು.

ಸಮಸ್ಯೆ ಪರಿಹಾರಕ್ಕೆ ಚರ್ಚೆ ಅಗತ್ಯ

ಪ್ರಸ್ತುತ ಮಲೆನಾಡಿಗೆ ಬಂದಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಚರ್ಚೆ, ವಿಮರ್ಶೆ ಅಗತ್ಯವಿದೆ ಎಂದು ವಿಧಾನಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಹೇಳಿದರು. ಇಂತಹ ಸಮಸ್ಯೆಗಳಿಗೆ ಶಾಂತಿಯುತ ಹೋರಾಟದ ಮೂಲಕವೇ ಪರಿಹಾರ ಸಾಧ್ಯ. ಹೊರ ರಾಜ್ಯದಿಂದ ಬರುವ ಕೆಲ ಅಧಿಕಾರಿಗಳು ನಾವು ಬದುಕುವ ಶೈಲಿಯನ್ನು ಕಂಡು ಅಸೂಯೆಯಿಂದ ನಮ್ಮ ಮೇಲೆ ಬರೆ ಎಳೆಯುವ ಕಾರ್ಯ ಮಾಡುತ್ತಿದ್ದಾರೆ. ಸಾಮಾನ್ಯ ಜನರ ಬದುಕಿನೊಂದಿಗೆ ಚೆಲ್ಲಾಟ ಬೇಡ. ರಾಜಕಾರಣಿಗಳು ಹಾಗೂ ಸಾರ್ವಜನಿಕರು ಘರ್ಷಣೆ ಮಾಡಿಕೊಳ್ಳುವುದೂ ಬೇಡ. ಈಗಾಗಲೇ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರವನ್ನು ಸಂಪರ್ಕಿಸುವ ಪ್ರಯತ್ನ ಆಗಿದೆ ಎಂದರು.

ನಮ್ಮ ಜಿಲ್ಲೆಯೇ ಏಕೆ ಬೇಕು?

ಪರಿಸರಕ್ಕೆ ಸಂಬಂಧಿಸಿದ ಎಲ್ಲ ಯೋಜನೆಗಳನ್ನು ಜಾರಿ ಮಾಡಲು ಚಿಕ್ಕಮಗಳೂರು ಜಿಲ್ಲೆಯೇ ಏಕೆ ಬೇಕು ಎಂದು ಮಾಜಿ ಎಂಎಲ್ಸಿ ಗಾಯತ್ರಿ ಶಾಂತೇಗೌಡ ಪ್ರಶ್ನಿಸಿದರು. ಎಲ್ಲ ಪರಿಸರ ಯೋಜನೆಗಳನ್ನು ತಂದು ನಮ್ಮ ಜಿಲ್ಲೆಯ ಮೇಲೆ ಹೇರಲಾಗುತ್ತಿದೆ. ಪ್ರಸ್ತುತ ಉದ್ಭವಿಸಿರುವ ಸಮಸ್ಯೆ 10-15 ವರ್ಷಗಳ ಹಿಂದಿನಿಂದಲೂ ಇದ್ದು, ಇಂದು ಬಿಗಡಾಯಿಸಿದೆ. ಅಧಿಕಾರಿಶಾಹಿಗಳಿಂದ ಇಂತಹ ಸಮಸ್ಯೆ ಉದ್ಭವಿಸುತ್ತಿದ್ದು, ಇದನ್ನು ಪರಿಹರಿಸಲು ರಾಜಕಾರಣಿಗಳಿಗೆ ಏಕೆ ಆಗುತ್ತಿಲ್ಲ. ಇಚ್ಛಾಶಕ್ತಿ ಕೊರತೆಯಿದೆಯೇ ಎಂದು ನಮ್ಮನ್ನು ನಾವೇ ಪ್ರಶ್ನೆ ಮಾಡಿಕೊಳ್ಳಬೇಕಿದೆ ಎಂದರು.

ಮರು ಪರಿಶೀಲಿಸುವಂತೆ ಪತ್ರ

ಮಲೆನಾಡಿಗೆ ಯೋಜನೆಗಳ ವಿರುದ್ಧ ನಡೆಸುವ ಪಕ್ಷಾತೀತ ಹೋರಾಟಕ್ಕೆ ನಮ್ಮ ಪಕ್ಷದ ಬೆಂಬಲ ಸದಾ ಇರುತ್ತದೆ ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಹೇಳಿದರು.ನಾಗರಿಕರ ಹಿತರಕ್ಷಣಾ ಸಮಿತಿ ನಡೆಸುವ ಹೋರಾಟಕ್ಕೆ ಸಂಪೂರ್ಣ ಸಹಕರಿಸಲಿದೆ. ಪ್ರಸ್ತುತ ಮಲೆನಾಡಿಗೆ ಪರಿಸರ ಸೂಕ್ಷ್ಮ ವಲಯದ ಗಂಭೀರತೆ ಹೆಚ್ಚಾಗಿದೆ. ಎನ್ ಜಿಒ, ಅಧಿಕಾರಿಗಳ ಕುತಂತ್ರದಿಂದ ಇದು ಹೆಚ್ಚಿದೆ. ಜಿಲ್ಲೆಯ ಜನಪ್ರತಿನಿಧಿಗಳು, ಮುಖಂಡರು ಸಿಎಂ ಅವರನ್ನು ಭೇಟಿ ಮಾಡಿದಾಗ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ನಿಯೋಗ ಭೇಟಿ ಮಾಡಿದ ಮರುದಿನವೇ ಕೇಂದ್ರಕ್ಕೆ ಯೋಜನೆಯನ್ನು ತಾತ್ಕಾಲಿಕ ತಡೆಹಿಡಿದು ಮರು ಪರಿಶೀಲಿಸುವಂತೆ ಪತ್ರ ಬರೆಯಲಾಗಿದೆ. ಯೋಜನೆ ಕುರಿತು ಆಕ್ಷೇಪಣೆ ಸಲ್ಲಿಸಲು ಇರುವ ಸಮಯವನ್ನು ವಿಸ್ತರಿಸುವಂತೆ ಸಹ ಕ್ರಮ ಕೈಗೊಳ್ಳಲಾಗಿದೆ ಎಂದರು.

ಬಯಲುಸೀಮೆಯಲ್ಲಿ ಅರಣ್ಯ ಬೆಳೆಸಲಿ

ಯೋಜನೆಗಳನ್ನು ಜಾರಿ ಮಾಡುವ ಸಂದರ್ಭ ಹಲವು ಕ್ರಮ ಕೈಗೊಳ್ಳಲು ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರೂ ಅಧಿಕಾರಿಗಳು ಪಾಲಿಸುತ್ತಿಲ್ಲ. ಜನಸಾಮಾನ್ಯರಿಗೆ ಪೂರಕವಾಗಿ ಕರ್ತವ್ಯ ನಿರ್ವಹಿಸುವುದನ್ನು ಅಧಿಕಾರಿಗಳು ಮರೆತಿದ್ದಾರೆ ಎಂದು ಶಾಸಕ ಟಿ.ಡಿ.ರಾಜೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಮಲೆನಾಡಿಗರು ಎಂದಿಗೂ ಪರಿಸರ ಹಾಳು ಮಾಡುವುದಿಲ್ಲ. ರೈತರಿಂದ ನಿರಂತರ ಪರಿಸರ ಸಂರಕ್ಷಣೆಯಾಗುತ್ತಿದೆ. ಅಧಿಕಾರಿಗಳಿಗೆ ಪರಿಸರ ರಕ್ಷಣೆ ಮಾಡಬೇಕು ಎಂಬ ಕಾಳಜಿ ಇದ್ದರೆ ಬಯಲುಸೀಮೆಗೆ ಹೋಗಿ ಅರಣ್ಯ ಮಾಡುವ ಕಾರ್ಯ ಮಾಡಲಿ ಎಂದು ಹರಿಹಾಯ್ದರು. ಯೋಜನೆಗಳ ವಿರುದ್ಧ ಸಂಘಟಿತ ಹೋರಾಟ ನಡೆಸಿ ಅಧಿಕಾರಿಗಳ ಇಂತಹ ಜನವಿರೋಧಿ ಕಾನೂನಿಗೆ ಕಡಿವಾಣ ಹಾಕಬೇಕಿದೆ ಎಂದರು.

ಪಕ್ಷಭೇದ ಮರೆತು ಹೋರಾಟ

ಖಾಂಡ್ಯ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಬಿ.ಎನ್.ಸೋಮೇಶ್ ಮಾತನಾಡಿ, ಸ್ಥಳೀಯ ಜನರ ಬದುಕಿಗೆ ಮಾರಕವಾದ ಯೋಜನೆಗಳ ವಿರುದ್ಧ ಇದೇ ಮೊದಲ ಬಾರಿಗೆ ಪಕ್ಷಭೇದ ಮರೆತು ಹೋರಾಟ ನಡೆಸಲಾಗಿದೆ. ಯುವಕರೇ ಹೆಚ್ಚಾಗಿ ಹೋರಾಟದ ನೇತೃತ್ವ ವಹಿಸಿದ್ದಾರೆ. ಅಧಿಕಾರಿಗಳ ಒಡೆದಾಳುವ ನೀತಿ ವಿರುದ್ಧ ಸಂಘಟಿತರಾಗಿ ಹೋರಾಡಬೇಕಿದೆ ಎಂದರು.

ವಿಹಿಂಪ ಮುಖಂಡ ಬಿ.ಎ.ಶಿವಶಂಕರ್ ಮಾತನಾಡಿ, ಅರಣ್ಯದ ಬಗ್ಗೆ ತಿಳಿವಳಿಕೆ ಇಲ್ಲದ ಅಧಿಕಾರಿಗಳು ಮಲೆನಾಡಿಗರಿಗೇ ಪರಿಸರದ ಬಗ್ಗೆ ಪಾಠ ಮಾಡಲು ಬರುತ್ತಿದ್ದಾರೆ. ಬಯಲುಸೀಮೆಯಿಂದ ಬಂದ ಅಧಿಕಾರಿಗಳಿಗಿಂತ ಮಲೆನಾಡಿನ ಜನರಿಗೆ ಪರಿಸರ ಕಾಳಜಿ ಹೆಚ್ಚಿದೆ. ಯೋಜನೆ ಜಾರಿಯಾದರೆ ಮುಂದಿನ ಯಾವ ಎಲ್ಲ ಚುನಾವಣೆಗಳಲ್ಲೂ ಮತದಾನ ಬಹಿಷ್ಕಾರ ಮಾಡಲಿದ್ದಾರೆ ಎಂದರು.

ಕೃಷಿಕರ ಬದುಕು ಸರ್ವನಾಶ ಯತ್ನ

ಕಾಫಿ ಮಂಡಳಿ ನಿರ್ದೇಶಕ ಉದಯಕುಮಾರ್ ಹೆಗ್ಡೆ ಮಾತನಾಡಿ, ದೇಶದ ಅಭಿವೃದ್ಧಿಗೆ ಶೇ.18 ಜಿಡಿಪಿ ಕೊಡುಗೆ ನೀಡುತ್ತಿರುವ ಕೃಷಿಕರ ಬದುಕನ್ನು ಸರ್ವನಾಶ ಮಾಡಲು ಹೊರಟಿದ್ದಾರೆ. 30-40 ಹುಲಿಗಳಿಗಾಗಿ ಜನರ ಜೀವನವನ್ನು ಸಂಕಷ್ಟಕ್ಕೆ ತಂದಿಟ್ಟಿದ್ದಾರೆ ಎಂದು ದೂರಿದರು.

ಕೆಪಿಸಿಸಿ ಕಿಸಾನ್ ಸೆಲ್ ಅಧ್ಯಕ್ಷ ಸಚಿನ್ ಮೀಗಾ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ವಕೀಲ ಸುಧೀರ್ಕುಮಾರ್ ಮುರೊಳ್ಳಿ, ತಾಲೂಕು ಬಿಜೆಪಿ ಅಧ್ಯಕ್ಷ ಅರುಣ್ಕುಮಾರ್, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಗೇರುಬೈಲು ನಟರಾಜ್, ಜಿಪಂ ಸದಸ್ಯೆ ಕವಿತಾ ಲಿಂಗರಾಜು, ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಟಿ.ಎಂ.ಉಮೇಶ್ ಕಲ್ಮಕ್ಕಿ, ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಭಾಸ್ಕರ್ ವೆನಿಲ್ಲಾ, ಹೋಬಳಿ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿ, ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಹನೀಫ್, ಖಾಂಡ್ಯ ನಾಗರಿಕ ಹಿತರಕ್ಷಣಾ ವೇದಿಕೆ ಸದಸ್ಯರಾದ ಎಂ.ಜೆ.ಚಂದ್ರಶೇಖರ್, ಎಂ.ಕೆ.ಪ್ರೇಮೇಶ್, ಸುರೇಶ್ ಮಾಗಲು, ಚಂದ್ರಶೇಖರ್ ರೈ, ಎಸ್.ಜೆ.ಜಯಶೀಲ್, ಬಿ.ಸಿ.ರೇವಣ್ಣ, ಗುರುಮೂರ್ತಿ, ರತನ್, ಎಸ್.ವಿ.ಶಂಕರ್, ಎ.ಕೆ.ಸಂದೇಶ್, ಮಸೀಗದ್ದೆ ಸತೀಶ್, ನವೀನ್ ಕರಗಣೆ, ರಾಜು ಮಾಗಲು, ಪಿಎಸಿಎಸ್ ಅಧ್ಯಕ್ಷ ಕೆ.ಎಲ್.ಚಂದ್ರೇಗೌಡ ಇತರರಿದ್ದರು.