ಜಿಲ್ಲೆ

ವಸತಿ ಸಂಕೀರ್ಣದ ಕಳ್ಳತನ ಭೇದಿಸಿ: ಕೈಗಾ ನೌಕರರ ಒತ್ತಾಯ

Uttara Kannada - Subash Hegde

ಕಾರವಾರ: ಮಲ್ಲಾಪುರ ಕೈಗಾ ವಸತಿ ಸಂಕೀರ್ಣದಲ್ಲಿ ನಡೆದಿರುವ ಸರಣಿ ಕಳ್ಳತನ ಪ್ರಕರಣಗಳನ್ನು ಭೇದಿಸುವಂತೆ ಆಗ್ರಹಿಸಿ ಕೈಗಾ ಪರಿಯೋಜನಾ ನೌಕರರ ಸಂಘದಡಿ ಎನ್‌ಪಿಸಿಐಎಲ್ ನೌಕರರು ಹಾಗೂ ಅವರ ಕುಟುಂಬದವರು ಬುಧವಾರ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಮಲ್ಲಾಪುರ ಟೌನ್‌ಶಿಪ್‌ನಿಂದ ಸಾಯಂಕಾಲ 700 ಕ್ಕೂ ಅಧಿಕ ಜನರು ಮೌನ ಮೆವರಣಿಗೆ ನಡೆಸಿಕೊಂಡು ಮಲ್ಲಾಪುರ ಪೊಲೀಸ್ ಠಾಣಾಽಕಾರಿಗಳಿಗೆ ಮನವಿ ಸಲ್ಲಿಸಿದರು.

ಮಲ್ಲಾಪುರ ಟೌನ್‌ಶಿಪ್‌ನ ಮನೆಯೊಂದರಲ್ಲಿ 2024 ರ ಡಿಸೆಂಬರ್ ತಿಂಗಳಲ್ಲಿ ಮೊದಲ ಕಳ್ಳತನ ಪ್ರಕರಣ ನಡೆದಿತ್ತು. ನಂತರದ ೬ ತಿಂಗಳಲ್ಲಿ ಮತ್ತೆ ಮೂರು ಮನೆಗಳಲ್ಲಿ ಕಳ್ಳತನಗಳು ನಡೆದಿವೆ. 800 ಗ್ರಾಂನಷ್ಟು ಬಂಗಾರ ಹಾಗೂ ಕೆಜಿಗೂ ಅಧಿಕ ಬೆಳ್ಳಿಯ ಆಭರಣಗಳನ್ನು ಕದಿಯಲಾಗಿವೆ. ಎಲ್ಲವೂ ಮಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮನೆಯಲ್ಲಿ ಅಳವಡಿಸಿದ ಸಿಸಿ ಕ್ಯಾಮರಾದಲ್ಲಿ ಮುಸುಕುಧಾರಿಯ ವಿಡಿಯೋ ಕೂಡ ದಾಖಲಾಗಿದೆ.

ಹಗಲಿನ ವೇಳೆಯಲ್ಲಿ ಹಲವು ದಿನಗಳಿಂದ ರಜೆಯ ಮೇಲೆ ಹೋದ ನೌಕರರ ಮನೆಗಳಲ್ಲಿ ಕಳ್ಳತನ ನಡೆಯುತ್ತಿದೆ.ಈ ನಿರಂತರ ಕಳ್ಳತನಗಳಿಂದ ಕೈಗಾ ಅಣು ವಿದ್ಯುತ್ ಯೋಜನೆ ನೌಕರರು ಭಯಗೊಂಡಿದ್ದಾರೆ. ಈ ಬಗ್ಗೆ ತನಿಖೆ ಕೈಗೊಂಡು ಶೀಘ್ರ ಕಳ್ಳರನ್ನು ಬಂಽಸಬೇಕು ಎಂದು ಒತ್ತಾಯಿಸಿದರು. ನೌಕರರ ಸಂಘದ ಅಧ್ಯಕ್ಷ ಜಗದೀಶ ಎನ್.ಗುನಗಾ, ಕಾರ್ಯದರ್ಶಿ ರಾಜೇಶ ಕುಮಾರ ಪೈ ನೇತೃತ್ವ ವಹಿಸಿದ್ದರು.