* ಹೋಂ ಸ್ಟೇ ಮತ್ತು ರೆಸಾರ್ಟ್ ಮಾಲೀಕರಿಗೆ ಪ್ರವಾಸೋದ್ಯಮ ಇಲಾಖೆ ನೋಟಿಸ್
* ವಾರದಲ್ಲಿ ಮುಚ್ಚಳಿಕೆ ಕೊಡುವಂತೆ ನಿರ್ದೇಶನ
ಗಂಗಾಧರ್ ಬೈರಾಪಟ್ಟಣ ರಾಮನಗರ
ಕೊಪ್ಪಳ ಜಿಲ್ಲೆ ಗಂಗಾವತಿಯ ಆನೆಗುಂದಿ ಹೋಂ ಸ್ಟೇನಲ್ಲಿ ವಿದೇಶಿ ಮಹಿಳೆಯರ ಮೇಲೆ ಅತ್ಯಾಚಾರ ನಡೆದಿದೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆಯಲ್ಲಿ ಪ್ರವಾಸಿಗರ ರಕ್ಷಣೆ ದೃಷ್ಟಿಯಿಂದ ನೋಟಿಸ್ ನೀಡುವ ಮೂಲಕ ಕಟ್ಟು ನಿಟ್ಟಿನ ಕ್ರಮಕ್ಕೆ ಪ್ರವಾಸೋಧ್ಯಮ ಇಲಾಖೆ ಮುಂದಾಗಿದೆ.
ಈ ಸಂಬಂಧ ಸರ್ಕಾರ ಹೊರಡಿಸಿರುವ ಆದೇಶದಂತೆ ಜಿಲ್ಲಾ ವ್ಯಾಪ್ತಿಯಲ್ಲಿ ಇರುವ ಎಲ್ಲ ರೆಸಾರ್ಟ್‌ಗಳು ಮತ್ತು ಹೋಂ ಸ್ಟೇ ಮಾಲೀಕರಿಗೆ ಪ್ರವಾಸಿಗರ ಸುರಕ್ಷತೆ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತಂತೆ ತಿಳಿವಳಿಕೆ ನೀಡಿರುವ ಪ್ರವಾಸೋದ್ಯಮ ಇಲಾಖೆ, ಈ ಸಂಬಂಧ ಒಂದು ವಾರದಲ್ಲಿ ಮುಚ್ಚಳಿಕೆ ಬರೆದುಕೊಡುವಂತೆಯೂ ನಿರ್ದೇಶನ ನೀಡಿದೆ.
ಹೋಂ ಸ್ಟೇ ಮತ್ತು ರೆಸಾರ್ಟ್‌ಗಳಲ್ಲಿ ಸ್ಥಳೀಯ, ದೇಶೀಯ ಹಾಗೂ ವಿದೇಶಿ ಪ್ರವಾಸಿಗರ ಸುರಕ್ಷತೆಗೆ ಕ್ರಮವಹಿಸಬೇಕು. ಪ್ರಮುಖವಾಗಿ ಹೊರ ವಲಯ ಮತ್ತು ನಿರ್ಜನ ಪ್ರದೇಶಕ್ಕೆ ಪ್ರವಾಸಿಗರನ್ನು ಕರೆದುಕೊಂಡು ಹೋಗುವ ಮುಂಚಿತವಾಗಿ ರೆಸಾರ್ಟ್ ಯಾವ ವ್ಯಾಪ್ತಿಗೆ ಒಳಪಡುತ್ತದೋ ಅಂತಹ ಪೊಲೀಸ್ ಠಾಣೆ ಮತ್ತು ಅರಣ್ಯ ಇಲಾಖೆ ಕಚೇರಿಗೆ ಮಾಹಿತಿ ನೀಡಿ ಪೂರ್ವಾನುಮತಿ ಪಡೆದುಕೊಳ್ಳಬೇಕು. ಒಂದು ವೇಳೆ ಪೂರ್ವಾನುಮತಿ ಪಡೆದುಕೊಳ್ಳದೆ ನಿರ್ಜನ ಪ್ರದೇಶ ಮತ್ತು ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋದಾಗ ಕಾಡು ಪ್ರಾಣಿಗಳ ದಾಳಿ ಅಥವಾ ದುಷ್ಕರ್ಮಿಗಳು ಯಾವುದೇ ಅಪಾಯ ಸಂಭವಿಸಿದರೂ, ಇದಕ್ಕೆ ಹೋಂ ಸ್ಟೇ, ರೆಸಾರ್ಟ್ ಮಾಲೀಕರೇ ಹೊಣೆಗಾರರಾಗುತ್ತಾರೆ ಎನ್ನುವ ಎಚ್ಚರಿಕೆಯನ್ನು ಇಲಾಖೆ ನೀಡಿದೆ.
ಹೋಂ ಸ್ಟೇ ಮತ್ತು ರೆಸಾರ್ಟ್ ಮಾಲೀಕರು ಆದೇಶನುಸಾರ ನಿಯಮಗಳ ಜಾರಿಯನ್ನು ಸ್ವಯಂ ಅಳವಡಿಸಿಕೊಂಡು ಒಂದು ವಾರದಲ್ಲಿ ಇದಕ್ಕೆ ಸಂಬಂಧಿಸಿದಂತೆ ಮುಚ್ಚಳಿಕೆಯನ್ನು ಪ್ರವಾಸೋದ್ಯಮ ಇಲಾಖೆಗೆ ಸಲ್ಲಿಸಬೇಕಿದೆ. ಇದರ ಜತೆಗೆ ಬೇಸಿಗೆ ಸಮೀಪಿಸಿರುವ ಕಾರಣ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಲಿದ್ದು, ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಸಿಸಿ ಕ್ಯಾಮರಾ ಚಾಲ್ತಿಯಲ್ಲಿಟ್ಟುಕೊಳ್ಳುವ ಮೂಲಕ ಯಾವುದೇ ದುರ್ಘಟನೆಗೆ ಅವಕಾಶ ನೀಡದಂತೆ ನಿರ್ದೇಶನ ನೀಡಿದೆ.
ಲಭ್ಯ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಅಧಿಕೃತ ರೆಸಾರ್ಟ್ ಮತ್ತು ಹೋಂ ಸ್ಟೇಗಳಿಗಿಂತ ಅನಧಿಕೃವಾದವುಗಳೇ ಹೆಚ್ಚಿವೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿಯಾಗಿರುವ ಹೋಂ ಸ್ಟೇ ಮತ್ತು ರೆಸಾರ್ಟ್‌ಗಳ ಸಂಖ್ಯೆ 50 ದಾಟುವುದಿಲ್ಲ. ಕ್ರೀಡಾ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಒಂದು ರೆಸಾರ್ಟ್ ಮಾತ್ರ ಅನುಮತಿ ಪಡೆದುಕೊಂಡಿದೆ. ನಾಯಿ ಕೊಡೆಗಳಂತೆ ಎಲ್ಲೆಂದರಲ್ಲಿ ಹೋಂ ಸ್ಟೇಗಳು ತಲೆ ಎತ್ತಿದ್ದು, ಇವು ಸ್ಥಳೀಯ ಪಂಚಾಯಿತಿಗಳಿಂದ ಅನುಮತಿ ಪಡೆದುಕೊಂಡು ಕಾರ್ಯನಿರ್ವಹಿಸುತ್ತಿವೆ. ಅಲ್ಲಿ ಏನೆಲ್ಲ ಚಟುವಟಿಕೆಗಳು ನಡೆಯುತ್ತಿವೆ ಎನ್ನುವ ಮಾಹಿತಿ ಸಂಬಂಧಪಟ್ಟ ಇಲಾಖೆಗೆ ಇರುವುದೇ ಇಲ್ಲ. ಈ ಹಿನ್ನೆಲೆಯಲ್ಲಿ ಇಲಾಖೆ ಪ್ರವಾಸಿಗರ ರಕ್ಷಣೆ ದೃಷ್ಟಿಯಿಂದ ಅನಧಿಕೃತ ರೆಸಾರ್ಟ್ ಮತ್ತು ಹೋಂ ಸ್ಟೇಗಳ ಬಗ್ಗೆ ಹೆಚ್ಚಿನ ಗಮನಹರಿಸಿ, ಸರ್ಕಾರದ ನಿಯಮಗಳ ಪಾಲನೆಗೆ ಮುಂದಾಗುವಂತೆ ಮಾಡಬೇಕಿದೆ.
ಜಿಲ್ಲೆಯ ಹೋಂ ಸ್ಟೇ ಮತ್ತು ರೆಸಾರ್ಟ್‌ಗಳಿಗೆ ಬರುವ ಪ್ರವಾಸಿಗರು ಇವುಗಳ ಅಕ್ಕ ಪಕ್ಕದಲ್ಲಿಯೇ ಇರುವ ಇತರ ಪ್ರವಾಸಿ ತಾಣಗಳು, ಬೆಟ್ಟಗುಡ್ಡಗಳಿಗೆ ಟ್ರೆಕಿಂಗ್ ಹೋಗುವ ಪದ್ಧತಿಯೂ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಹ ಚಾರಣಕ್ಕೆ ಅವಕಾಶ ನೀಡುವ ಬೆಟ್ಟಗಳ ಬಳಿಯೂ ಪ್ರವಾಸಿಗರ ಸುರಕ್ಷತೆ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ರಾಮನಗರದ ರಾಮದೇವರ ಬೆಟ್ಟ ಪ್ರೇಮಿಗಳ ಪಾಲಿನ ಹಾಟ್ ೇವರಿಟ್ ಆಗಿದೆ. ಇಲ್ಲಿಯೂ ಆಗಾಗ ಅಹಿತಕರ ಘಟನೆಗಳು, ಆತ್ಮಹತ್ಯೆ ಯತ್ನದಂತಹ ಪ್ರಕರಣಗಳು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಇಲಾಖೆ ಹೆಚ್ಚಿನ ಗಮನ ಹರಿಸಬೇಕಿದೆ.
ಪ್ರವಾಸಿಗರ ಸುರಕ್ಷತೆಗಾಗಿ ಕ್ರಮ ಕೈಗೊಳ್ಳುವಂತೆ ಹೋಂ ಸ್ಟೇ ಮತ್ತು ರೆಸಾರ್ಟ್ ಮಾಲೀಕರಿಗೆ ಸರ್ಕಾರದ ಸೂಚನೆಯಂತೆ ನಿರ್ದೇಶನ ನೀಡಲಾಗಿದೆ. ಇಲಾಖೆಯಿಂದಲೂ ಸುರಕ್ಷತಾ ಕ್ರಮಗಳ ಪರೀಶೀಲನಾ ಕಾರ್ಯ ನಡೆಯಲಿದೆ. ರವಿಕುಮಾರ್, ಸಹಾಯಕ ನಿರ್ದೇಶಕ, ಪ್ರವಾಸೋಧ್ಯಮ ಇಲಾಖೆ ರಾಮನಗರ