ಜಿಲ್ಲೆ

ಕಾನೂನಿಗೆ ವಿರದ್ಧವಾಗಿದ್ದರೆ ಕಠಿಣ ಕ್ರಮ

ಮರಿದೇವ ಹೂಗಾರ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಕಮಿಷನರೇಟ್​ಗೆ ಮೊದಲ ಮಹಿಳಾ ಪೊಲೀಸ್ ಆಯುಕ್ತೆಯಾಗಿ ರೇಣುಕಾ ಸುಕುಮಾರ ಗುರುವಾರ ಕಮೀಷ್ನರ್ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ, ಈ ಹಿಂದೆ ಡಿಸಿಪಿಯಾಗಿ ಹುಬ್ಬಳ್ಳಿ-ಧಾರವಾಡದಲ್ಲಿ ಕಾರ್ಯ ನಿರ್ವಹಿಸಿದ್ದೇನೆ. ಇದೀಗ ಆಯಕ್ತರಾಗಿ ಅಧಿಕಾರ ಸ್ವೀಕರಿಸಿರುವುದಕ್ಕೆ ಖುಷಿಯಾಗುತ್ತಿದೆ ಎಂದರು.

ಸರ್ಕಾರ ಹಾಗೂ ಪೊಲೀಸ್ ಇಲಾಖೆ ನನಗೆ ದೊಡ್ಡ ಜವಾಬ್ದಾರಿ ನೀಡಿದೆ. ಅದನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತೇನೆ. ಎಸ್.ಪಿ. ಕೆಡರ್​ನವರಿಗೆ ಸರ್ಕಾರ ಆಯುಕ್ತರ ಜವಾಬ್ದಾರಿ ನೀಡಿದೆ. ಈ ವಿಷಯದಲ್ಲಿ ಸರ್ಕಾರ ನಿಯಮಗಳನ್ನು ಮೀರಿಲ್ಲ. ನನಗೆ ಆಯುಕ್ತರಾಗಿ ಸೇವೆ ಸಲ್ಲಿಸಲು ಸರ್ಕಾರ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ನಾನು ಬಂದು ಅಧಿಕಾರ ಸ್ವೀಕರಿಸಿದ್ದೇನೆ ಎಂದು ಹೇಳಿದರು.

ಅವಳಿ ನಗರದಲ್ಲಿ ಕಾನೂನು ಸುವ್ಯವಸ್ಥೆ, ಮಹಿಳೆಯರ ಸುರಕ್ಷತೆ, ಸೈಬರ್ ಕ್ರೈಂನಂತಹ ವಿಚಾರಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು. ಕಾನೂನಿಗೆ ಧಕ್ಕೆ ತರುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಹು-ಧಾ ಕಮೀಷನರೇಟ್​ನಲ್ಲಿ ಹಲವು ಜನ ಹಳೇ ಸಿಬ್ಬಂದಿ ಈಗಲೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರೆಲ್ಲರ ಸಹಕಾರದಿಂದ ಉತ್ತಮ ವಾತಾವರಣ ನಿರ್ವಿುಸಲಾಗುವುದು ಎಂದರು.

ಡಿಸಿಪಿಗಳಾದ ಎಂ. ರಾಜೀವ, ಡಾ. ಗೋಪಾಲ ಬ್ಯಾಕೋಡ ಇತರರು ಇದ್ದರು.