ವಿಜಯವಾಣಿ ಸುದ್ದಿಜಾಲ ಕಾರವಾರ/ಅಂಕೋಲಾ: ಆಸ್ಪತ್ರೆಗಳ ಸ್ವಚ್ಛತೆ, ವಿತರಣೆ ಮಾಡುವ ಔಷಧಗಳ ಬಗ್ಗೆ ಲೆಕ್ಕವಿಟ್ಟಿರುವ ಬಗ್ಗೆ ಆಗಾಗ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು ಉತ್ತರ ಕನ್ನಡ ಲೋಕಾಯುಕ್ತ ಎಸ್‌ಪಿ ಕುಮಾರ ಚಂದ್ರ ಅವರಿಗೆ ಸೂಚನೆ ನೀಡಿದರು.
ಅಂಕೋಲಾ ನಾಡವರ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಸುಮಾರು ಎರಡು ಗಂಟೆ ಜಿಲ್ಲೆಯ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು. ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕ ಕೆಲಸಗಳಿಗೆ ಅನಗತ್ಯ ವಿಳಂಬ, ಭ್ರಷ್ಟಾಚಾರದ ದೂರು ಬಂದಲ್ಲಿ ಪ್ರಕರಣ ದಾಖಲಿಸಿ, ಮುಲಾಜಿಲ್ಲದೇ ಕಠಿಣ ಕ್ರಮ ವಹಿಸಲಾಗುವುದು ಎಂದು ಎಚ್ಚರಿಸಿದರು.
ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಸೌಕರ್ಯಗಳು ಗುಣಮಟ್ಟದಿಂದ ಇರುವಂತೆ ನೀಡಿಕೊಳ್ಳಬೇಕು ಹಾಗೂ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಮತ್ತು ಉತ್ತಮ ಆರೋಗ್ಯಕ್ಕೆ ಪೂರಕವಾದ ಚಟುವಟಿಕೆಗಳನ್ನು ಸಂಬಂಧಪಟ್ಟ ಇಲಾಖೆಗಳು ಕೈಗೊಳ್ಳಬೇಕು ಈ ಬಗ್ಗೆ ಹಾಸ್ಟೇಲ್‌ಗಳನ್ನು ಪರಿಶೀಲಿಸಿ ವರದಿ ನೀಡುವಂತೆ ಲೋಕಾಯುಕ್ತ ಎಸ್‌ಪಿ ಅವರಿಗೆ ಸೂಚಿಸಿದರು.
ಜಿಲ್ಲೆಯಲ್ಲಿನ ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡಗಳ ಬಗ್ಗೆ ಮತ್ತು ಅವುಗಳ ದುರಸ್ತಿ ಗೆ ಕಳೆದ ಒಂದು ವರ್ಷದಿಂದ ಕೈಗೊಂಡಿರುವ ಕ್ರಮಗಳ ಬಗ್ಗೆ ಡಿಡಿಪಿಐಗಳು ವರದಿ ಸಲ್ಲಿಸಬೇಕು ಎಂದು ಆದೇಶಿಸಿದರು. ಜಲಜೀವನ ಮಿಷನ್ ಯೋಜನೆಯಡಿ ಗುಣಮಟ್ಟದ ಪೈಪ್‌ಗಳನ್ನು ಬಳಸಿ ಗುಣಮಟ್ಟದ ಕಾಮಗಾರಿ ಮಾಡುವಂತೆ ಜಿಪಂ ಅಧಿಕಾರಿಗಳಿಗೆ ಸೂಚಿಸಿದರು. ನೀರು ಸರಬರಾಜಿನ ಬಗ್ಗೆ ದೂರು ಬಂದಲ್ಲಿ ಕಠಿಣ ಕ್ರಮ ವಹಿಸಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲೆಯ ಗೂಡಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವ ಬಗ್ಗೆ ದೂರುಗಳು ಬಂದಿವೆ. ಈ ಬಗ್ಗೆ ಅಬಕಾರಿ ಇಲಾಖೆ ತನಿಖೆ ನಡೆಸಿ ವರದಿ ನೀಡಿ ಎಂದು ಸೂಚನೆ ನೀಡಿದರು. ತಾಲೂಕು ಕಚೇರಿಗಳಲ್ಲಿ ಪೌತಿ ಖಾತೆ, ಇ ಸ್ವತ್ತು,ಖಾತೆ ವರ್ಗಾವಣೆ ಪ್ರಕರಣ ಗಳನ್ನು ಹಾಗೂ ಭೂ ದಾಖಲೆಗಳ ಅರ್ಜಿಗಳನ್ನು ಕೂಡಲೇ ವಿಲೇ ಮಾಡಬೇಕು, ಸಕಾಲದಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು ಪರಿಶೀಲಿಸಿ, ಅಗತ್ಯ ದಾಖಲೆಗಳನ್ನು ಪಡೆದು ಸೌಲಭ್ಯಗಳನ್ನು ಒದಗಿಸಿ, ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವ ಅಧಿಕಾರಿಗಳನ್ನು ಲೋಕಾಯುಕ್ತ ದ ವತಿಯಿಂದ ಅಭಿನಂದಿಸಲಾಗುವುದು ಎಂದರು. ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಜಿಪಂ ಸಿಇಒ ಈಶ್ವರ ಕಾಂದೂ, ಎಸ್‌ಪಿ ಎನ್. ವಿಷ್ಣುವರ್ಧನ, ಅಪರ ಜಿಲ್ಲಾಧಿಕಾರಿ,ಪ್ರಕಾಶ್ ರಾಜಪೂತ ವೇದಿಕೆಯಲ್ಲಿದ್ದರು.
ಎರಡು ಜಾಗಗಳಿಗೆ ಒಂದೇ ಸರ್ವೇ ನಂಬರ್
ಎರಡು ಜಾಗಗಳಿಗೆ ಒಂದೇ ಸರ್ವೇ ನಂಬರ್, ಭೂ ಪರಿವರ್ತನೆ ಕಡತ ಕಾಣೆಯಾಗಿರುವುದು. ಅಸಮರ್ಪಕ ಸರ್ವೇ ಸೇರಿ ವಿವಿಧ ದೂರುಗಳು ಲೋಕಾಯುಕ್ತರಿಗೆ ಸಲ್ಲಿಕೆಯಾದವು. ಅಂಕೋಲಾದ ಸ್ವಾತಂತ್ರ್ಯ ಸ್ಮಾರಕ ಭವನದಲ್ಲಿ ಮೂಲ ಸೌಕರ್ಯ ಕೊರತೆ ವಿಚಾರವೂ ಪ್ರಸ್ತಾಪವಾಯಿತು. ಎಲ್ಲ ದೂರುಗಳ ಬಗ್ಗೆ 10 ದಿನದಲ್ಲಿ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಸಂಬಂಧಪಟ್ಟ ಅಽಕಾರಿಗಳಿಗೆ ನ್ಯಾಯಮೂರ್ತಿಗಳು ಸೂಚನೆ ನೀಡಿದರು.
ಇದನ್ನೂ ಓದಿ: ಯುವ ನಿಧಿ ಉದ್ಘಾಟನೆಗೆ ಬಸ್ಸು-ಪ್ರಯಾಣಿಕರು ಸುಸ್ತು
ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಬಗ್ಗೆ ದೇಶದಲ್ಲಿ ಉತ್ತಮ ಹೆಸರಿದೆ. ರಾಜ್ಯದ ಜನರು ಲೋಕಾಯುಕ್ತದ ಬಗ್ಗೆ ನಂಬಿಕೆ ಇಟ್ಟಿದ್ದು, ವರ್ಷದಲ್ಲಿ 8 ಸಾವಿರಕ್ಕೂ ಅಧಿಕ ದೂರುಗಳು ದಾಖಲಾಗಿವೆ. ಅವುಗಳನ್ನು ನಿಯಮಾನುಸಾರ ಕಾಲಮಿತಿಯಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಇದುವರೆಗೆ 8 ಕ್ಕೂ ಅಧಿಕ ಜಿಲ್ಲೆಗಳಿಗೆ ಭೇಟಿ ನೀಡಿ ಅಽಕಾರಿಗಳನ್ನು ಎಚ್ಚರಿಸುವ ಕಾರ್ಯ ಮಾಡಿದ್ದೇನೆ.ನ್ಯಾ ಬಿ.ಎಸ್.ಪಾಟೀಲ್ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ