ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್ ಅಳವಡಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಎಲ್ಲ ವಲಯ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.
ಪಾಲಿಕೆ ಕೇಂದ್ರ ಕಚೇರಿಯಲ್ಲಿ ಸೋಮವಾರ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್‌ಗಳನ್ನು ಅಳವಡಿಸುತ್ತಿದ್ದು, ಅದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬೇಕಿದೆ. ಈ ನಿಟ್ಟಿನಲ್ಲಿ ಆಯಾ ವಲಯ ವ್ಯಾಪ್ತಿಯಲ್ಲಿ ಕಠಿಣ ಕ್ರಮ ಕೈಗೊಂಡು ಎಲ್ಲಿಯೂ ಅನಧಿಕೃತ ಜಾಹೀರಾತು ಅಳವಡಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.
ಜಂಟಿ ಕಾರ್ಯಾಚರಣೆಗೆ ಸಲಹೆ:
ಅನಧಿಕೃತವಾಗಿ ಅಳವಡಿಸುತ್ತಿರುವ ಫ್ಲೆಕ್ಸ್, ಬ್ಯಾನರ್‌ಗಳನ್ನು ಪಾಲಿಕೆಯಿಂದ ತೆರವುಗೊಳಿಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಎಫ್ಐಆರ್ ದಾಖಲಿಸಲಾಗುತ್ತಿದೆ. ಆದರೂ, ಸಾರ್ವಜನಿಕ ಸ್ಥಳ, ರಸ್ತೆ ಬದಿ ಫ್ಲೆಕ್ಸ್ ಅಳವಡಿಕೆಗೆ ಕಡಿವಾಣ ಬಿದ್ದಿಲ್ಲ. ಆದ್ದರಿಂದ ಪಾಲಿಕೆ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಅನಧಿಕೃತ ಜಾಹೀರಾತು ಅಳವಡಿಕೆಗೆ ನಿಯಂತ್ರಣ ತರಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
ಪ್ರಹರಿ ವಾಹನಗಳ ಗಸ್ತು ಹೆಚ್ಚಿಸಿ:
ಅನಧಿಕೃತ ಜಾಹೀರಾತುಗಳನ್ನು ರಾತ್ರಿ ವೇಳೆ ಹೆಚ್ಚಾಗಿ ಅಳವಡಿಸುತ್ತಿದ್ದು, ಈ ನಿಟ್ಟಿನಲ್ಲಿ ಆಯಾ ವಲಯ ವ್ಯಾಪ್ತಿಯಲ್ಲಿ ಒಂದು ಪ್ರಹರಿ ವಾಹನವನ್ನು ನಿಯೋಜಿಸಿ ಪ್ರಮುಖ ರಸ್ತೆಗಳಲ್ಲಿ ಗಸ್ತು ಮಾಡಬೇಕು. ಅನಧಿಕೃತ ಫ್ಲೆಕ್ಸ್, ಬ್ಯಾನರ್ ಅಳವಡಿಸುವುದು ಕಂಡಬಂದಲ್ಲಿ ತಕ್ಷಣವೇ ಹಿರಿಯ ಅಧಿಕಾರಿಗಳಿಗೆ ತಿಳಿಸಿ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ತುಷಾರ್ ಗಿರಿನಾಥ್ ಸೂಚನೆ ನೀಡಿದ್ದಾರೆ.
ರಸ್ತೆಗುಂಡಿ ದೂರುಗಳಿಗೆ ಸ್ಪಂದಿಸಿ:
ನಗರದಲ್ಲಿ ತ್ವರಿತವಾಗಿ ಗುಂಡಿಗಳನ್ನು ಮುಚ್ಚಲು ರಸ್ತೆಗುಂಡಿ ಗಮನ ಮೊಬೈಲ್ ಅಫ್ಲಿಕೇಷನ್‌ಅನ್ನು ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ಆರಂಭದ 2-3 ದಿನ ಕೆಲ ತಾಂತ್ರಿಕ ಸಮಸ್ಯೆ ಎದುರಾಗಿದ್ದು, ಅವುಗಳನ್ನು ಐಟಿ ವಿಭಾಗ ಹಾಗೂ ಟ್ರಾಫಿಕ್ ಪೊಲೀಸ್ ಜತೆಗೂ ಪರಿಹಾರ ಕೈಗೊಳ್ಳಲಾಗುತ್ತಿದೆ. ತಂತ್ರಾಂಶದ ಮೂಲಕ ನಾಗರಿಕರಿಂದ ಬರುವ ದೂರಗಳನ್ನು ಆಧರಿಸಿ ತ್ವರಿತವಾಗಿ ಮುಚ್ಚಬೇಕು. ಇದಕ್ಕಾಗಿ ಸದ್ಯದಲ್ಲೇ ಸಹಾಯವಾಣಿ ಕೂಡ ಆರಂಭಿಸಲಾಗುವುದು. ಕಾಲಮಿತಿಯೊಳಗೆ ನಗರದ ಪ್ರಮುಖ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮುಖ್ಯ ಆಯುಕ್ತರು ತಿಳಿಸಿದರು.