ಜಿಲ್ಲೆ

ಬಾಲಕಾರ್ಮಿಕರನ್ನು ಬಳಸುವವರ ವಿರುದ್ಧ ಕಠಿಣಕ್ರಮ: ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಎಚ್ಚರಿಕೆ

ಬೆಂಗಳೂರು: ಹದಿನಾಲ್ಕು ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಉದ್ಯೋಗಗಳಲ್ಲಿ ಬಳಸಿಕೊಳ್ಳುವುದು ಅಥವಾ ನೇಮಕ ಮಾಡಿಕೊಳ್ಳುವುದು ಅಪರಾಧವಾಗಿದ್ದು, ಇಂತಹ ಪ್ರಕರಣಗಳು ಕಂಡು ಬಂದಲ್ಲಿ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ ಅವರು ಎಚ್ಚರಿಸಿದ್ದಾರೆ.

ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಿಕ್ಷಣ ವಂಚಿತ ಮಕ್ಕಳು ಕಾರ್ಖಾನೆ, ಗ್ಯಾರೇಜ್, ಹೋಟೆಲ್ ಮತ್ತಿತರ ಕೆಲಸಗಳಲ್ಲಿ ತೊಡಗಿಕೊಂಡು ತಮ್ಮ ಬಾಲ್ಯವನ್ನು ಹಾಳುಮಾಡಿಕೊಳ್ಳುತ್ತಿರುವುದು ಬೇಸರ ಸಂಗತಿ. ಅಂತಹ ಮಕ್ಕಳನ್ನು ಗುರುತಿಸಿ ಕೆಲಸಕ್ಕೆ ಬಳಸಿಕೊಳ್ಳುವವರ ವಿರುದ್ಧ ಮೊಕದ್ದಮೆ ದಾಖಲಿಸಬೇಕು ಎಂದರು.

ಬಾಲ ಕಾರ್ಮಿಕರನ್ನು ಬಾಲಕಾರ್ಮಿಕ ಪದ್ಧತಿಯಿಂದ ಮುಕ್ತಗೊಳಿಸಿ ಅವರಿಗೆ ಉತ್ತಮ ಶಿಕ್ಷಣ ನೀಡಿ, ಸಮಾಜದ ಮುಖ್ಯವಾಹಿನಿಗೆ ತರುವದರ ಜೊತೆಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಬೇಕು ಎಂದರು.

ಸಹಾಯಕ ಕಾರ್ಮಿಕ ಆಯುಕ್ತ ಎ.ಸಿ ತಮ್ಮಣ್ಣ ಮಾತನಾಡಿ, ಮೈಸೂರು ರಸ್ತೆಯ ಪಂತರಪಾಳ್ಯದಲ್ಲಿರುವ ನ್ಯೂ ಅಂಬೆ ಎಕ್ಸ್‌ಪೋರ್ಟ್ ಸಂಸ್ಥೆಯ ಮೇಲೆ ಅನಿರೀಕ್ಷಿತ ದಾಳಿ ನಡೆಸಿದ ವೇಳೆ ಒಂದು ಹೆಣ್ಣು ಮಗುವನ್ನು ಕಿಶೋರ ಕಾರ್ಮಿಕಗಳಾಗಿ ನಿಯೋಜಿಸಿಕೊಳ್ಳಲಾಗಿತ್ತು. ಈಕೆ ಪರಿಶಿಷ್ಟ ಜಾತಿಗೆ ಸೇರಿದವಳಾಗಿದ್ದು, ಆ ಕಾರ್ಯದಿಂದ ವಿಮುಕ್ತಿಗೊಳಿಸಿ ಪುನರ್ವಸತಿಗಾಗಿ ಶಾಲೆಗೆ ಸೇರಿಸಲಾಗಿದೆ. ಕಳೆದ ಸಾಲಿನಲ್ಲಿ 8 ಪ್ರಕರಣಗಳಲ್ಲಿ ತಪ್ಪಿತಸ್ಥ ಮಾಲೀಕರಿಂದ 1.60 ಲಕ್ಷ ರೂ. ಕಾರ್ಪಸ್ ನಿಧಿಯನ್ನು ವಸೂಲಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಸಹಾಯಕ ಕಾರ್ಮಿಕ ಆಯುಕ್ತ ಸಂತೋಷ್ ಹಿಪ್ಪರಗಿ ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿ, ಸಿಬಂದ್ದಿಗಳು ಉಪಸ್ಥಿತರಿದ್ದರು.