ಮದ್ದೂರು: ಕೋಮು ಗಲಭೆ ಚಿಕ್ಕದಾಗಿರಲಿ, ದೊಡ್ಡದಾಗಿರಲಿ ಅದು ಜಿಲ್ಲೆಗೆ ಕಳಂಕ. ಜಿಲ್ಲೆಯಲ್ಲಿ ಕೋಮು ಗಲಭೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದ ಶಿವಪುರ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬುಧವಾರ ಮದ್ದೂರು ತಾಲೂಕಿನಲ್ಲಿ ನಡೆಯಲಿರುವ ಸಾಮೂಹಿಕ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಶಾಂತಿಯುತವಾಗಿ ಭಾಗವಹಿಸಬೇಕು. ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಮಾಡಲಾಗಿದೆ ಎಂದರು.
ಪೊಲೀಸ್ ಇಲಾಖೆಯಿಂದ ದೊಡ್ಡ, ದೊಡ್ಡ ಗಲಭೆಗಳನ್ನು ನಿಯಂತ್ರಿಸಲಾಗಿದೆ ಹಾಗೂ ಪಾರದರ್ಶಕವಾಗಿ ತನಿಖೆ ನಡೆಸಲಾಗಿದೆ. ಮದ್ದೂರು ತಾಲೂಕಿನ ನಡೆದಿರುವ ಗಲಭೆಗೆ ಕಾರಣವಾಗಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯ ಶಾಂತಿ ಕದಡುವ ಕಿಡಿಗೇಡಿಗಳು ನಿಮ್ಮ ಸುತ್ತಮುತ್ತಲೇ ಇರುತ್ತಾರೆ. ಸಾರ್ವಜನಿಕರು ಹಾಗೂ ಮುಖಂಡರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಎಂದರು.
ಹಿಂದು, ಮುಸ್ಲಿಂ ಸಮುದಾಯದವರು ಸಮಾಜದಲ್ಲಿ ಒಟ್ಟಿಗೆ ಬಾಳಬೇಕು. ಕೆಲವು ಕಿಡಿಗೇಡಿಗಳು ನಡೆಸುವ ಕೃತ್ಯಕ್ಕೆ ಜೀವನ ನಡೆಸುವುದು ಕಷ್ಟಕರವಾಗಿರುತ್ತದೆ. ವಿವಿಧ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ನಡೆಯುವ ಮೆರವಣಿಗೆಗಳಲ್ಲಿ ತಾಳ್ಮೆಯಿಂದ ವರ್ತಿಸಿ ಎಂದರು.
ಮಳವಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಸ್ವಾತಂತ್ರ್ಯ ಹೋರಾಟಕ್ಕೆ ಹೆಸರುವಾಸಿಯಾಗಿರುವ ಮದ್ದೂರು ತಾಲೂಕಿನಲ್ಲಿ ಕೋಮು ಗಲಭೆಗಳು ಬೇಡ. ಸರ್ಕಾರ ಜಿಲ್ಲೆಗೆ ಸಕ್ಕರೆ ಕಾರ್ಖಾನೆ ಅಭಿವೃದ್ಧಿ ಸೇರಿದಂತೆ ನಾಲೆಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಸಾರ್ವಜನಿಕರು ಸರ್ಕಾರದೊಂದಿಗೆ ಕೈ ಜೋಡಿಸಿ ಎಂದು ಮನವಿ ಮಾಡಿದರು.
ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ ಮಾತನಾಡಿ, ರಾಜ್ಯದಲ್ಲಿ 77 ಸಾವಿರ ಗಣೇಶ ಮೂರ್ತಿಗಳು ಹಾಗೂ ಮಂಡ್ಯದಲ್ಲಿ 3,700 ಗಣೇಶ ಪ್ರತಿಷ್ಠಾಪನೆ ಆಗಿವೆ. ಎಲ್ಲೂ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಕಿಡಿಗೇಡಿಗಳು ಎಸಗಿರುವ ಅಹಿತಕರ ಘಟನೆಯನ್ನು ದೊಡ್ಡದಾಗಿ ಬಿಂಬಿಸಿ ಶಾಂತಿ ಕದಡುವುದು ಬೇಡ. ತಪ್ಪಿತಸ್ಥರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸಿದರು.
ಶಾಸಕ ಉದಯ್ ಅವರು ತಾಲೂಕಿನ ಅಭಿವೃದ್ಧಿಗೆ 1,300 ಕೋಟಿ ರೂ. ಅನುದಾನ ತಂದಿದ್ದಾರೆ. ಬಹಳ ವರ್ಷಗಳಿಂದ ತಾಲೂಕಿನಲ್ಲಿ ಅಭಿವೃದ್ಧಿ ಆಗಿರಲಿಲ್ಲ. ಸಚಿವ ಚಲುವರಾಯಸ್ವಾಮಿ ಹಾಗೂ ಶಾಸಕ ಉದಯ್ ಅಭಿವೃದ್ಧಿ ಮಾಡುತ್ತಿದ್ದಾರೆ. ಯಾವುದೇ ಅಹಿತಕರ ಘಟನೆಗೆ ಅವಕಾಶ ಕೊಡಬೇಡಿ ಎಂದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಮದ್ದೂರಿನಲ್ಲಿ ನಡೆದ ಘಟನೆಯಿಂದಾಗಿ ಬೇಸರವಾಗಿದೆ. ಗಣೇಶ ಹಬ್ಬದ ಮುಂಚಿತವಾಗಿಯೇ ಎಲ್ಲ ಧರ್ಮದ ಮುಖಂಡರೊಂದಿಗೆ ಸಭೆ ಕರೆದು ವ್ಯವಸ್ಥಿತವಾಗಿ ಹಬ್ಬ ಆಚರಿಸಲು ಸೂಚಿಸಲಾಗಿತ್ತು. ವಿವಿಧತೆಯಲ್ಲಿ ಏಕತೆ ಎಂದು ಕೇವಲ ಮಾತಿನಲ್ಲಿ ಹೇಳಿದರೆ ಸಾಲದು, ಅದನ್ನು ಅನುಸರಿಸಬೇಕು. ಧಾರ್ಮಿಕ ಭಾವನೆಗೆ ದಕ್ಕೆ ತರುವಂತಹ ಕೆಲಸ ಮಾಡಬಾರದು ಎಂದರು.
ಸಮಾಜದಲ್ಲಿ ಸಾಮರಸ್ಯವನ್ನು ಕಾಪಾಡುವ ಹೊಣೆಗಾರಿಕೆ ಎಲ್ಲರ ಮೇಲಿದೆ. ಘಟನೆಗೆ ಸಂಬಂಧಿಸಿದಂತೆ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಧರ್ಮ-ಧರ್ಮಗಳ ನಡುವೆ ಬೆಂಕಿ ಹಚ್ಚುವರಿಗೆ ಕಾನೂನು ಪಾಠ ಕಲಿಸುತ್ತದೆ. ನಮ್ಮ ಮಕ್ಕಳು ದಾರಿ ತಪ್ಪಿದ್ದಾರೆ ಎಂದರೆ ಅದರ ಜವಾಬ್ದಾರಿಯನ್ನು ನಾವು ಹೊರಬೇಕು. ಮಕ್ಕಳಿಗೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೆಲಸಗಳು ಹಾಗೂ ಕೋಮುಗಲಭೆಗಳಲ್ಲಿ ಭಾಗವಹಿಸದಂತೆ ತಿಳಿಹೇಳಿ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಸಿಸಿ ಟಿವಿ ಹಾಗೂ ತಂತ್ರಜ್ಞಾನದ ಸಹಾಯದಿಂದ ಘಟನೆಗೆ ಕಾರಣರಾದವರನ್ನು ಬಂಧಿಸಲಾಗಿದೆ. ಘಟನೆ ಆಕಸ್ಮಿಕವೋ ಅಥವಾ ಪೂರ್ವನಿಯೋಜಿತವೂ ಎಂದು ತನಿಖೆ ನಡೆಸಲಾಗುವುದು. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಪಸರಿಸುವ ಮೂಲಕ ಸಮಾಜದ ಶಾಂತಿ ಕದಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಬುಧವಾರ ಸಾಮೂಹಿಕ ಗಣೇಶ ವಿಗ್ರಹ ವಿಸರ್ಜನೆ ಆಯೋಜಿಸಲಾಗಿದೆ.ಪೊಲೀಸ್ ಇಲಾಖೆ ಇದಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ವಿಶೇಷ ಟಾಸ್ಕ್‌ಫೋರ್ಸ್ ತಂಡಗಳನ್ನು ರಚಿಸಲಾಗಿದೆ. ಮದ್ದೂರು ನಗರದಲ್ಲಿ ಶಾಂತಿ ಕಾಪಾಡಲು ಸಿದ್ಧರಿದ್ದೇವೆ. ಪೊಲೀಸ್ ಇಲಾಖೆ ನಿಮ್ಮ ಜತೆ ಇದೆ ಎಂದು ಭರವಸೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಆರ್.ನಂದಿನಿ, ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ನಗರಸಭಾ ಅಧ್ಯಕ್ಷೆ ಕೋಕಿಲಾ ಅರುಣ್, ಉಪಾಧ್ಯಕ್ಷ ಟಿ.ಆರ್.ಪ್ರಸನ್ನಕುಮಾರ್ ಇನ್ನಿತರರು ಇದ್ದರು.