ಕಾಸರಗೋಡು: ಜಿಲ್ಲೆಯ ಶಾಲೆಗಳಲ್ಲಿ ನಡೆಯುತ್ತಿರುವ ರ‌್ಯಾಗಿಂಗ್ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮಕೈಗೊಳ್ಳಲು ಮುಂದಾಗಿದ್ದು, ರ‌್ಯಾಗಿಂಗ್ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ.ವಿಜಯಭಾರತ್ ರೆಡ್ಡಿ ಸೂಚನೆ ನೀಡಿದರು.
ಶಾಲೆಗಳಲ್ಲಿ ನಡೆಯುವ ಕಿರುಕುಳವನ್ನು ರ‌್ಯಾಗಿಂಗ್ ಎಂದೆ ಪರಿಗಣಿಸಲಾಗಿದ್ದು, ಈ ಕೃತ್ಯ ನಡೆಸುವ ವಿದ್ಯಾರ್ಥಿಗಳ ವಿರುದ್ಧ ಕ್ರಮಕೈಗೊಳ್ಳುತ್ತೇವೆ. ಸ್ಪೆಷಲ್ ಸ್ಕ್ವಾಡ್‌ಗೆ ಈಗಾಗಲೇ ಸೂಚನೆ ನೀಡಲಾಗಿದ್ದು, ಕಿರುಕುಳ ನೀಡುತ್ತಿರುವ ವಿದ್ಯಾರ್ಥಿಗಳನ್ನು ಪತ್ತೆಹಚ್ಚುವ ಕಾರ್ಯ ಆರಂಭಿಸಲಾಗಿದೆ. ಜತೆಗೆ ಪೇಟೆ ಪ್ರದೇಶಗಳಲ್ಲೂ ವಿದ್ಯಾರ್ಥಿಗಳ ಮೇಲೆ ಸ್ಕ್ವಾಡ್ ನಿಗಾ ವಹಿಸಲಿದೆ. ರ‌್ಯಾಗಿಂಗ್ ವಿರುದ್ಧ ಕಾನೂನು ಕ್ರಮ, ಅರಿವು ಕುರಿತು ಶಿಕ್ಷಣ ಸಂಸ್ಥೆಗಳಲ್ಲಿ ಶಿಬಿರ ಆಯೋಜಿಸಬೇಕು ಎಂದರು.
ಇತ್ತೀಚೆಗೆ ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಹೈಯರ್ ಸೆಕೆಂಡರಿ ಶಾಲೆಯೊಂದರ ಹಿರಿಯ ವಿದ್ಯಾರ್ಥಿಗಳು ಪ್ಲಸ್‌ವನ್ ತರಗತಿ ವಿದ್ಯಾರ್ಥಿಗಳ ಮೇಲೆ ನಡೆಸಿರುವ ರ‌್ಯಾಗಿಂಗ್ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿತ್ತು.
ಸಹಾಯವಾಣಿ: ರ‌್ಯಾಗಿಂಗ್ ಕಿರುಕುಳದ ಬಗ್ಗೆ ಸಕಾಲದಲ್ಲಿ ಮಾಹಿತಿ ನೀಡದೆ ಮುಚ್ಚಿಡುವ ಶಿಕ್ಷಣ ಸಂಸ್ಥೆಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಸಂಬಂಧಿಸಿದ ದೂರುಗಳನ್ನು ನಿರ್ದಿಷ್ಟ ಶಿಕ್ಷಣ ಸಂಸ್ಥೆಗಳ ವ್ಯಾಪ್ತಿಯ ಪೊಲೀಸ್ ಠಾಣೆಗೆ ಅಥವಾ ಆ್ಯಂಟಿ ರ‌್ಯಾಗಿಂಗ್ ಹೆಲ್ಪ್‌ಲೈನ್ ಸಂಖ್ಯೆ(1800 180 5522)ಗೆ ಕರೆಮಾಡಿ ಮಾಹಿತಿ ನೀಡಬೇಕು ಎಂದು ಪೊಲೀಸ್ ಅಧಿಕಾರಿಗಳು ಶಿಕ್ಷಣ ಸಂಸ್ಥೆಗಳಿಗೆ ಸೂಚನೆ ನೀಡಿದರು.