ಹುಬ್ಬಳ್ಳಿ : ಅವಳಿ ನಗರದಲ್ಲಿ ಎಲ್ಲೆಂದರಲ್ಲಿ ಕಸ ಚೆಲ್ಲುವುವರ ವಿರುದ್ಧ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಎಲ್ಲ ವಲಯಗಳ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳುವಂತೆ ಮಹಾಪೌರ ರಾಮಪ್ಪ ಬಡಿಗೇರ ಸೂಚಿಸಿದ್ದಾರೆ.
ಮಹಾನಗರ ಪಾಲಿಕೆಯ ಮಹಾಪೌರರ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ತ್ಯಾಜ್ಯ ನಿರ್ವಹಣೆ, ಎಲ್ಲೆಂದರಲ್ಲಿ ಕಸ ಚೆಲ್ಲುವುದರ ಬಗ್ಗೆ ಹೆಚ್ಚಿನ ದೂರುಗಳು ಬಂದಿದ್ದು, ಅಧಿಕಾರಿಗಳು ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೋನ್ ಕರೆ ಮಾಡಿದ ನಾಗರಿಕರು ಆಗ್ರಹಿಸಿದರು.
ಫೋನ್ ಇನ್ ಕಾರ್ಯಕ್ರಮದಲ್ಲಿ ಸ್ವೀಕರಿಸಲಾದ 32 ದೂರಗಳಲ್ಲಿ ಹೆಚ್ಚಾಗಿ ಕಸ ಹಾಗೂ ಯುಜಿಡಿಗೆ ಸಂಬಂಧಿಸಿದ್ದವಾಗಿದ್ದವು.
ರಸ್ತೆ ಬದಿಯಲ್ಲಿ ಕಸ ಸುರಿಯದಂತೆ ನಾಗರಿಕರಲ್ಲಿ ಸರಿಯಾದ ಜಗೃತಿ ಮೂಡಿಸಬೇಕು. ಹೋಟೆಲ್ಗಳು ಸೇರಿದಂತೆ ಕಸ ಹಾಕುವ ವಾಣಿಜ್ಯ ಮಳಿಗೆಗಳಿಗೆ ನೋಟಿಸ್ ನೀಡಬೇಕು. ಅಗತ್ಯ ಬಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲು ಮಹಾಪೌರರು ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮಹಾಪೌರ ರಾಮಪ್ಪ ಬಡಿಗೇರ, ಪಾಲಿಕೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಆಟೋ ಟಿಪ್ಪರ್ಗಳ ಕೊರತೆ ಇದೆ. ಹೊರಗುತ್ತಿಗೆ ಆಧಾರದ ಮೇಲೆ 66 ಹೊಸ ಆಟೋ ಟಿಪ್ಪರ್ಗಳನ್ನು ಶೀಘ್ರ ತೆಗೆದುಕೊಳ್ಳಲಾಗುತ್ತದೆ. ಇದರಿಂದ ಕಸ ಸಂಗ್ರಹ ಪರಿಸ್ಥಿತಿ ಸುಧಾರಿಸಲಿದೆ ಎಂದು ಹೇಳಿದರು.
ಈ ಹಿಂದೆ ಮಾಡಿದ ನಾಲ್ಕು ಫೋನ್ ಇನ್ ಕಾರ್ಯಕ್ರಮಗಳಲ್ಲಿ ಸ್ವೀಕರಿಸಿದ ದೂರುಗಳ ಆಧಾರದ ಮೇಲೆ 29 ಪ್ರಮುಖ ಸಿವಿಲ್ ಕಾಮಗಾರಿಗಳನ್ನು 4.92 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಮಾತನಾಡಿ, ಅವಳಿ ನಗರಗಳಿಗೆ ತ್ಯಾಜ್ಯ ಸಂಗ್ರಹಿಸಲು 420 ಆಟೋ ಟಿಪ್ಪರ್ಗಳ ಅಗತ್ಯವಿದೆ. ಆದರೆ ಕೇವಲ 282 ವಾಹನಗಳಿವೆ. ತ್ಯಾಜ್ಯ ಸಂಗ್ರಹವನ್ನು ಸುಧಾರಿಸಲು 66 ಹೊಸ ಆಟೋ ಟಿಪ್ಪರ್ಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಮಹಾನಗರ ಪಾಲಿಕೆಯ ವ್ಯಾಪ್ತಿಯ ಜಿಐಎಸ್ ಸರ್ವೆ ಮೂಲಕ ಆಸ್ತಿಗಳ ಸರ್ವೆ ಮಾಡಲಾಗುತ್ತಿದೆ. ಮುಂದಿನ ಕ್ರಮದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.