ಡ್ರಗ್ಸ್​, ಗಾಂಜಾ ನಾಶ ಪಡಿಸುವ ಪ್ರಕ್ರಿಯೆಯನ್ನು ಎಸ್ಪಿ ಹರಿರಾಂ ಶಂಕರ್​ ಪರಿಶೀಲಿಸಿದರು. ಪ್ರಭು ಡಿಟಿ, ಡಾ. ಹರ್ಷಾ ಪ್ರಿಯಂವದಾ ಇತರರಿದ್ದರು. 
ಜಿಲ್ಲೆ

ಗಾಂಜಾ, ಡ್ರಗ್ಸ್​ ವಿರುದ್ಧ ಕಟ್ಟುನಿಟ್ಟಿನ ಕ್ರಮ

ಉಡುಪಿ ಎಸ್ಪಿ ಹರಿರಾಂ ಶಂಕರ್​ ಮಾಹಿತಿ

15.21 ಲಕ್ಷ ರೂ. ಮಾದಕ ದ್ರವ್ಯ ನಾಶ

ವಿಜಯವಾಣಿ ಸುದ್ದಿಜಾಲ ಉಡುಪಿ

ಜಿಲ್ಲೆಯಲ್ಲಿ ಕಳೆದ 15 ದಿನದಿಂದ ಗಾಂಜಾ, ಡ್ರಗ್ಸ್​ ಮಾರಾಟ ಹಾಗೂ ಸೇವನೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 35 ಪ್ರಕರಣ ದಾಖಲಾಗಿದ್ದು, 35 ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠ ಹಾಗೂ ಜಿಲ್ಲಾ ಡ್ರಗ್​ ಡಿಸ್​ಪೋಸಲ್​ ಕಮಿಟಿಯ ಅಧ್ಯಕ್ಷ ಹರಿರಾಂ ಶಂಕರ್​ ಮಾಹಿತಿ ನೀಡಿದ್ದಾರೆ.

ಕುಂದಾಪುರ ಠಾಣೆಯಲ್ಲಿ 7 ಪ್ರಕರಣ, ಮಣಿಪಾಲ ಠಾಣೆ 6, ಕಾರ್ಕಳ ನಗರ ಮತ್ತು ಮಲ್ಪೆ ಠಾಣೆ ತಲಾ 5, ಉಡುಪಿ ನಗರ ಪೊಲೀಸ್​ ಠಾಣೆ 4, ಕಾಪು ಮತ್ತು ಕಾರ್ಕಳ ಗ್ರಾಮಾಂತರ ಪೊಲೀಸ್​ ಠಾಣೆ ತಲಾ 2, ಹಿರಿಯಡ್ಕ, ಕೊಲ್ಲೂರು, ಕೋಟ ಮತ್ತು ಶಿರ್ವಾ ಠಾಣೆಗಳಲ್ಲಿ ತಲಾ 1 ಪ್ರಕರಣ ದಾಖಲಾಗಿದ್ದು 35 ಜನರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಮಾದಕ ದ್ರವ್ಯ ನಾಶ

ಜಿಲ್ಲೆಯ ವಿವಿಧ ಪೊಲೀಸ್​ ಠಾಣೆಗಳಲ್ಲಿ ವಶಪಡಿಸಿಕೊಂಡ 7,12,963 ರೂ. ಮೌಲ್ಯದ 9.937 ಕೆಜಿ 209 ಗ್ರಾಂ ಗಾಂಜಾ, 8,08,464 ರೂ. ಮೌಲ್ಯದ 345 ಗ್ರಾಂ 596 ಮಿಲಿಗ್ರಾಂ ಎಂಡಿಎಂಎ ಹಾಗೂ ಮೌಲ್ಯರಹಿತ 61 ಗ್ರಾಂ 430 ಮಿಲಿಗ್ರಾಂ ಬಿಳಿ ಪೌಡರ್​ ಸೇರಿ ಒಟ್ಟು 15,21,427 ಬೆಲೆಯ ಮಾದಕ ದ್ರವ್ಯವನ್ನು ಪಡುಬಿದ್ರಿ ಠಾಣಾ ವ್ಯಾಪ್ತಿಯ ಮೆ. ಆಯುಷ್​ ಎನ್​ವಿರೋಟೆಕ್​ ಪೆ.ಲಿ.ನಲ್ಲಿ ಗುರುವಾರ (ಅ.9) ಬೆಳಗ್ಗೆ ನಾಶಪಡಿಸಲಾಯಿತು ಎಂದು ಹೇಳಿದರು.

ಸಹಾಯಕ ಪೊಲೀಸ್​ ಅಧೀಕ್ಷಕಿ ಡಾ. ಹರ್ಷಾ ಪ್ರಿಯಂವದಾ (ಐಪಿಎಸ್​), ಉಡುಪಿ ಉಪವಿಭಾಗದ ಪೊಲೀಸ್​ ಉಪಾಧೀಕ್ಷಕ ಪ್ರಭು ಡಿ.ಟಿ. ಹಾಗೂ ಇನ್ನಿತರ ಪೊಲೀಸ್​ ಅಧಿಕಾರಿಗಳು ಇದ್ದರು.

ಪ್ರತ್ಯೇಕ ಪ್ರಕರಣ, ಮೂವರು ಬಂಧನ

ಸೀತಾರಾಮ

ಉಡುಪಿ ತಾಲೂಕು 80 ಬಡಗಬೆಟ್ಟು ಗ್ರಾಮದ ರಾಜೀವ ನಗರದಲ್ಲಿರುವ ಮನೆಯೊಂದರಲ್ಲೇ ಗಾಂಜಾ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮಣಿಪಾಲ ಠಾಣೆಯ ಉಪ ನಿರೀಕ್ಷಕಿ ಅಕ್ಷಯಕುಮಾರಿ ಎಸ್​.ಎನ್​. ಹಾಗೂ ಸಿಬ್ಬಂದಿ ಯುವಕನೋರ್ವನನ್ನು ಬಂಧಿಸಿದ್ದಾರೆ. ಆಂಧ್ರಪ್ರದೇಶ ರಾಜ್ಯದ ರಂಗರೆಡ್ಡಿ ಜಿಲ್ಲೆಯ ಬೊಡುಪ್ಪಲ್​ ತಾಲೂಕಿನ ಮಾರುತಿ ನಗರದ ಸೀತಾರಾಮ ವಿಜಯಭಾಸ್ಕರ ರೆಡ್ಡಿ ತೌಟರೆಡ್ಡಿ (21) ಬಂಧಿತ ಯುವಕ. ಮೇಘಾಲಯದಿಂದ ಆನ್​ಲೈನ್​ ಮೂಲಕ ಗಾಂಜಾ ಬುಕ್​ ಮಾಡಿ, ಅಂಚೆ ಮೂಲಕ ತರಿಸಿಕೊಂಡು ಮಣಿಪಾಲ ಹಾಗೂ ಉಡುಪಿಯಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಪರಿಚಯಸ್ಥರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಹಣ ಗಳಿಸುತ್ತಿದ್ದನು. ಯುವಕನ ಬಳಿ ಇದ್ದ 1 ಕೆಜಿಗೂ ಹೆಚ್ಚು ಗಾಂಜಾ, ಗಾಂಜಾ ಎಳೆಯುವ 2 ಬಾಂಗ್​, 1 ಐಫೋನ್​, 3,180 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಭಿಷೇಕ
ಶಾಶ್ವತ್

ಇನ್ನೊಂದು ಪ್ರಕರಣದಲ್ಲಿ ಕಾಪು ತಾಲೂಕು ಬೆಳಪು ಗ್ರಾಮದ ಬೆಳಪು ಇಂಡಸ್ಟ್ರಿಯಲ್​ ಏರಿಯಾ ಕ್ರಾಸ್​ ರಸ್ತೆ ಬಳಿ ಗುರುವಾರ (ಅ.9) ಗಾಂಜಾ ಮಾರಾಟ ಮಾಡುತ್ತಿದ್ದ ಉಡುಪಿ ಕೊಡವೂರು ಗ್ರಾಮ ಲಕ್ಷ್ಮೀ ನಗರದ ಅಭಿಷೇಕ ಉದಯ ಪಾಲನ್​ (30), ಉಪ್ಪೂರು ಗ್ರಾಮ ಕೊಳಲಗಿರಿಯ ಲಕ್ಷ್ಮೀ ನಗರದ ಆರ್​.ಶಾಶ್ವತ್​ (24) ಎಂಬವರನ್ನು ಬಂಧಿಸಲಾಗಿದೆ. ಅಂದಾಜು 5 ಸಾವಿರ ರೂ. ಬೆಲೆಯ 115.44 ಗ್ರಾಂ ಗಾಂಜಾ, ಡಿಜಿಟಲ್​ ಯಂತ್ರ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್​ ವಶಪಡಿಸಿಕೊಳ್ಳಲಾಗಿದೆ. ಖಚಿತ ಮಾಹಿತಿ ಮೇರೆಗೆ ಶಿರ್ವ ಪೊಲೀಸ್​ ಠಾಣೆಯ ಉಪನಿರೀಕ್ಷಕ ಮಂಜುನಾಥ ಮರಬದ ಅವರು ಸಿಬ್ಬಂದಿಯೊಂದಿಗೆ ದಾಳಿ ನಡೆಸಿದ್ದರು. ಶಿರ್ವಾ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ ನಗರ ಠಾಣೆ, ಸೆನ್​ ಠಾಣೆ, ಮಲ್ಪೆ, ಪಡುಬಿದ್ರಿ, ಶಿರ್ವಾ, ಕಾರ್ಕಳ ನಗರ ಹಾಗೂ ಮಣಿಪಾಲ ಠಾಣೆಯಲ್ಲಿ 2021ರಿಂದ 2025ರ ವರೆಗಿನ ಒಟ್ಟು 10 ಪ್ರಕರಣಗಳಲ್ಲಿ ವಶಕ್ಕೆ ಪಡೆದಿದ್ದ ಡ್ರಗ್ಸ್​ ಹಾಗೂ ಗಾಂಜಾವನ್ನು ನ್ಯಾಯಾಲಯದ ಆದೇಶದಂತೆ ನಾಶಗೊಳಿಸಿದ್ದೇವೆ. 2021ರ ಪಡುಬಿದ್ರಿ ಠಾಣೆಯ ದಾಖಲಾಗಿದ್ದ ಪ್ರಕರಣವು ಸಜೆಯಲ್ಲಿ ಮುಕ್ತಾಯಗೊಂಡಿದೆ. ಆರೋಪಿ ಅಬ್ದುಲ್​ ರಹಿಮಾನ್​ ಎಂಬಾತನಿಗೆ ನ್ಯಾಯಾಲಯವು 8 ಸಾವಿರ ರೂ. ದಂಡ ವಿಧಿಸಿ ಶಿಕ್ಷೆ ಪ್ರಕಟಿಸಿದೆ. 2025ರ ಮಣಿಪಾಲ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ತನಿಖೆಯಲ್ಲಿದ್ದು, ಉಳಿದೆಲ್ಲವೂ ಕೋರ್ಟ್​ನಲ್ಲಿ ವಿಚಾರಣೆಯಲ್ಲಿದೆ. | ಹರಿರಾಂ ಶಂಕರ್​. ಉಡುಪಿ ಎಸ್ಪಿ