ಕೆಜಿಎಫ್: ಮಾನವ ಹಕ್ಕುಗಳ ಆಯೋಗದಿಂದ ಯಾವುದೇ ವ್ಯಕ್ತಿಯನ್ನು ಮಾನವ ಹಕ್ಕುಗಳ ರಕ್ಷಣೆಗೆ ನೇಮಿಸಿರುವುದಿಲ್ಲ. ಕೆಲ ಖಾಸಗಿ ವ್ಯಕ್ತಿಗಳು ಮಾನವ ಹಕ್ಕುಗಳ ಆಯೋಗದ ನಕಲಿ ಐಡಿ ಕಾರ್ಡ್ ಸೃಷ್ಟಿಸಿ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳಿಗೆ ಬೆದರಿಕೆ ಹಾಕುವ ಪ್ರಕರಣಗಳು ಕೇಳಿ ಬರುತ್ತಿವೆ. ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಟಿ.ಶ್ಯಾಮ್ ಭಟ್ ಹೇಳಿದರು.
ನಗರ ಹೊರವಲಯದ ಬೆಮಲ್ನ ಅತಿಥಿ ಗೃಹದಲ್ಲಿ ಕೆಜಿಎಫ್ ತಾಲೂಕಿನ ಸರ್ಕಾರಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ತಾಲೂಕಿನಾದ್ಯಂತ ನಿಮ್ಮ ಕಚೇರಿಗಳಲ್ಲಿ ಅಂತಹ ಪ್ರಕರಣಗಳು ಇದ್ದರೆ ಗಮನಕ್ಕೆ ತನ್ನಿ ಅಥವಾ ಲಿಖಿತವಾಗಿ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಬಹುದಾಗಿದೆ ಎಂದರು.
ಹಲವು ಖಾಸಗಿ ವ್ಯಕ್ತಿಗಳು ವಿಸಿಟಿಂಗ್ ಕಾರ್ಡ್ ಇಟ್ಟುಕೊಂಡು ಸರ್ಕಾರಿ ಕಚೇರಿಗಳಿಗೆ ಬಂದು ಅಧಿಕಾರಿಗಳನ್ನು ಬೆದರಿಸುವುದು, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸುವ ಪ್ರಕರಣಗಳು, ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಇಲ್ಲದ ಸಲ್ಲದ ಮಾಹಿತಿ ಕೇಳುವುದು ಎಲ್ಲವೂ ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಪಟ್ಟಿವೆ. ಅಂತಹವರು ಕಚೇರಿಗೆ ಬಂದರೆ ನೇರವಾಗಿ ದೂರು ನೀಡಬಹುದು ಎಂದರು.
ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಹಾಗೂ ನ್ಯಾಯಾಧೀಶ ಎಸ್.ಕೆ.ವಂಟಿಗೋಡಿ ಮಾತನಾಡಿ, ಜಗತ್ತಿನಲ್ಲಿ ಜನಿಸಿದ ಪ್ರತಿಯೊಬ್ಬ ವ್ಯಕ್ತಿಗೆ ರ್ನಿದಿಷ್ಟ ಹಕ್ಕುಗಳಿವೆ. ಮೂಲಭೂತ ಹಕ್ಕುಗಳು ಮತ್ತು ಸ್ವಾತಂತ್ಯಗಳನ್ನು ಗೌರವಿಸುವ ಕೆಲಸವನ್ನು ಸರ್ಕಾರಿ ಅಧಿಕಾರಿಗಳು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಮಾನವ ಹಕ್ಕುಗಳಿಗೆ ಯಾವುದೇ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು. ಮಾನವ ಹಕ್ಕುಗಳು ಪ್ರತಿಯೊಬ್ಬ ನಾಗರಿಕರಿಗೆ ಸಮಾನವಾಗಿದ್ದು, ಅವು ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು ಎಲ್ಲರ ಕರ್ತವ್ಯ ಎಂದರು.
ರಾಜ್ಯ ಮಾನವ ಹಕ್ಕುಗಳ ಖಾಸಗಿ ಕಾರ್ಯದರ್ಶಿ ಅರುಣ್ ಪೂಜಾರಿ ಮಾತನಾಡಿ, ನೀರು ಮತ್ತು ನೈರ್ಮಲ್ಯದ ಪ್ರವೇಶವನ್ನು ವಿಶ್ವಸಂಸ್ಥೆಯು ಮಾನವ ಹಕ್ಕುಗಳೆಂದು ಗುರುತಿಸಿದ್ದು, ಪ್ರತಿಯೊಬ್ಬರ ಆರೋಗ್ಯ, ನತೆ ಮತ್ತು ಸಂಮೃದ್ಧಿಗೆ ಇದು ಮೂಲಭೂತವಾಗಿದೆ. ಅಗತ್ಯ ಸೌಕರ್ಯಗಳನ್ನು ಒದಗಿಸಲು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಕೆಜಿಎಫ್ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಮಾತನಾಡಿ, ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರ ಆದೇಶದಂತೆ ಯಾವುದೇ ಲೋಪಗಳು ಇಲ್ಲದೆ ಕರ್ತವ್ಯ ನಿರ್ವಹಿಸಿ ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ಎಚ್ಚರ ವಹಿಸುವುದಾಗಿ ಅಧಿಕಾರಿಗಳ ಸಭೆಯಲ್ಲಿ ತಿಳಿಸಿದರು.
ಕೆಜಿಎಫ್ ಉಪ ಕಾರಾಗೃಹಕ್ಕೆ ಭೇಟಿ ನೀಡಿ ವಿಚಾರಣಾಧೀನ ಕೈದಿಗಳಿಗೆ ಸಮರ್ಪಕ ಸೌಕರ್ಯಗಳ ಕುರಿತು ಪರಿಶೀಲನೆ ನಡೆಸಿದರು. ನಂತರ ಜೈಲಿನ ಬ್ಯಾರಕ್ ಒಳಗೆ ಇದ್ದ ಕೈದಿಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳ ಕುರಿತು ಮಾಹಿತಿ ಪಡೆದುಕೊಂಡರು. ನಂತರ ಅಡುಗೆ ಕೋಣೆ, ಸಿಸಿ ಕ್ಯಾಮರಾ, ಸಿಬ್ಬಂದಿಗಳ ಕುರಿತು ಜೈಲಿನ ಅಧಿಕಾರಿ ಬಾಳಪ್ಪ ಬಳಿ ಮಾಹಿತಿ ಪಡೆದುಕೊಂಡರು.
ಸಭೆಯಲ್ಲಿ ತಹಸೀಲ್ದಾರ್ ನಾಗವೇಣಿ, ತಾಪಂ ಇಒ ವೆಂಕಟೇಶಪ್ಪ, ನಗರಸಭೆ ಪೌರಾಯುಕ್ತ ಪವನ್ಕುಮಾರ್, ಸಿಡಿಪಿಒ ರಾಜೇಶ್, ನಗರಾಭಿವೃದ್ಧಿಪ್ರಾಧಿಕಾರದ ಆಯುಕ್ತ ಧಮೇರ್ಂದ್ರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್, ತಾಲೂಕು ಆರೋಗ್ಯಾಧಿಕಾರಿ ಡಾ.ಪದ್ಮಾವತಿ, ತಾಲೂಕು ವೈದ್ಯಾಧಿಕಾರಿ ಡಾ.ಅರುಣ್ಕುಮಾರ್, ಲೋಕೋಪೋಯೋಗಿ ಇಲಾಖೆ ಎಇಇ ರಾಜಶೇಖರ್ಬಾಬು ಇತರರು ಇದ್ದರು.