ಜಿಲ್ಲೆ

ಒತ್ತಡ ಜೀವನದಿಂದ ಮಾನಸಿಕ ನೆಮ್ಮದಿ ಹಾಳು

Mysuru - Desk - Ravikumar

ತಿ.ನರಸೀಪುರ: ಒತ್ತಡದ ಜೀವನ ಶೈಲಿಯಿಂದಾಗಿ ಪ್ರಸ್ತುತ ದಿನಗಳಲ್ಲಿ ಮಾನಸಿಕ ನೆಮ್ಮದಿ ಹಾಳಾಗುತ್ತಿದ್ದು, ಬಂಧುತ್ವದ ಸಂಬಂಧಗಳೂ ದೂರವಾಗುತ್ತಿವೆ ಎಂದು ವಾಟಾಳು ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.

ತಾಲೂಕಿನ ವಾಟಾಳುಪುರ ಗ್ರಾಮದಲ್ಲಿ ಶನಿವಾರ ನಾಡಗೌಡರು, ಮುಖಂಡರು ಹಾಗೂ ಗ್ರಾಮಸ್ಥರೆಲ್ಲರೂ ಸೇರಿ ಮನೆ-ಮನಗಳಿಗೆ ಶರಣರ ಸಂದೇಶ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಮಾನವನಾದವನು ಗಳಿಕೆಗೆ ಮಾತ್ರ ಸೀಮಿತನಾಗದೆ ಸಂಸ್ಕಾರವನ್ನು ಅಳವಡಿಸಿಕೊಳ್ಳಬೇಕು. ಕುಟುಂಬ ಮತ್ತು ಜನ ಸಮುದಾಯದ ಜತೆ ಬೆರೆಯಬೇಕು. ದೇಹ ಶುದ್ಧಿಯ ಜತೆ ಆತ್ಮಶುದ್ಧಿಗೂ ಗಮನ ನೀಡಬೇಕು ಎಂದು ಸಲಹೆ ನೀಡಿದರು.

ಯುವ ಜನತೆಗೆ ಸಂಸ್ಕಾರವನ್ನು ಕಲಿಸಲು ಮಕ್ಕಳಿಗೆ ಗುರು, ಲಿಂಗ, ಜಂಗಮ, ಪೂಜೆ, ಧ್ಯಾನಗಳ ಬಗ್ಗೆ ತಿಳಿವಳಿಕೆ ನೀಡಬೇಕು. ಹಣದಷ್ಟೇ ಆರೋಗ್ಯವೂ ಮುಖ್ಯ. ವಿಭೂತಿ, ರುದ್ರಾಕ್ಷಿಗಳ ಮಹತ್ವವನ್ನು ಅರಿಯುವಂತೆ ಪ್ರೇರೇಪಿಸಬೇಕು. ಸಮಾಜ ಬಯಸಿದ ಕೊಡುಗೆ ನೀಡಲು ಬಡತನವಿದ್ದರೂ, ಸಾಮಾಜಿಕ ಮೌಲ್ಯಗಳನ್ನು ಬಿತ್ತಲು ಬಡವರಾಗಬಾರದು ಎಂದು ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಪಾರಮಾರ್ಥಿಕ ಗವಿಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಹಲವಾರ ಮಠದ ಷಡಕ್ಷರ ದೇಶಿಕೇಂದ್ರ ಸ್ವಾಮೀಜಿ ಪ್ರವಚನ ನೀಡಿದರು. ಇದೆ ವೇಳೆ ನೀಟ್ ಪರೀಕ್ಷೆಯಲ್ಲಿ 6024ನೇ ರ‌್ಯಾಂಕ್ ಪಡೆಯುವುದರ ಮೂಲಕ ಎಂಬಿಬಿಎಸ್ ಶಿಕ್ಷಣಕ್ಕೆ ಉಚಿತ ಪ್ರವೇಶ ಪಡೆದು ತಾಲೂಕಿಗೆ ಕೀರ್ತಿ ತಂದ ಮುಡುಕನಪುರದ ನಮ್ರತಾ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ವಾಟಾಳುಪುರ ಗ್ರಾಮದ ನಾಡಗೌಡರು, ಮುಖಂಡರು, ಗ್ರಾಮಸ್ಥರು ಸೇರಿದಂತೆ ಶಿವಕುಮಾರ ಸ್ವಾಮೀಜಿ, ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಸಿ.ಎಂ.ಪ್ರಕಾಶ್, ಯುವ ಅಧ್ಯಕ್ಷ ಕೆ.ಎನ್.ಅಶೋಕ್, ನಿರ್ದೇಶಕ ಪೂಜಿತ್ ಮೆಡಿಕಲ್ಸ್ ಕುಮಾರ್, ಕಸಾಪ ಅಧ್ಯಕ್ಷ ಸೋಮಶೇಖರಪ್ಪ, ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎಸ್.ಬಿ.ಸುಗಂಧರಾಜು, ಉಪಾಧ್ಯಕ್ಷ ಎಂ.ಸಿದ್ದಲಿಂಗಸ್ವಾಮಿ, ಪರಶಿವಮೂರ್ತಿ, ತೋಂಟೇಶ್, ಪ್ರಕಾಶ್, ವಕೀಲ ಜ್ಞಾನೇಂದ್ರಮೂರ್ತಿ, ಉಪನ್ಯಾಸಕ ಮೂಗೂರು ಕುಮಾರಸ್ವಾಮಿ, ಸುಜ್ಜಲೂರು ಕೀರ್ತಿರಾಜು , ಬಿ.ಪಿ. ಪರಶಿವಮೂರ್ತಿ ಹಾಗೂ ಇತರರು ಇದ್ದರು.