ಅರಕಲಗೂಡು: ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಲು ಸವಿತಾ ಸಮಾಜದ ಕೋ ಆಪರೇಟಿವ್ ಸೊಸೈಟಿ ಬಲಪಡಿಸಲು ಎಲ್ಲರೂ ಶ್ರಮಿಸಬೇಕು ಎಂದು ಸವಿತಾ ಸಮಾಜ ಸಂಘದ ಜಿಲ್ಲಾಧ್ಯಕ್ಷ ರವಿಕುಮಾರ್ ಮನವಿ ಮಾಡಿದರು.
ತಾಲೂಕಿನ ಬಸವಾಪಟ್ಟಣದಲ್ಲಿ ಬುಧವಾರ ಸವಿತಾ ಸಮಾಜದ ಮುಖಂಡರನ್ನು ಭೇಟಿ ಮಾಡಿ ಮಾತನಾಡಿ, ಸಮಾಜದ ಏಳಿಗೆ ದೃಷ್ಟಿಯಿಂದ ಸೊಸೈಟಿ ಸ್ಥಾಪಿಸಲಾಗಿದ್ದು ಹೆಚ್ಚು ಷೇರುದಾರರನ್ನು ಹೊಂದಿದ್ದು ಲಾಭದತ್ತ ಮುನ್ನಡೆದಿದೆ. ಜೀವವಿಮೆ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾಗಳು ಸಮಾಜದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಿವೆ. ಸೊಸೈಟಿ ಮತ್ತಷ್ಟು ಬಲಪಡಿಸುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಸವಿತಾ ಸಮಾಜ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಉನ್ನತಿ ಕಾಣಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರೂ ಸಮಾಜದ ಸಂಘಟನೆಗೆ ಒತ್ತು ನೀಡಬೇಕು ಎಂದು ಹೇಳಿದರು.
ಸಂಘದ ಜಿಲ್ಲಾ ಉಪಾಧ್ಯಕ್ಷ ಸಿ.ಎನ್.ನಾಗರಾಜು, ತಾಲೂಕು ಘಟಕದ ಅಧ್ಯಕ್ಷ ಗಿರೀಶ್, ಹೋಬಳಿ ಘಟಕದ ಅಧ್ಯಕ್ಷ ಶ್ರೀನಿವಾಸ್, ಬಸವಾಪಟ್ಟಣದ ಪಾಲಾಕ್ಷ, ಗುರೂಜಿ, ಶ್ರೀನಿವಾಸ್, ಮಣಿ, ರಾಘವೇಂದ್ರ, ತುಕಾರಾಮ್, ಬೆಳವಾಡಿ ಶಿವು, ಎಚ್.ಎನ್.ಕುಮಾರ್, ಬಿ.ಎಸ್.ಯೋಗೇಶ್ ಇತರರಿದ್ದರು.
ವಿವಿಧೆಡೆ ಭೇಟಿ: ಜಿಲ್ಲಾ ಸವಿತಾ ಸಮಾಜ ಸಂಘದ ಮುಖಂಡರು ರವಿಕುಮಾರ್ ನೇತೃತ್ವದಲ್ಲಿ ತಾಲೂಕಿನ ಮಧುರನಹಳ್ಳಿ, ಕೇರಳಾಪುರ, ರಾಮನಾಥಪುರ, ಕೊಣನೂರು, ದೊಡ್ಡಮಗ್ಗೆ, ಮಲ್ಲಿಪಟ್ಟಣ, ಅರಕಲಗೂಡು, ಹರದೂರುಪುರ ಗ್ರಾಮಗಳಿಗೆ ಭೇಟಿ ನೀಡಿ ಸೊಸೈಟಿ ಅಭಿವೃದ್ಧಿಗೆ ಸಹಕರಿಸುವಂತೆ ಸಮಾಜದ ಮುಖಂಡರಲ್ಲಿ ಮನವಿ ಮಾಡಿದರು.