ಅರಕಲಗೂಡು: ತಾಲೂಕಿನ ಮಲ್ಲಿಪಟ್ಟಣ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಯುವ ಸಬಲೀಕರಣ ಕ್ರೀಡಾ ಇಲಾಖೆ, ಜನ ಆರೋಗ್ಯ ಕೇಂದ್ರ ಎಪಿಡಿಮಿಯೋಲಜಿ ವಿಭಾಗ, ನಿಮ್ಹಾನ್ಸ್ ಸಹಯೋಗದಲ್ಲಿ ಯುವ ಸ್ಪಂದನ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಯುವ ಪರಿವರ್ತಕ ಜಿ.ಎಲ್.ಚಂದ್ರಶೇಖರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಸ್ವ ಅರಿವು, ಒತ್ತಡ ನಿಭಾಯಿಸುವಿಕೆ ಹಾಗೂ ಹದಿಹರೆಯದ ಸವಾಲುಗಳನ್ನು ನಿಭಾಯಿಸುವ ಕಾರ್ಯತಂತ್ರ ಹಾಗೂ ಮಾನಸಿಕ ಚಿಂತನೆಗಳನ್ನು ಸದೃಢಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಯುವ ಜನರಿಗಾಗಿ ಮಾರ್ಗದರ್ಶನ ನೀಡಲು ಯುವ ಸ್ಪಂದನ ಕೇಂದ್ರವು ಹಾಸನದ ಜಿಲ್ಲಾ ಕ್ರೀಡಾಂಗಣದಲ್ಲಿದ್ದು, ಯಾವುದೇ ಯುವಜನ ಸಂಬಂಧಿ ವಿಷಯ, ಗೊಂದಲಗಳಿಗೆ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಯುವಜನತೆಯಲ್ಲಿ ಖಿನ್ನತೆ ಹೋಗಲಾಡಿಸಲು ಪ್ರಯತ್ನಿಸಲಾಗುತ್ತದೆಯಲ್ಲದೆ, ಮಾಹಿತಿಯ ಗೌಪ್ಯತೆ ಕಾಪಾಡಲಾಗುತ್ತದೆ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಯುವ ಸಬಲೀಕರಣದ ಮಹತ್ವ, ಆರೋಗ್ಯ, ಜೀವನಶೈಲಿ ಸುರಕ್ಷತೆ , ಲಿಂಗ ಲೈಂಗಿಕತೆ, ಶಿಕ್ಷಣ, ಮಾರ್ಗದರ್ಶನ, ಭಾವನೆಗಳು ಹಾಗೂ ಪ್ರಸ್ತುತ ದಿನಮಾನಗಳಲ್ಲಿ ಯುವ ಪೀಳಿಗೆಯ ಎದುರಿಸುತ್ತಿರುವ ಸವಾಲುಗಳ ಕುರಿತಾಗಿ ಮಾನಸಿಕ ಆರೋಗ್ಯ ಮಹತ್ವದ ಬಗ್ಗೆ ಅರಿವು ಮೂಡಿಸಲಾಯಿತು.
ಪ್ರಾಂಶುಪಾಲೆ ಚಂದ್ರಕಲಾ, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.