ಜಿಲ್ಲೆ

ಸಮಾಜವಾದದ ಮೂಲಕ ಪ್ರಜಾಪ್ರಭುತ್ವ ಸದೃಢಗೊಳಿಸಿ

ಮೈಸೂರು: ಸಮಾಜವಾದದ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸದೃಢಗೊಳಿಸಬೇಕಿದೆ ಎಂದು ರಾಜಕೀಯ ಚಿಂತಕ, ನಿವೃತ್ತ ಪ್ರಾಧ್ಯಾಪಕ ಪ್ರೊ.ಮುಜಾಫರ್ ಅಸಾದಿ ಹೇಳಿದರು.


ದೇಸಿರಂಗ ಸಾಂಸ್ಕೃತಿಕ ಟ್ರಸ್ಟ್‌ನ ವತಿಯಿಂದ ನಗರದ ರಂಗಾಯಣದ ಶ್ರೀರಂಗ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ‘ಪ್ರೊ.ಕೆ.ರಾಮದಾಸ್ ನೆನಪಿನಲ್ಲಿ ಸಂವಾದ, ಪುಸ್ತಕ ಬಿಡುಗಡೆ, ಲೇಖನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ’ದಲ್ಲಿ ಮಾತನಾಡಿದರು.


ಪ್ರಸ್ತುತ ಸಂದರ್ಭದಲ್ಲಿ ಸಮಾಜವಾದವು ಒಬ್ಬ ವ್ಯಕ್ತಿಯ ಅಧಿಕಾರ, ಅಹಂಕಾರವನ್ನು ಮೆಟ್ಟಿ ನಿಂತಿದೆ. ಕಾಲಕ್ಕೆ ತಕ್ಕಂತೆ ಸಮಾಜವಾದವು ಅವನತಿಯಾಗದೆ ವಿಭಿನ್ನ ರೂಪದಲ್ಲಿ ಮರುಜೀವ ಪಡೆದುಕೊಳ್ಳುತ್ತದೆ. ಆದ್ದರಿಂದ ಈ ವಿಚಾರಧಾರೆಯ ಕೊಂಡಿಗಳು ಸಧೃಢಗೊಳಿಸಬೇಕಾದ ಅಗತ್ಯವಿದೆ. ಉಸಿರಾಡುವ, ಬದುಕುವ, ಮಾತನಾಡುವ ಹಕ್ಕಿದೆ ಎನ್ನುವುದನ್ನು ತಿಳಿಯಲು ಹೊಸ ಸ್ವಾತಂತ್ರೃದ ಪರಿಕಲ್ಪನೆ, ಭವಿಷ್ಯದಲ್ಲಿ ಚಳವಳಿಗಳು, ಹೋರಾಟಗಳು ನಡೆಯಲು ಸಮಾಜವಾದವೇ ರಹದಾರಿಯಾಗಬೇಕು ಎಂದರು.


ಸ್ವಾತಂತ್ರೃದ ಬಳಿಕ ಎಲ್ಲ ಕಾಲಘಟ್ಟದಲ್ಲೂ ಸಮಾಜವಾದವೂ ಪರ್ಯಾಯ ರಾಜಕಾರಣದಲ್ಲಿ ಗೋಚರವಾಗಿದೆ. ಮೊದಲು ಕಾಂಗ್ರೆಸೇತರ ಸರ್ಕಾರ, ಆಮೇಲೆ ಬಿಜೆಪಿಯೇತರ ಸರ್ಕಾರ, ನಂತರ ಪಕ್ಷಾತೀತ ಎನ್ನುವ ಸಂದರ್ಭದಲ್ಲಿ ಅದು ವಿಭಿನ್ನ ಸ್ವರೂಪದಲ್ಲಿ ಮುಂಚೂಣಿಗೆ ಬಂದಿದೆ. ಅದಕ್ಕಾಗಿ ಸಮಾಜವಾದದ ಮೂಲಕ ಜನತಂತ್ರವನ್ನು ಗಟ್ಟಿಗೊಳಿಸಬೇಕು ಎಂದರು.


ಸಮಾಜವಾದವು ಒಂದು ತತ್ವವಾಗಿ ರಾರಾಜಿಸಿರುವುದು ಕಡಿಮೆ ಇದೆ. ಸಮಾಜವಾದ ಸಂವಿಧಾನದದ ಭಾಗವಾಗಿದ್ದರೂ ಅದನ್ನು ಮೈಗೂಡಿಸಿಕೊಂಡವರ ಸಂಖ್ಯೆ ಕಡಿಮೆಯೇ. ನೆಹರೂ ಕಾಲದಲ್ಲಿ ನಾಲ್ಕಣೆ ಸಮಾಜವಾದ, ಇಂದಿರಾಗಾಂಧಿ ಕಾಲದಲ್ಲಿ ಬಡವರ ಸಮಾಜವಾದ, ರಾಜೀವ್‌ಗಾಂಧಿ-ಮನಮೋಹನ್ ಸಿಂಗ್ ಕಾಲದಲ್ಲಿ ಬಡಕಲು ಸಮಾಜವಾದ ಎಂದು ಕರೆಯಲಾಗುತ್ತಿತ್ತು ಎಂದರು.


ಮನಮೋಹನ್ ಸಿಂಗ್ ಅವಧಿಯಲ್ಲಿ ಜಾಗತೀಕರಣ, ಉದಾರೀಕರಣ, ಖಾಸಗೀಕರಣ ವ್ಯವಸ್ಥೆ ಬಂದರೂ ಉದ್ಯೋಗ ಖಾತ್ರಿ, ಆಹಾರ ಭದ್ರತೆ ಖಾತ್ರಿ ಯೋಜನೆಗಳ ಮೂಲಕ ಸಮಾಜವಾದದ ಪರಿಕಲ್ಪನೆಯನ್ನು ಜಾರಿಗೆ ತರಲಾಯಿತು. ಮುಂದೆ ಬಂದ ಸರ್ಕಾರಗಳು ಬಡತನವನ್ನು ನೀಗಿಸುವ ಯೋಜನೆಗಳನ್ನು ಅನುಷ್ಠಾನಕ್ಕೆ ತಂದವೇ ಹೊರತು ಶಾಶ್ವತವಾದ ಯೋಜನೆ ಕೈಗೊಳ್ಳಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.


ಸೀಮಿತ ಬಂಡವಾಳಗಾರರ ಕೈಯಲ್ಲಿ ರಾಜ್ಯದ ಚೌಕಟ್ಟಿನ ಹಿಡಿತವನ್ನು ಕೊಟ್ಟು, ಅವರು ಜನಸಾಮಾನ್ಯರ ನಿತ್ಯದ ಅವಶ್ಯಕತೆಯನ್ನು ಮಾರುಕಟ್ಟೆಯ ಸರಕನ್ನಾಗಿಸುವಂತೆ ಮಾಡಲಾಯಿತು. ಒಂದರ್ಥದಲ್ಲಿ ಜನರನ್ನು ಕೈಗಾರಿಕೆ, ಉದ್ಯಮಗಳ ಜಾಲದೊಳಗೆ ಸಿಲುಕಿಸಲಾಯಿತು ಎಂದು ಕಳವಳ ವ್ಯಕ್ತಪಡಿಸಿದರು.


ಸಮಾಜವಾದಿಗಳು ಜಾತಿಯಿಂದ ಗುರುತಿಕೊಂಡಿರಲಿಲ್ಲ. ಆದರೆ, ಹಿಂದುಳಿದ ಜಾತಿ-ವರ್ಗಗಳಿಗೆ ಅಧಿಕಾರ ವಿಕೇಂದ್ರೀಕರಣವಾಗಬೇಕು ಆಶಯವಿತ್ತು. ಈ ನಿಟ್ಟಿನಲ್ಲಿ ಕೆಲಸಗಳು ನಡೆದಿವೆ ಎಂದರು.


ಅಧಿಕಾರವನ್ನು ಕೆಳಸ್ತರದಿಂದ ಕಟ್ಟಲು ಜಾತಿ ಜನಗಣತಿ ಅವಶ್ಯಕತೆ ಇದೆ. ಆದರೆ, ಸಮಾಜವಾದಿಗಳ ಹೊರತು ಪಡಿಸಿ ಉಳಿದವರು ಇದರ ಕುರಿತು ಬಾಯಿಬಿಡುತ್ತಿಲ್ಲ. ಜಾತಿ ಜನಗಣತಿಯಿಂದ ಪ್ರತಿಯೊಂದು ಜಾತಿಗಳ ನಿಖರ ಸಂಖ್ಯೆ ದೊರೆಯುತ್ತಿದೆ. ಮೇಲ್ಜಾತಿ, ಕೆಳಜಾತಿ ಸಂಖ್ಯಾಬಲ, ಸಂಬಂಧಗಳು ಹೊಸ ರೂಪ ಪಡೆದುಕೊಳ್ಳುತ್ತವೆ. ರಾಜಕೀಯ ಸಮೀಕರಣವೇ ಬದಲಾಗಲಿದೆ.

ರಾಜ್ಯ, ರಾಷ್ಟ್ರ ರಾಜಕೀಯ ಪರಿವರ್ತನೆಗೂ ಪ್ರಭಾವ ಬೀರಲಿದೆ ಎಂದರು.
ಪತ್ರಕರ್ತ ಕೃಷ್ಣಪ್ರಸಾದ್ ಮಾತನಾಡಿ, ಪ್ರಸ್ತುತ ರಾಜಕಾರಣದಲ್ಲಿ ನೈತಿಕ ನೆಲೆಗಟ್ಟನ್ನು ಗುರುತಿಸುವುದು ಕಷ್ಟವಾಗಿದೆ. ಕಳೆದ ಒಂದು ದಶಕದಲ್ಲಿ ನೈತಿಕತೆ ಕುಸಿದಿದೆ. ತಪ್ಪು-ಸರಿ, ನಿಜ-ಸುಳ್ಳು, ಒಳ್ಳೆಯದು-ಕೆಟ್ಟದು ಯಾವುದು ಎನ್ನುವುದು ತಿಳಿಯದಂತಾಗಿದೆ. ಇವುಗಳ ನಡುವೆ ಇರಬೇಕಾದ ಗೆರೆಯು ಅಳಿಸಿ ಹೋಗಿದೆ ಎಂದರು.


ಪ್ರೊ.ಕೆ.ರಾಮದಾಸ್ ಲೇಖನ ಪ್ರಶಸ್ತಿಯನ್ನು ನಾ.ದಿವಾಕರ್, ದೀಪು ಪ್ರಸಾದ್, ಕುಸುಮಾಬಾಯಿ ಅವರಿಗೆ ಪ್ರದಾನ ಮಾಡಲಾಯಿತು.
ಹಿರಿಯ ಪತ್ರಕರ್ತ ರವೀಂದ್ರ ಭಟ್, ಸಾಹಿತಿ ಸವಿತಾ ನಾಗಭೂಷಣ್, ದೇಸಿರಂಗ ಸಂಸ್ಥೆಯ ಅಧ್ಯಕ್ಷ ಕೃಷ್ಣ ಜನಮನ ಇನ್ನಿತರರಿದ್ದರು.