ಜಿಲ್ಲೆ

ಬೀದಿದೀಪ ನಿರ್ವಹಣೆಗೆ ಅನಾದರ

ವಿವೇಕಾನಂದ ದಾಸನಕೊಪ್ಪ

ಹಾನಗಲ್ಲ: ಪಟ್ಟಣದಲ್ಲಿ ಪುರಸಭೆ ನಿರ್ಲಕ್ಷ್ಯದಿಂದಾಗಿ ಬೀದಿದೀಪಗಳು ಬೆಳಗದೆ ಸಾರ್ವಜನಿಕರು ರಾತ್ರಿ ಹೊತ್ತು ಕತ್ತಲಲ್ಲಿ ಓಡಾಡುವಂತಾಗಿದೆ. ಮಹಿಳೆಯರು ಹಾಗೂ ಮಕ್ಕಳು ಹೊತ್ತು ಮುಳುಗುವುದರೊಳಗೆ ಮನೆ ಸೇರಿಕೊಳ್ಳುವ ಸ್ಥಿತಿ ಇದೆ.

ಪಟ್ಟಣದ ಹಾಯ್ದು ಹೋಗಿರುವ ತಡಸ-ಶಿವಮೊಗ್ಗ ಹೆದ್ದಾರಿ ಮಧ್ಯೆಯ ರಸ್ತೆ ವಿಭಜಕದಲ್ಲಿ ಅಳವಡಿಸಿರುವ ಕಂಬಗಳು, ಸರ್ಕಾರಿ ಆಸ್ಪತ್ರೆ, ತಹಸೀಲ್ದಾರ್ ಕಚೇರಿ, ಪೊಲೀಸ್ ಠಾಣೆ, ಚಿದಂಬರ ನಗರ, ಕುಮಾರೇಶ್ವರ ನಗರ, ವಿವೇಕಾನಂದ ನಗರ, ಕಿತ್ತೂರು ಚನ್ನಮ್ಮ ರಸ್ತೆ ಸೇರಿ ಹಲವು ಬಡಾವಣೆಗಳ ರಸ್ತೆಗಳಲ್ಲಿ ಬೀದಿದೀಪಗಳ ಬೆಳಕು ಇಲ್ಲದಾಗಿದೆ.

ಪ್ರಮುಖ ರಸ್ತೆಗಳಲ್ಲಿ ಬೀದಿದೀಪಗಳ ನಿರ್ವಹಣೆಯಲ್ಲಿ ಪುರಸಭೆ ವಿಫಲವಾಗಿದೆ. ಹಾಗಾಗಿ ಸಾರ್ವಜನಿಕರು ಅಂಗಡಿಗಳ ವಿದ್ಯುತ್ ದೀಪಗಳ ಬೆಳಕಿನಲ್ಲೇ ಸಂಚರಿಸುವಂತಾಗಿದೆ. ರಾತ್ರಿ 10 ಗಂಟೆ ಬಳಿಕ ರಸ್ತೆಗಳಲ್ಲಿ ಸಂಪೂರ್ಣವಾಗಿ ಕತ್ತಲು ಆವರಿಸುತ್ತದೆ.

ಸಮಸ್ಯೆಗೆ ಕಾರಣವೇನು?: ಸಾರ್ವಜನಿಕರ ಒತ್ತಾಯಕ್ಕೆ ಬಲ್ಬ್ ಹಾಕಿದರೂ ಅವು ಒಂದಷ್ಟು ದಿನ ಬೆಳಕು ನೀಡಿ ಕಣ್ಣು ಮುಚ್ಚಿಕೊಳ್ಳುತ್ತವೆ. ಇದರಿಂದ ಪುರಸಭೆ ಖರೀದಿಸುತ್ತಿರುವ ಬಲ್ಬ್​ಗಳು ಗುಣಮಟ್ಟ ಎಂತಹದು ಎಂಬ ಪ್ರಶ್ನೆ ಮೂಡುತ್ತದೆ. ಬೀದಿದೀಪಗಳು ಬಹಳ ದಿನಗಳಿಂದ ಬೆಳಗದಿದ್ದರೂ ಹೊಸ ದೀಪ ಅಳವಡಿಸುವುದಿಲ್ಲ. ಹೀಗಾಗಿ, ಹೊಸ ದೀಪಗಳ ಖರೀದಿಸಲು ಪುರಸಭೆಗೆ ಅನುದಾನ ಕೊರತೆಯಿದೆಯೇ ಎಂಬ ಇತ್ಯಾದಿ ಅನುಮಾನ ಕಾಡುತ್ತದೆ.

ಹೆಸ್ಕಾಂ ನಿರ್ಲಕ್ಷ್ಯ: ಪಟ್ಟಣದಲ್ಲಿ 12 ಸಾವಿರ ವಿದ್ಯುತ್ ಬಳಕೆದಾರರಿದ್ದಾರೆ. 110 ಕಿ.ಮೀ. ವಿದ್ಯುತ್ ತಂತಿ ಹಾಕಲಾಗಿದೆ. 171 ವಿದ್ಯುತ್ ಪರಿವರ್ತಕಗಳಿವೆ. ಆದರೆ, ಅವುಗಳ ನಿರ್ವಹಣೆಗೆ ಕೇವಲ 4 ಜನ ಲೈನ್​ವುನ್​ಗಳಿದ್ದಾರೆ. ಪ್ರತಿದಿನ ನಾಲ್ಕಾರು ಬಾರಿ ವಿದ್ಯುತ್ ನಿಲುಗಡೆಯಾಗುತ್ತದೆ. ಸಾರ್ವಜನಿಕರು ಕೇಳಿದರೆ ಲೈನ್​ಫಾಲ್ಟ್ ಎಂಬ ಉತ್ತರ ಕೇಳಿಬರುತ್ತದೆ. ಕಾಲಕಾಲಕ್ಕೆ ವಿದ್ಯುತ್ ತಂತಿ ಬದಲಾಯಿಸಿರುವುದಾಗಿ ಹೆಸ್ಕಾಂ ಅಧಿಕಾರಿಗಳು ಹೇಳುತ್ತಾರೆ. ಆದರೂ ಪಟ್ಟಣದ ಕತ್ತಲಿನ ಸಮಸ್ಯೆಗೆ ಸಮರ್ಪಕ ಉತ್ತರ ಸಿಗದಂತಾಗಿದೆ.

ಸ್ವಾತಂತ್ರ್ಯೊತ್ಸವದ ದಿನ ರಾತ್ರಿ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆಯಾಗಿ ಪಟ್ಟಣದ ಜನ ರಾತ್ರಿಯಿಡೀ ಕತ್ತಲಲ್ಲೇ ಕಾಲ ಕಳೆಯುವಂತಾಗಿತ್ತು. ಕೆಲ ದಿನಗಳಲ್ಲೇ ಗಣೇಶ ಹಬ್ಬ ಸಮೀಪಿಸುತ್ತಿದೆ. ಹಬ್ಬದ ಸಂಭ್ರಮಾಚರಣೆಗಳಲ್ಲಿಯೂ ಪಟ್ಟಣದ ಬೀದಿಗಳು ಕತ್ತಲೆಯಿಂದ ಕೂಡಿದ್ದರೆ ಹೇಗೆ ಎಂಬುದು ನಾಗರಿಕರ ಅಳಲು.

ಸಚಿವರ ಸೂಚನೆಗೂ ಕಿಮ್ಮತ್ತಿಲ್ಲ: ವಿದ್ಯುತ್ ಸಮಸ್ಯೆ ಕುರಿತು ಇತ್ತೀಚೆಗೆ ಪಟ್ಟಣಕ್ಕೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಗಮನಕ್ಕೆ ತರಲಾಗಿತ್ತು.ಸ್ಥಳದಲ್ಲಿದ್ದ ಜಿಲ್ಲಾಧಿಕಾರಿಗೆ ಸಮಸ್ಯೆ ಪರಿಶೀಲಿಸಿ, ಸರಿಪಡಿಸುವಂತೆ ಸಚಿವರು ಸೂಚನೆ ನೀಡಿದ್ದರು. ಆದರೆ, 20 ದಿನ ಕಳೆದರೂ ವಿದ್ಯುತ್ ಸಮಸ್ಯೆ ಬಗೆಹರಿದಿಲ್ಲ.

ಹಾನಗಲ್ಲನಲ್ಲಿ ಹೊಸದಾಗಿ ವಿದ್ಯುತ್ ತಂತಿ ಹಾಕಲಾಗಿದೆ. ಮಳೆಯಿಂದ ಕಂಬಗಳಲ್ಲಿನ ತಂತಿ ತುಕ್ಕು ಹಿಡಿದು ಸಮಸ್ಯೆಯಾಗುತ್ತಿದೆ. ಮಳೆ-ಗಾಳಿಗೆ ಗಿಡ, ಮರಗಳ ಕೊಂಬೆ, ತೆಂಗಿನ ಗರಿಗಳು ಬಿದ್ದು ತೊಂದರೆ ಆದಾಗ ಮನೆಗಳ ಲೈನ್​ಗಳ ಸಮಸ್ಯೆ ಸರಿಪಡಿಸಬೇಕಿರುತ್ತದೆ. ಹೀಗಾಗಿ, ವಿದ್ಯುತ್ ನಿಲುಗಡೆ ಅನಿವಾರ್ಯ. ಬೀದಿದೀಪಗಳ ನಿರ್ವಹಣೆ ಪುರಸಭೆಗೆ ಸಂಬಂಧಿಸಿದ್ದು. | ಎಸ್.ಆನಂದ, ಹೆಸ್ಕಾಂ ಎಇಇ ಹಾನಗಲ್ಲ ಪಟ್ಟಣದ ಮುಖ್ಯ ರಸ್ತೆಯಲ್ಲಿನ ವಿದ್ಯುತ್ ತಂತಿಗಳು ಹಾಳಾಗಿವೆ. ಹೈಮಾಸ್ಟ್ ದೀಪ ಹೊರತುಪಡಿಸಿ, 15ನೇ ಹಣಕಾಸು ಯೋಜನೆಯಡಿ ರಂಜನಿ ಚಿತ್ರಮಂದಿರದಿಂದ ನ್ಯಾಯಾಲಯದವರೆಗೆ ಹೊಸಲೈನ್ ಅಳವಡಿಕೆಗೆ ಟೆಂಡರ್ ಕರೆಯಲಾಗಿದೆ. ದ್ವಿಮುಖ ರಸ್ತೆಯ ವಿಭಜಕದಲ್ಲಿ 17 ಲಕ್ಷ ರೂ. ವೆಚ್ಚದಲ್ಲಿ 38 ಕಂಬಗಳಿಗೆ ಅಂಡರ್​ಗ್ರೌಂಡ್ ಕೇಬಲ್ ಅಳವಡಿಸಿ, 76 ಎಲ್​ಇಡಿ ಬೀದಿದೀಪ ಅಳವಡಿಸಲಾಗುತ್ತಿದೆ. ಶೀಘ್ರವೇ ಸಮಸ್ಯೆ ಇತ್ಯರ್ಥವಾಗಲಿದೆ. | ವೈ.ಕೆ. ಜಗದೀಶ, ಪುರಸಭೆ ಮುಖ್ಯಾಧಿಕಾರಿ ಹಾನಗಲ್ಲ