ಮಡಿಕೇರಿ:
ಪ್ರಸಿದ್ದ ಪ್ರವಾಸಿ ತಾಣ ರಾಜಾಸೀಟ್ ಬಳಿ ರಸ್ತೆ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಿರುವುದನ್ನು ಖಂಡಿಸಿ ರಸ್ತೆ ಬದಿ ವ್ಯಾಪಾರಿಗಳು ಮಡಿಕೇರಿ ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಬೀದಿ ಬದಿ ವ್ಯಾಪಾರಕ್ಕೆ ನಗರದಲ್ಲಿ ನಗರಸಭೆ ವತಿಯಿಂದ ಬೇರೆ ಕಡೆಗಳಲ್ಲಿ ಜಾಗ ಗುರುತಿಸಲಾಗಿದ್ದು, ಅಲ್ಲಿಗೆ ತೆರಳುವಂತೆ ಸೂಚಿಸಿ ಗುರುವಾರ ರಾಜಾಸೀಟ್ ಬಳಿಯ ಬಿದಿ ಬದಿ ಅಂಗಡಿಗಳನ್ನು ತೆರವು ಮಾಡಲಾಗಿತ್ತು. ಆದರೆ ಬದಲಿ ಜಾಗದಲ್ಲಿ ಸೂಕ್ತ ವ್ಯವಸ್ಥೆ ಇಲ್ಲ. ಅಲ್ಲಿ ಸರಿಯಾದ ವ್ಯವಸ್ಥೆಗಳು ಆಗುವ ತನಕ ರಾಜಾಸೀಟ್ ಬಳಿ ವ್ಯಾಪಾರ ಮುಂದುವರಿಸಲು ಅನುಮತಿ ಕೊಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ಮಾಡಲಾಗುತ್ತಿದೆ. ನಗರಸಭೆಯಲ್ಲಿ ವಿರೋಧ ಪಕ್ಷವಾಗಿರುವ ಎಸ್‌ಡಿಪಿಐ ಪ್ರತಿಭಟನಕಾರರಿಗೆ ಬೆಂಬಲ ಸೂಚಿಸಿದ್ದು, ಪಕ್ಷದ ನಗರಸಭಾ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
ನಗರಸಭೆ ಆಡಳಿತ ಪಕ್ಷದ ಸದಸ್ಯರು ಮತ್ತು ಅಧ್ಯಕ್ಷರ ವಿರುದ್ಧ ಘೋಷಣೆ ಕೂಗುತ್ತಿರುವ ಪ್ರತಿಭಟನಾಕಾರರು ತಮಗೆ ನ್ಯಾಯ ಸಿಗುವ ತನಕ ಪ್ರತಿಭಟನೆ ನಡೆಸುವುದಾಗಿ ಪಟ್ಟು ಹಿಡಿದಿದ್ದಾರೆ.ನ ಈ ಬಗ್ಗೆ ಪ್ರತಿಕ್ರಿಯೆ ನಿಡಿರುವ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಜಿಲ್ಲೆಯ ಪ್ರಮುಖ ಪ್ರವಾಸಿತಾಣವಾಗಿರುವ ರಾಜಾಸೀಟ್ ಬಳಿ ಬೀದಿ ಬದಿ ವ್ಯಾಪಾರಿಗಳಿಂದ ಸಮಸ್ಯೆ ಆಗುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಅವರವರೇ ಹೊಡೆದಾಡಿಕೊಂಡು ಸಮಸ್ಯೆ ಸೃಷ್ಟಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಹಿಂದಿನ ಜಿಲ್ಲಾಧಿಕಾರಿ ಅಲ್ಲಿಂದ ಬೀದಿ ಬದಿ ವ್ಯಾಪಾರಿಗಳನ್ನು ತೆರವು ಮಾಡಿಸಿದ್ದರು. ಆದರೆ ನಂತರ ಮತ್ತೆ ಅಲ್ಲಿ ವ್ಯಾಪಾರ ಶುರು ಮಾಡಿದ್ದರು. ಅವರನ್ನು ಅಲ್ಲಿಂದ ತೆರವು ಮಾಡುವ ಬಗ್ಗೆ ರಾಜಾಸೀಟ್ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಚರ್ಚೆ ಆಗಿತ್ತು. ಪೊಲೀಸರು ಕೂಡ ಈ ಸಂಬಂಧ ನಗರಸಭೆಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಬೀದಿ ಬದಿ ವ್ಯಾಪಾರಕ್ಕೆ ನಗರದ ಬೇರೆ ಸ್ಥಳಗಳಲ್ಲಿ ಜಾಗ ಗುರುತಿಸಿ ಅಲ್ಲಿಗೆ ತೆರಳುವಂತೆ ಸೂಚಿಸಲಾಗಿತ್ತು. ಆದರೆ ನಿಗದಿತ ಗಡುವು ಮೀರಿದರೂ ಸ್ಥಳಾಂತರವಾಗದ ಹಿನ್ನೆಲೆಯಲ್ಲಿ ತೆರವು ಮಾಡಿಸಲಾಗಿದೆ. ನಗರಸಭೆ ಕ್ರಮಕ್ಕೆ ಸಾರ್ವಜನಿಕರ ಬೆಂಬಲ ವ್ಯಕ್ತವಾಗಿದೆ. ಬಿದಿ ಬದಿ ವ್ಯಾಪಾರಿಗಳಿಗೆ ಬದಲಿ ಜಾಗದಲ್ಲಿ ಎಲ್ಲಾ ವ್ಯವಸ್ಥೆ ಮಾಡಿಕೊಡಲಾಗುವುದು. ಪ್ರತಿಭಟನೆ ಬಿಟ್ಟು ಅಲ್ಲಿಗೆ ತೆರಳಲಿ ಎಂದಿದ್ದಾರೆ.