ಜಿಲ್ಲೆ

ಬೀದಿ ಬದಿ ವ್ಯಾಪಾರಿಗಳಿಗೆ ವಲಯ ನಿರ್ಮಾಣ ಮರೀಚಿಕೆ

ಹರೀಶ ಎಂ.

ಮಂಗಳೂರು: ಬೀದಿ ಬದಿ ವ್ಯಾಪಾರಿಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಪ್ರತ್ಯೇಕ ವಲಯ ನಿರ್ಮಾಣ ಮಾಡುವುದಾಗಿ ಪಾಲಿಕೆ ಹಲವು ಸಮಯಗಳಿಂದ ಹೇಳುತ್ತಲೇ ಬಂದಿದ್ದರೂ, ಇನ್ನೂ ಕಾರ್ಯಗತವಾಗುವ ಲಕ್ಷಣ ಗೋಚರಿಸುತ್ತಿಲ್ಲ. ಇದರಿಂದಾಗಿ ವ್ಯಾಪಾರಿಗಳು ಎಲ್ಲೆಂದರಲ್ಲಿ ವ್ಯಾಪಾರ ಮಾಡುವಂತಾಗಿದೆ.


ಹಂಪನಕಟ್ಟೆ, ಸ್ಟೇಟ್‌ಬ್ಯಾಂಕ್, ಲೇಡಿಗೋಷನ್, ಸೆಂಟ್ರಲ್ ಮಾರ್ಕೆಟ್, ಕಾರ್‌ಸ್ಟ್ರೀಟ್, ಕಂಕನಾಡಿ ಮೊದಲಾದ ಕಡೆಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಬೀದಿಬದಿ ವ್ಯಾಪಾರಿಗಳಿದ್ದಾರೆ. ಇವರಿಂದ ಸಾರ್ವಜನಿಕರಿಗೆ ತೊಂದರೆಯಾಗಬಾರದೆನ್ನುವ ಕಾರಣಕ್ಕೆ ಪುರಭವನದಿಂದ ಬಸ್ ನಿಲ್ದಾಣವರೆಗೆ ಹಾಗೂ ಇಂದಿರಾ ಕ್ಯಾಂಟೀನ್ ವ್ಯಾಪ್ತಿಯಲ್ಲಿ ಪ್ರತ್ಯೇಕ ವಲಯ ಮಾಡುವಂತೆ ಬೀದಿಬದಿ ವ್ಯಾಪಾರಿಗಳ ಸಂಘ ಪಾಲಿಕೆಗೆ ಮನವಿ ಮಾಡಿತ್ತು. ಪಾಲಿಕೆಯೂ ಕೂಡ ಇದಕ್ಕೆ ಸಮ್ಮತಿಸಿದೆ. ಆದರೆ, ಕಾಮಗಾರಿ ಮಾತ್ರ ಇಲ್ಲಿಯ ತನಕ ಆರಂಭಗೊಂಡಿಲ್ಲ ಎಂಬುವುದಾಗಿ ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.


ವ್ಯಾಪಾರಿಗಳ ಸಂಖ್ಯೆ ಹೆಚ್ಚಳ:
ಈ ಹಿಂದೆ ವಲಯಕ್ಕೆ ಸ್ಥಳಾಂತರಿಸಲು ತಿಳಿಸಲಾಗಿತ್ತು. ಆದರೆ, ಸಮರ್ಪಕ ವ್ಯವಸ್ಥೆಯಾಗದ ಹಿನ್ನೆಲೆಯಲ್ಲಿ ಸ್ಥಳಾಂತರ ಪ್ರಕ್ರಿಯೆ ಅರ್ಧಕ್ಕೆ ಸ್ಥಗಿತಗೊಂಡಿತ್ತು. 2021ರಲ್ಲಿ ಪಾಲಿಕೆ ಬೀದಿಬದಿ ವ್ಯಾಪಾರಿಗಳ ಸರ್ವೆ ನಡೆಸಿದ ಸಂದರ್ಭದಲ್ಲಿ 280 ಮಂದಿ ಬೀದಿ ವ್ಯಾಪಾರಿಗಳಿದ್ದರು. ಇದೀಗ ಈ ಸಂಖ್ಯೆ 665ಕ್ಕೆ ಏರಿಕೆಯಾಗಿದೆ. ಮತ್ತಷ್ಟು ವಿಳಂಬ ಮಾಡಿದರೆ ಸಂಖ್ಯೆ ಹೆಚ್ಚಳವಾಗುತ್ತಲೇ ಹೋಗುತ್ತದೆ. ಈ ಹಿನ್ನೆಲೆಯಲ್ಲಿ ಗುರುತಿಸಿರುವ ಬೀದಿಬದಿ ವ್ಯಾಪಾರಿಗಳಿಗೆ ಐಡಿ ಕಾರ್ಡ್ ವಿತರಿಸಿ ಸ್ಥಳಾಂತರಗೊಳಿಸಬೇಕು ಎಂಬ ಮಾತು ವ್ಯಾಪಾರಿಗಳದ್ದು.


ಸಾರ್ವಜನಿಕರಿಂದ ನಿರಂತರ ದೂರು:
ಪಾಲಿಕೆಯ ಸಾಮಾನ್ಯ ಸಭೆಯಲ್ಲಿ, ಮೇಯರ್ ೆನ್ ಇನ್ ಕಾರ್ಯಕ್ರಮದಲ್ಲಿ ಬೀದಿಬದಿ ವ್ಯಾಪಾರಿಗಳಿಂದ ಉಂಟಾಗುವ ಅಡಚನೆ ಬಗ್ಗೆ ನಿರಂತರ ದೂರುಗಳು ಬರುತ್ತಿದ್ದವು. ುಟ್‌ಪಾತ್‌ಗಳಿಂದ ತೆರವುಗೊಳಿಸುವಂತೆ ಸಾರ್ವಜನಿಕ ವಲಯದಿಂದ ಆಗ್ರಹಗಳು ಕೇಳಿಬರುತ್ತಿತ್ತು. ಪಾಲಿಕೆಗೂ ಸಾರ್ವಜನಿಕರು ಲಿಖಿತ ರೂಪದಲ್ಲಿ ತಿಳಿಸಿದ್ದರು. ಆದರೆ, ಪರ್ಯಾಯ ವ್ಯವಸ್ಥೆಯೇ ಪಾಲಿಕೆಗೆ ಸವಾಲಾಗಿದೆ.

ವಲಯ ಹೀಗಿರಬೇಕು :
ಪ್ರತ್ಯೇಕ ವಲಯ ಮಾಡಿದ ಬಳಿಕ ಅದಕ್ಕೆ ಪ್ರತ್ಯೇಕ ನೀರು, ಚರಂಡಿ ವ್ಯವಸ್ಥೆ ಮಾಡಬೇಕು. ನೆಲಕ್ಕೆ ಇಂಟರ್‌ಲಾಕ್ ಅಳವಡಿಸಬೇಕು. ಬಿಸಿಲು ಮಳೆಯಿಂದ ರಕ್ಷಣೆಗಾಗಿ ಮೇಲ್ಛಾವಣಿ ಅಗತ್ಯ. ವಿದ್ಯುತ್ ದೀಪಗಳನ್ನು ಅಳವಡಿಸಬೇಕು. ಗ್ರಾಹಕರು ವಲಯದತ್ತ ಆಗಮಿಸುವಂತಿರಬೇಕು. ಆಹಾರ, ಹೂ, ್ಯಾನ್ಸಿ ವಸ್ತುಗಳ ಮಾರಾಟಕ್ಕೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕು. ತ್ಯಾಜ್ಯ ಸಂಗ್ರಹಿಸಿ ಸೌಲಭ್ಯ ಕಲ್ಪಿಸಿದ ಬಳಿಕ ನಿಯಮದ ಪ್ರಕಾರ ಪಾಲಿಕೆ ವ್ಯಾಪಾರಿಗಳಿಂದ ಶುಲ್ಕ ಸಂಗ್ರಹಿಸಬಹುದು.

ನೂತನ ವಲಯದಲ್ಲಿ 200 ವ್ಯಾಪಾರಿಗಳಿಗೆ ಅವಕಾಶ ನೀಡಲಾಗುತ್ತದೆ. ಪುರಭವನ ಸಮೀಪ ಅಗಲವಾದ ುಟ್‌ಪಾತ್ ಇದ್ದು ಅಲ್ಲಿಂದ ಬಸ್ ನಿಲ್ದಾಣವರೆಗೆ ್ಯಾನ್ಸಿ, ಬಟ್ಟೆ, ಪ್ಲಾಸ್ಟಿಕ್ ಮಾರಾಟಗಾರರಿಗೆ ಅವಕಾಶ ನೀಡಬೇಕು. ಇಂದಿರಾ ಕ್ಯಾಂಟೀನ್ ಮುಂಭಾಗದಲ್ಲಿ ಬಟ್ಟೆ ಸೇರಿದಂತೆ ಇತರ ವಸ್ತು ಮಾರಾಟಕ್ಕೆ ಹಾಗೂ ಹಿಂಭಾಗದಲ್ಲಿ ತಿಂಡಿ ತಿನಿಸುಗಳ ವ್ಯಾಪಾರಸ್ಥರಿಗೆ ಅವಕಾಶ ಇದೆ. ಪ್ರಸ್ತುತ ನೋಂದಾಯಿಸಿಕೊಂಡು ಸೂಚಿಸಲಾದ ವ್ಯಾಪಾರಿಗಳಿಗೆ ಮಾತ್ರವೇ ಅವಕಾಶ ಸಿಗಲಿದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.

ಮಂಗಳೂರು ನಗರದಲ್ಲಿ ಬೀದಿ ಬದಿ ವ್ಯಾಪಾರಸ್ಥರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದರ ಬಗ್ಗೆ ಹಲವಾರು ದೂರುಗಳು ಬರುತ್ತಿವೆ. ಪ್ರತ್ಯೇಕ ವಲಯ ನಿರ್ಮಾಣಕ್ಕೆ ಪಾಲಿಕೆ ಯೋಜನೆ ರೂಪಿಸಿದೆ. ಶೀಘ್ರದಲ್ಲೇ ಸಾಕಾರವಾಗುವ ನಿಟ್ಟಿನಲ್ಲಿ ಒತ್ತು ನೀಡಲಾಗುವುದು.
ಸುಧೀರ್ ಶೆಟ್ಟಿ ಕಣ್ಣೂರು
ಮೇಯರ್