ಮುದ್ದೇಬಿಹಾಳ ಪುರಸಭೆಯಲ್ಲಿ ನಡೆದ ಬೀದಿಬದಿ ವ್ಯಾಪಾರಸ್ಥರ ಸಭೆಯಲ್ಲಿ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಮಾತನಾಡಿದರು. ಅಧ್ಯಕ್ಷ ಮಹಿಬೂಬ ಗೊಳಸಂಗಿ, ಉಪಾಧ್ಯಕ್ಷೆ ಪ್ರೀತಿ ದೇಗಿನಾಳ ಇತರರಿದ್ದರು. 
ಜಿಲ್ಲೆ

ಬೀದಿಬದಿ ವ್ಯಾಪಾರಸ್ಥರು ನಿಯಮ ಪಾಲಿಸುವುದು ಕಡ್ಡಾಯ

ಮುದ್ದೇಬಿಹಾಳ: ಪಟ್ಟಣದಲ್ಲಿ ಬೀದಿಬದಿ ವ್ಯಾಪಾರಸ್ಥರಿಗೆ ಶೀಘ್ರ ಗುರುತಿನ ಕಾರ್ಡ್ ವಿತರಿಸಲಾಗುತ್ತಿದ್ದು, ಕಡ್ಡಾಯವಾಗಿ ಧರಿಸಬೇಕು. ರಸ್ತೆ ಅತಿಕ್ರಮಿಸಿ ಸಾರ್ವಜನಿಕ ಸಂಚಾರಕ್ಕೆ ತೊಂದರೆ ಆಗದ ರೀತಿಯಲ್ಲಿ ವ್ಯಾಪಾರ ಮಾಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಹೇಳಿದರು.

ಇಲ್ಲಿನ ಪುರಸಭೆ ಸಭಾಭವನದಲ್ಲಿ ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ ಅಧ್ಯಕ್ಷತೆಯಲ್ಲಿ ನಡೆದ ಬೀದಿಬದಿ ವ್ಯಾಪಾರಸ್ಥರ ಸಭೆಯಲ್ಲಿ ಅವರು ಮಾತನಾಡಿದರು.

ನಿಯಮ ಉಲ್ಲಂಸಿ ಸಾರ್ವಜನಿಕರಿಗೆ ತೊಂದರೆ ಮಾಡಿದರೆ 500 ರೂ. ದಂಡ ವಿಧಿಸಬೇಕಾಗುತ್ತದೆ. ದೀಪಾವಳಿವರೆಗೂ ಕಾಲಾವಕಾಶ ನೀಡಲಾಗುತ್ತದೆ. ದೀಪಾವಳಿ ನಂತರ ನಿಯಮ ಪಾಲಿಸುವುದು ಎಲ್ಲರಿಗೂ ಕಡ್ಡಾಯವಾಗಿರಲಿದೆ. ಎಲ್ಲ ವ್ಯಾಪಾರಸ್ಥರು ಪಟ್ಟಣದ ಸ್ವಚ್ಛತೆ, ಸಂಚಾರ ಸುರಕ್ಷತೆ ನಿಯಮ ಪಾಲಿಸಬೇಕು ಎಂದರು.

ಪುರಸಭೆ ಸಿಬ್ಬಂದಿ ಗುರುತಿನ ಕಾರ್ಡ್ ಚೆಕ್ ಮಾಡುವಾಗ ಇರದಿದ್ದರೆ ಅಂಥವರಿಗೆ ವ್ಯಾಪಾರಕ್ಕೆ ಅವಕಾಶ ಕೊಡುವುದಿಲ್ಲ. ಒಂದೇ ಕುಟುಂಬದವರು ನಾಲ್ಕೈದು ಸ್ಥಳಗಳನ್ನು ಅತಿಕ್ರಮಿಸಿ ಬೇರೆಯವರಿಗೆ ಬಾಡಿಗೆ ಕೊಟ್ಟಿದ್ದು ಕಂಡು ಬಂದಲ್ಲಿ ಅಂಥವರ ವಿರುದ್ಧವೂ ಕ್ರಮ ಜರುಗಿಸಲಾಗುತ್ತದೆ. ಹುಡ್ಕೋ ಬಡಾವಣೆಯ ಗವಿಸಿದ್ಧೇಶ್ವರ ಮೈದಾನ, ಬಜಾರ್‌ದಲ್ಲಿ ತೆರವುಗೊಳಿಸಿರುವ ಕಾಯಿಪಲ್ಲೆ ಮಾರುಕಟ್ಟೆ ಸ್ಥಳ ಸೇರಿ ಕೆಲವು ಪ್ರಮುಖ ಸ್ಥಳಗಳಲ್ಲಿ ತರಕಾರಿ, ಹಣ್ಣು ಮಾರಾಟಕ್ಕೆ ಅವಕಾಶ ಕಲ್ಪಿಸುವ ಚಿಂತನೆ ನಡೆದಿದ್ದು ಶೀಘ್ರ ಜಾರಿಗೊಳಿಸಲಾಗುತ್ತದೆ ಎಂದರು.

ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ ಮಾತನಾಡಿ, ಈಗಾಗಲೇ ಮುಖ್ಯ ರಸ್ತೆಗಳಲ್ಲಿನ ಅತಿಕ್ರಮಣ ತೆರವುಗೊಳಿಸಲಾಗಿದೆ. ಪುರಸಭೆಯವರು ನಿಗದಿಪಡಿಸುವ ಸ್ಥಳದಲ್ಲೇ ವ್ಯಾಪಾರ ಮಾಡಬೇಕು. ಬಸವೇಶ್ವರ ವೃತ್ತದಿಂದ ಮುಖ್ಯ ಬಜಾರ್ ಮಾರ್ಗವಾಗಿ ಇಂದಿರಾ ವೃತ್ತದವರೆಗೂ ನಿಯಮ ಪಾಲನೆ ಕಡ್ಡಾಯವಾಗಿರಲಿದೆ. ಕೆಬಿಎಂಪಿ ಶಾಲೆಯ ಹತ್ತಿರ ತಳ್ಳುಗಾಡಿಯವರು ರಸ್ತೆ ಪಕ್ಕದಲ್ಲಿ ನಿಲ್ಲದೆ ಬಡಾವಣೆಗಳಲ್ಲಿ ಸಂಚರಿಸಿ ವ್ಯಾಪಾರ ಮಾಡಬೇಕು. ನಿಯಮ ಮೀರಿದರೆ ಗಾಡಿ ವಶಪಡಿಸಿಕೊಳ್ಳಬೇಕಾಗುತ್ತದೆ. ಮಾಂಸ, ಮೀನು ಮಾರುವವರು ಸ್ವಚ್ಛತೆಗೆ ಆದ್ಯತೆ ಕೊಡಬೇಕು. ಗ್ಲಾಸ್ ಬಾಕ್ಸ್‌ನಲ್ಲಿ ಮಾಂಸ, ಮೀನು ಇಟ್ಟು ಧೂಳಿನಿಂದ ಮುಕ್ತಗೊಳಿಸಿ ವ್ಯವಹಾರ ಮಾಡಬೇಕು ಎಂದರು.

ಬೀದಿಬದಿ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಿಬೂಬ ಜಾಗಿರದಾರ (ಪಾನವಾಲೆ) ಮಾತನಾಡಿ, ಬಡವರಿಗೆ ವ್ಯಾಪಾರಕ್ಕೆ ಸೂಕ್ತ ಸ್ಥಳಾವಕಾಶ ಮಾಡಿಕೊಟ್ಟರೆ ಅಲ್ಲೇ ವ್ಯಾಪಾರ ಮಾಡುತ್ತಾರೆ. ಸಂಚಾರ ಸಮಸ್ಯೆ ವ್ಯಾಪಾರಸ್ಥರಿಂದ ಆಗುವುದಿಲ್ಲ. ಬಸವೇಶ್ವರ ವೃತ್ತದಿಂದ ಇಂದಿರಾ ವೃತ್ತದವರೆಗೂ ರಸ್ತೆಗಳ ಎರಡೂ ಬದಿ ವಾಹನಗಳ ನಿಲುಗಡೆ ಮಾಡುವುದರಿಂದ ಸಮಸ್ಯೆ ಆಗುತ್ತದೆ. ಈ ಮಾರ್ಗದಲ್ಲಿ ದೊಡ್ಡ ವಾಹನಗಳ ಸಂಚಾರ ನಿಷೇಧಿಸಬೇಕು. ವೃತ್ತಗಳಲ್ಲಿ ಪೊಲೀಸರನ್ನು ನಿಯೋಜಿಸಬೇಕು. ಪರ್ಯಾಯ ವ್ಯವಸ್ಥೆ ಕಲ್ಪಿಸುವವರೆಗೂ ಸಂಚಾರ ಸಮಸ್ಯೆ ಆಗದಂತೆ ಈಗಿರುವಲ್ಲಿಯೇ ವ್ಯಾಪಾರ ನಡೆಸಲು ಅವಕಾಶ ಕೊಡಬೇಕು ಎಂದರು.

ಎಎಸ್‌ಐ ಅಮರೇಶ ಸಾಲಿ ಮಾತನಾಡಿದರು. ಪುರಸಭೆ ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ನಾಮನಿರ್ದೇಶಿತ ಸದಸ್ಯ ಹರೀಶ ಬೇವೂರ, ಸಂಘದ ತಾಲೂಕು ಅಧ್ಯಕ್ಷ ಮಹಿಬೂಬ ಕುಳಗೇರಿ, ಜಿಲ್ಲಾ ಕಾರ್ಯದರ್ಶಿ ಆಸ್ೀ ನಿಡಗುಂದಿ, ಪ್ರಮುಖರಾದ ಸಂಗಪ್ಪ ವಿಜಯಕರ, ತೌಫೀಕ ಜಾಗಿರದಾರ, ಪರಶುರಾಮ ನಾಲತವಾಡ, ಸಮೀರ ದ್ರಾಕ್ಷಿ, ಎಸ್‌ಡಿಪಿ ಅಧ್ಯಕ್ಷ ಸಮೀರ ಹುಣಸಗಿ, ಬಾಬಾಜಾನ ಮಮದಾಪೂರ ಇತರರಿದ್ದರು.