ಜಿಲ್ಲೆ

ಕತ್ತಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ! : ಇಕ್ಕೆಲಗಳಲ್ಲಿ ದಟ್ಟವಾಗಿ ಬೆಳೆದಿದೆ ಗಿಡಗಂಟಿ : ಚಿರತೆಗಳ ಹಾವಳಿಯಿಂದ ಜನರ ಆತಂಕ ಇಮ್ಮಡಿ

ಭಾಗ್ಯವಾನ್ ಸನಿಲ್ ಮೂಲ್ಕಿ

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮೂಲ್ಕಿ ಕೊಕ್ಕರಕಲ್‌ನಿಂದ ಪಾವಂಜೆ ಸೇತುವೆಯವರೆಗೆ ಹೆದ್ದಾರಿ ಸಂಪೂರ್ಣ ಕತ್ತಲೆಯಿಂದ ಕೂಡಿದೆ. ರಾಷ್ಟ್ರೀಯ ಹೆದ್ದಾರಿ ನಿರ್ವಾಣದ ಸಂದರ್ಭ ಹೈವಾಸ್ಟ್ ಲೈಟುಗಳ ಸಹಿತ ದಾರಿದೀಪಗಳನ್ನು ಅಳವಡಿಸಲಾಗಿದ್ದರೂ ಕ್ರಮೇಣ ನಿರ್ವಹಣೆ ಕೊರತೆಯಿಂದ ದೀಪಗಳು ಉರಿಯದೆ ಸಮಸ್ಯೆಯಾಗಿದೆ. ಇದರಿಂದಾಗಿ ನಾಗರಿಕರು ರಾತ್ರಿವೇಳೆ ಈ ರಸ್ತೆಯಲ್ಲಿ ಸಂಚರಿಸಲು ಭಯಪಡುವ ಅನಿವಾರ್ಯತೆ ಎದುರಾಗಿದೆ.

ರಾಷ್ಟ್ರೀಯ ಹೆದ್ದಾರಿ ನಿರ್ವಾಣದ ಬಳಿಕ ಹೆಜವಾಡಿಯಲ್ಲಿ ಟೋಲ್‌ಗೇಟ್ ಹಾಕಲಾಗಿದ್ದರೂ ಟೋಲ್ ಪ್ಲಾಜಾದಿಂದ 1 ಕಿ.ಮೀ. ವ್ಯಾಪ್ತಿಯ ದೀಪಗಳನ್ನು ಟೋಲ್ ಗುತ್ತಿಗೆದಾರರು ನಿರ್ವಹಣೆ ಮಾಡುತ್ತಿದ್ದಾರೆ. ಉಳಿದ ವ್ಯಾಪ್ತಿಯ ಹೆದ್ದಾರಿಯ ದೀಪಗಳ ವಿದ್ಯುತ್ ಖರ್ಚು ಯಾರು ನೋಡುತ್ತಾರೆ ಎಂಬ ಪ್ರಶ್ನೆಗೆ ಪೂರಕವಾಗಿ ಈ ಪ್ರದೇಶಗಳನ್ನು ಕತ್ತಲಲ್ಲಿಡಲಾಗಿದೆ ಎನ್ನಲಾಗುತ್ತಿದೆ.

ರಸ್ತೆ ಸಂಪೂರ್ಣ ಕತ್ತಲಿರುವ ಕಾರಣ ನ ವಾಹನಗಳಿಗೆ ಸಮಸ್ಯೆಯಾಗದಿದ್ದರೂ ಪ್ರಖರ ಬೆಳಕಿನ ಕಾರಣ ದ್ವಿಚಕ್ರ ವಾಹನ ಚಾಲಕರಿಗೆ ಸಮಸ್ಯೆಯಾಗಿದೆ. ರಸ್ತೆ ಬದಿಯಲ್ಲಿ ದಟ್ಟವಾಗಿ ಹುಲ್ಲು ಬೆಳೆದಿದ್ದು, ಹೆಬ್ಬಾವುಗಳ ಸಹಿತ ವಿಷ ಜಂತುಗಳ ಕಾಟ ಹೆಚ್ಚಾಗಿದೆ. ಇದರಿಂದಾಗಿ ಪಾದಚಾರಿಗಳು ಆತಂಕದಿಂದಲೇ ನಡೆದಾಡುವಂತಾಗಿದೆ ಎಂಬ ಬಗ್ಗೆ ತೀವ್ರ ಅಸಮಾಧಾನ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

ಚಿರತೆ ಕಾಟ-ಅಪಾಯ ಕಟ್ಟಿಟ್ಟ ಬುತ್ತಿ

ಮೂಲ್ಕಿ ಆಸುಪಾಸು ಪ್ರದೇಶಗಳಲ್ಲಿ ಚಿರತೆಗಳ ಕಾಟ ಹೆಚ್ಚುತ್ತಿದ್ದು ರಾತ್ರಿ ಕತ್ತಲಿನಲ್ಲಿ ರಸ್ತೆಯಲ್ಲಿಯೇ ಚಿರತೆ ಸಂಚರಿಸುತ್ತಿರುವುದು ನಾಗರಿಕರಲ್ಲಿ ಭೀತಿ ತಂದಿದೆ. ದಿನ ಬೆಳಗಾದರೆ ಚಿರತೆಯ ಸುದ್ದಿಯ ಜತೆಗೆ ಸಾಕು ನಾಯಿಗಳು ಕಾಣೆಯಾಗುತ್ತಿರುವುದು ಸುದ್ದಿಗೆ ಪುಷ್ಟಿ ನೀಡಿದೆ. ಬೆಕ್ಕಿನ ಸಂತತಿಗೆ ಸೇರಿದ ಚಿರತೆಗಳು ಆರು ತಿಂಗಳಿಗೆ ಒಮ್ಮೆ ಮರಿ ಹಾಕುವುದು ಕೂಡ ಚಿರತೆಗಳ ಸಂತತಿ ಹೆಚ್ಚಳಕ್ಕೆ ಕಾರಣ ಎನ್ನುವುದು ಸ್ಥಳೀಯರ ಅಭಿಪ್ರಾಯ. ಒಟ್ಟಾರೆ ಬೀದಿ ದೀಪಗಳಿಲ್ಲದ ರಸ್ತೆಯಲ್ಲಿ ಏಕಾಂಗಿಯಾಗಿ ಸಂಚರಿಸುವುದು ಅಪಾಯ ಕಟ್ಟಿಟ್ಟ ಬುತ್ತಿ. ಈ ಬಗ್ಗೆ ಹೆದ್ದಾರಿ ಇಲಾಖೆ ಗಮನ ಹರಿಸಬೇಕು ಎನ್ನುವುದು ನಾಗರಿಕರ ಆಗ್ರಹ.

ಹೆದ್ದಾರಿ ಬದಿ ದಟ್ಟವಾಗಿ ಬೆಳೆದಿರುವ ಪೊದೆ ಹಾಗೂ ಗಿಡಗಂಟಿಗಳು.
ಲಕ್ಷಾಂತರ ಜನರು ಸಂಚರಿಸುವ ರಸ್ತೆಯಲ್ಲಿ ಬೀದಿದೀಪಗಳ ಕೊರತೆಯನ್ನು ನೀಗಿಸಲು ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ ಮತ್ತು ಶಾಸಕ ಉವಾನಾಥ ಕೋಟ್ಯಾನ್ ಹಾಗೂ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ಈಗಾಗಲೇ ಮನವಿ ನೀಡಲಾಗಿದೆ. ಈ ರಸ್ತೆಯಲ್ಲಿ ಚಿರತೆಗಳು ರಾಜಾರೋಷವಾಗಿ ಸಂಚರಿಸುತ್ತಿರುವುದು ಕಂಡುಬಂದಿದ್ದು, ಜನರು ಆತಂಕಿತರಾಗಿದ್ದಾರೆ. ತುರ್ತಾಗಿ ಇಲ್ಲಿನ ಸಮಸ್ಯೆ ಪರಿಹರಿಸಿದಲ್ಲಿ ಜನರ ಆತಂಕ ದೂರ ಮಾಡಿದಂತಾಗುತ್ತದೆ. - ಮನ್ಸೂರ್ ಮೂಲ್ಕಿ, ಗೃಹರಕ್ಷಕ ದಳದ ಮೂಲ್ಕಿ ಘಟಕದ ನಿವೃತ್ತ ಅಧಿಕಾರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ದಾರಿದೀಪಗಳಿದ್ದರೂ ನಿರ್ವಹಣೆ ಕೊರತೆಯಿಂದಾಗಿ ಉರಿಯುತ್ತಿಲ್ಲ. ಚಿರತೆಗಳ ಹಾವಳಿಯಿಂದ ಇಲ್ಲಿನ ಜನರು ಭಯಭೀತರಾಗಿದ್ದಾರೆ. ಇಲ್ಲಿನ ಜನರ ಆತಂಕವನ್ನು ಬಲ್ಲೆ. ಈ ಬಗ್ಗೆ ಸಂಸದರು ಮತ್ತು ಶಾಸಕರ ಗಮನಕ್ಕೆ ತಂದು ಶೀಘ್ರವೇ ದಾರಿದೀಪ ಉರಿಯುವಂತೆ ವಾಡಲಾಗುವುದು. - ಶೈಲೇಶ್ ಕುವಾರ್, ಮೂಲ್ಕಿ ನಗರ ಪಂಚಾಯಿತಿ ಸದಸ್ಯರು