ಮಂಗಳೂರು : ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಇದರ ವತಿಯಿಂದ ಜ.24ರಿಂದ 28ರವರೆಗೆ ನಗರದ ಕರಾವಳಿ ವಸ್ತು ಪ್ರದರ್ಶನ ಮೈದಾನದಿಂದ ನಾರಾಯಣ ಗುರು ವೃತ್ತ, ಮಣ್ಣಗುಡ್ಡ ಗುರ್ಜಿ ವೃತ್ತ, ಕೆನರಾ ಉರ್ವದವರೆಗೆ ಪ್ರತೀ ದಿನ ಸಾಯಂಕಾಲ 4ರಿಂದ
ರಾತ್ರಿ10.30ರವರೆಗೆ (ಶುಕ್ರವಾರ ಶನಿವಾರ ಮತ್ತು ಭಾನುವಾರ ಮಧ್ಯಾಹ್ನ 2ರಿಂದ ರಾತ್ರಿ 10.30ರವರೆಗೆ ) ಮಂಗಳೂರು ಸ್ಟ್ರೀಟ್ ಫುಡ್ ಫಿಯೆಸ್ಟಾ ನಡೆಯಲಿದೆ.
ಕಳೆದ ವರ್ಷ ನಡೆದ ಮಂಗಳೂರು ಸ್ಟ್ರೀಟ್ ಫುಡ್ ಫಿಯೆಸ್ಟಾ ಲಕ್ಷಾಂತರ ಜನರನ್ನು ಆಕರ್ಷಿಸಿದ್ದು, ಈ ವರ್ಷ ಸೀಸನ್-2 ನಡೆಸಲು ೆ ಪ್ರೇರಣೆಯಾಗಿದೆ. ಮಳಿಗೆ ನಿರ್ಮಾಣ ಸಹಿತ ಎಲ್ಲ ತಯಾರಿ ಪೂರ್ಣಗೊಂಡಿದ್ದು 160 ಸಂಖ್ಯೆಯ ವಿಶೇಷ ಆಹಾರ ಮಳಿಗೆಗಳನ್ನು
ಅಂತಿಮಗೊಳಿಸಲಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಡಿ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸ್ಟ್ರೀಟ್ ಫುಡ್ ಫಿಯೆಸ್ಟಾದಲ್ಲಿ ತುಳುನಾಡಿನ ಸಾಂಪ್ರದಾಯಿಕ ಆಹಾರ ಶೈಲಿ ಮಾತ್ರವಲ್ಲದೇ, ಉತ್ತರ ಕರ್ನಾಟಕ, ಗುಜರಾತಿ,
ಆಂಧ್ರ, ಪಂಜಾಬಿ ಸಹಿತ ದಕ್ಷಿಣ ಭಾರತೀಯ, ಉತ್ತರ ಭಾರತೀಯ, ಸಸ್ಯಾಹಾರಿ, ಮಾಂಸಾಹಾರಿ ಆಹಾರ ಮಳಿಗೆಗಳು ಇರಲಿವೆ.
ಈ ಬಾರಿ ಡಿಜಿಟಲ್ ವಹಿವಾಟಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಗ್ರಾಹಕರು ಹಾಗೂ ಮಳಿಗೆದಾರರ ನಡುವೆ ನಗದು ರೂಪದ ವ್ಯವಹಾರಕ್ಕಿಂತ ಎಲ್ಲ ಮಳಿಗೆದಾರರಿಗೂ ನೀಡಲಾಗಿರುವ ಪ್ರತ್ಯೇಕ ಕ್ಯುಆರ್ ಕೋಡ್ ಸ್ಕಾೃನ್ ಬಳಸಲು ಹೆಚ್ಚಿನ ಉತ್ತೇಜನ
ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
*ಪಾರ್ಕಿಂಗ್ ವ್ಯವಸ್ಥೆ
ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮಬದ್ಧವಾದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಕೊಟ್ಟಾರ ಚೌಕಿ ಕಡೆಯಿಂದ ಬರುವ ವಾಹನಗಳಿಗೆ ಉರ್ವ ಚರ್ಚ್‌ಆವರಣ, ಉರ್ವ ಆಟದ ಮೈದಾನ ಹಾಗೂ ಲೇಡಿಹಿಲ್ ವಿಕ್ಟೋರಿಯಾ ಪಿಯು ಕಾಲೇಜು ಆವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಲಾಲ್‌ಬಾಗ್ ಕಡೆಯಿಂದ ಬರುವ ವಾಹನಗಳಿಗೆ ಕೆನರಾ ಉರ್ವ ಶಾಲೆಯ ಆವರಣ ಮತ್ತು ಕರಾವಳಿ ಉತ್ಸವ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಕಿಡ್ ರೆನ್ :
ಮಕ್ಕಳ ಆಟದ ರೆನ್‌ಗೆ ವಿಶೇಷ ಪ್ರಾಧಾನ್ಯತೆ ನೀಡಲಾಗಿದೆ. ಉತ್ಸವದ ಸಮಯದಲ್ಲಿ ಹಲವು ವೇದಿಕೆಗಳಲ್ಲಿ ಏಕಕಾಲಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರತಿಭಾನ್ವಿತರಿಗಾಗಿ ನಮ್ಮ ವೇದಿಕೆ- ನಿಮ್ಮ ಪ್ರತಿಭೆ, ಸೆಲ್ಫಿ ಕೌಂಟರ್, ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವವನ್ನು ವೇದಿಕೆಗಳಲ್ಲಿ ಆಚರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಶಾಸಕ ಕಾಮತ್ ತಿಳಿಸಿದರು.
ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವಾಧ್ಯಕ್ಷ ಗಿರಿಧರ ಶೆಟ್ಟಿ, ಅಧ್ಯಕ್ಷ ದಿವಾಕರ ಪಾಂಡೇಶ್ವರ, ಯತೀಶ್ ಬೈಕಂಪಾಡಿ, ಡಾ.ರಾಘವೇಂದ್ರ ಹೊಳ್ಳ ,ಉದಯ ಪೂಜಾರಿ ಉಪಸ್ಥಿತರಿದ್ದರು.