ವಿಜಯವಾಣಿ ಸುದ್ದಿಜಾಲ ಉಡುಪಿ
ಮಣಿಪಾಲದ ಅನಂತನಗರದಲ್ಲಿ ಬೀದಿ ನಾಯಿಗಳ ಕಾಟ ವಿಪರೀತವಾಗಿದ್ದು, ಮಕ್ಕಳು, ವಯಸ್ಕರು ಸೇರಿದಂತೆ ಇಲ್ಲಿ ನೆಲೆಸಿರುವ ಜನರಿಗೆ ದಿನವೂ ಭಯದ ವಾತಾವರಣ ನಿರ್ಮಿಸಿದೆ.
ಅಲ್ಲಿನ ಒಂದನೇ ಹಂತದ ಮೊದಲನೇ ಕ್ರಾಸ್ನಲ್ಲಿ 4-5 ಅಪಾರ್ಟ್ಮೆಂಟ್ಗಳು ಹಾಗೂ ಪುಟಾಣಿ ಮಕ್ಕಳು ನೂರಾರು ಸಂಖ್ಯೆಯಲ್ಲಿರುವ ಲಿಟಲ್ ಮಿಲೇನಿಯಂ ಶಾಲೆಯೂ ಇದ್ದು, ಆಗಾಗ ಬೀದಿ ನಾಯಿಗಳು ಜನರನ್ನು ಅಟ್ಟಿಸಿಕೊಂಡು ಬರುತ್ತವೆ.
ಈ ಪ್ರದೇಶದಲ್ಲಿ ಹಲವು ಜನ ವಸತಿ ಪ್ರದೇಶವಿದ್ದು, ಜನ ಸಂಚಾರವೂ ಹೆಚ್ಚಿದೆ. ಈ ಮಾರ್ಗದ ರಸ್ತೆಯಲ್ಲೇ ಬೀಡುಬಿಟ್ಟಿರುವ ಅನೇಕ ನಾಯಿಗಳು, ಜನರ ಮೇಲೆ ಹಾಗೂ ಮಕ್ಕಳನ್ನು ಶಾಲೆಗೆ ಬಿಡಲು ಬೈಕ್ ಮೇಲೆ ಬರುವ ಪಾಲಕರ ಮೇಲೆ ಆಕ್ರಮಣ ಮಾಡುತ್ತಿವೆ. ಜಿಲ್ಲಾಡಳಿತ ಬೀದಿ ನಾಯಿಗಳ ಉಪಟಳ ನಿಯಂತ್ರಿಸಬೇಕು ಎಂದು ಇಲ್ಲಿನ ನಿವಾಸಿಗರು ವಿಜಯವಾಣಿ ಮೂಲಕ ಒತ್ತಾಯಿಸಿದ್ದಾರೆ.
ಮಣಿಪಾಲ ಸುತ್ತಮುತ್ತಲಿನ ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನ ನೂರಾರು ಮಕ್ಕಳು ಅನಂತನಗರದಲ್ಲಿರುವ ಶಾಲೆಯಲ್ಲಿ ಓದುತ್ತಿದ್ದು, ಬೀದಿ ನಾಯಿಗಳು ದಿನವೂ ಕಾಡುತ್ತಿವೆ. ಮಕ್ಕಳ ಮೇಲೆ ಬೀದಿ ನಾಯಿಗಳು ಮಾರಣಾಂತಿಕ ಆಕ್ರಮಣ ಮಾಡುತ್ತಿರುವುದುನ್ನು ರಾಜ್ಯದಲ್ಲಿ ದಿನವೂ ನೋಡುತ್ತಿದ್ದೇವೆ. ಇಲ್ಲಿಯೂ ಸಹ ಯಾವುದೇ ಅನಾಹುತ ಆಗುವ ಮೊದಲು ನಗರಸಭೆಯವರು ಬೀದಿ ನಾಯಿಗಳನ್ನು ಹಿಡಿದು ಬೇರೆಡೆ ಸಾಗಿಸಲು ಕ್ರಮ ಕೈಗೊಳ್ಳಬೇಕು. | ಬಸವರಾಜ ಕೆ. ಮಣಿಪಾಲ ನಿವಾಸಿ