ಜಿಲ್ಲೆ

ಬೀದಿನಾಯಿ ಒಯ್ಯದಿದ್ದರೆ ನಮ್ಮನ್ನೇ ಕಾಡಿಗೆ ಬಿಟ್ಟು ಬನ್ನಿ,  ಹಾವಳಿ ನಿಯಂತ್ರಣ ಸಭೆಯಲ್ಲಿ ಮಹಾನಗರ ಪಾಲಿಕೆ ವಿರುದ್ಧ ಸಾರ್ವಜನಿಕರ ಆಕ್ರೋಶ

ಹುಬ್ಬಳ್ಳಿ: ರಾತ್ರಿಯಾದರೆ ಬೀದಿಯಲ್ಲಿ ಜನ ಯಾರೂ ಓಡಾಡುವಂತಿಲ್ಲ, ದಾರಿಹೋಕರು, ಬೈಕ್ ಸವಾರರನ್ನು ದುರುಗುಟ್ಟಿ ನೋಡಿ ಬೆನ್ನು ಹತ್ತುತ್ತವೆ, ಅವುಗಳ ಕೈಗೆ ಸಿಕ್ಕರೆ ಕಚ್ಚಿಯೂ ಬಿಡುತ್ತವೆ, ಮಕ್ಕಳು ಹೊರಗೆ ಬರದಂತೆ ಮಾಡಿವೆ. ರಾತ್ರಿ ಹಗಲು ಎನ್ನದೆ ಬೊಗಳುತ್ತ ನಿದ್ದೆ ಮಾಡಲೂ ಬಿಡುವುದಿಲ್ಲ, ಇವುಗಳನ್ನು ಹಿಡಿದು ಕಾಡಿಗೆ ಬಿಡಿ, ಆಗದ್ದರೆ ನಮ್ಮನ್ನಾದರೂ ಕಾಡಿಗೆ ಬಿಟ್ಟು ಬನ್ನಿ…

ಅವಳಿನಗರದಲ್ಲಿ ಬೀದಿ ನಾಯಿಗಳ ಹಾವಳಿ ಬಗ್ಗೆ ಸಾರ್ವಜನಿಕರು ವ್ಯಕ್ತಪಡಿಸಿದ ಆಕ್ರೋಶದ ಮಾತುಗಳು ಇವು.

ಇಲ್ಲಿಯ ಸವಾಯಿ ಗಂಧರ್ವ ಹಾಲ್ ನಲ್ಲಿ ಶನಿವಾರ ಮಹಾನಗರ ಪಾಲಿಕೆಯಿಂದ ಏರ್ಪಡಿಸಿದ್ದ ಸಾರ್ವಜನಿಕ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಮಾತನಾಡಿದ ಅನೇಕರು, ಬೀದಿ ನಾಯಿ, ಬಿಡಾಡಿ ದನಗಳಿಂದ ಮುಕ್ತಿ ನೀಡಬೇಕೆಂದು ಬೇಡಿಕೊಂಡರು.

ಪ್ರಾಣಿ ದಯಾ ಸಂಘದ ಅನೇಕರು ಮಾತನಾಡಿ, ನಾಯಿಗಳು ಕಚ್ಚಿದ ಹಲವು ಪ್ರಕರಣಗಳು ನಡೆದಿವೆ ನಿಜ. ಆದರೆ, ಬೀದಿನಾಯಿ ಸಮಸ್ಯೆಗೆ ಕಾನೂನಿನಡಿ ಪರಿಹಾರ ಕಂಡುಕೊಳ್ಳಬೇಕು. ನಗರ ಪ್ರದೇಶದಲ್ಲಿ ಪ್ರಾಣಿಗಳನ್ನು ನಿರ್ವಹಣೆ ಮಾಡಲು ಅನೇಕ ಕಟ್ಟು ಪಾಡು, ಕಾನೂನು ಇವೆ. ಎಬಿಸಿ (ಎನಿಮಲ್ ಬರ್ತ್ ಕಂಟ್ರೋಲ್) ನಿಯಮದ ಪ್ರಕಾರ ನಾಯಿಗಳಿಗೆ ವ್ಯಾಕ್ಸಿನ್ ಹಾಕಬೇಕು, ಬಿಡಾಡಿ ದನಗಳನ್ನು ಹಿಡಿಯುವ ಮೊದಲು ಪಾಲಿಕೆಯಿಂದ ಜಾಗೃತಿ ಮೂಡಿಸಬೇಕು. ಕಾಲಾವಕಾಶ ನೀಡಿ ನಂತರದಲ್ಲಿ ಅವುಗಳನ್ನು ಬೇರೆ ಕಡೆ ಸಾಗಿಸಬೇಕು ಎಂದರು.

ಪಾಲಿಕೆ ಆರೋಗ್ಯಾಧಿಕಾರಿ ಡಾ. ಶ್ರೀಧರ ದಂಡಪ್ಪನವರ ಮಾತನಾಡಿ, ನಾಯಿಗಳ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆಗೆ ಏಜೆನ್ಸಿ ನೇಮಿಸಲಾಗಿದೆ. ಸರ್ಕಾರ ನಮೂದಿಸಿದ ದರಕ್ಕಿಂತ ಕಡಿಮೆ ದರಕ್ಕೆ ಟೆಂಡರ್ ಮೂಲಕ ಏಜೆನ್ಸಿ ನಿಗದಿ ಪಡಿಸಲಾಗಿದೆ. ನಾಯಿ ದತ್ತು ತೆಗೆದುಕೊಳ್ಳುವವರಿಗೂ ನೀಡಲಾಗುತ್ತಿದೆ ಎಂದರು.

ಮುಖ್ಯ ಪಶು ವೈದ್ಯಾಧಿಕಾರಿ ಡಾ. ಎ.ಜಿ. ಕುಲಕರ್ಣಿ ಮಾತನಾಡಿ, ಅವಳಿನಗರದಲ್ಲಿ ಸುಮಾರು 30 ಸಾವಿರ ನಾಯಿಗಳು ಇವೆ. ಸಂತಾನ ಶಕ್ತಿ ಹರಣ ಶಸಚಿಕಿತ್ಸೆಗೆ ಪ್ರತಿ ತಿಂಗಳು 6 ರಿಂದ 7 ಲಕ್ಷ ಖರ್ಚು ಆಗುತ್ತಿದೆ ಎಂದರು.

ಪ್ರಸ್ತಾವನೆ ಸಲ್ಲಿಸಿ: ಸದಸ್ಯರಾದ ನಜೀರಅಹ್ಮದ ಹೊನ್ಯಾಳ, ಇಕ್ಬಾಲ್ ನವಲೂರ, ಉಮಾ ಮುಕುಂದ, ಸುವರ್ಣ ಕಲ್ಲಕುಂಟ್ಲ ಇತರರು ಮಾತನಾಡಿ, ಬೀದಿನಾಯಿ ಹಾವಳಿ ತಡೆಯಬೇಕು, ಸಾರ್ವಜನಿಕರಿಂದ ನಿತ್ಯ ದೂರುಗಳು ಬರುತ್ತಿವೆ. ಅಗತ್ಯ ಇರುವ ಕಡೆ ಡಾಗ್ ಝೊನ್ ಮಾಡಬೇಕು ಎಂದು ಆಗ್ರಹಿಸಿದರು.

ಹೈದ್ರಾಬಾದ್ ನಲ್ಲಿ ಡಾಗ್ ಝೊನ್ ಮಾಡಿ ಒಂದೆಡೆ ಬಿಟ್ಟಿದ್ದಾರೆ. ಅದೇ ಮಾದರಿಯಲ್ಲಿ ಮಾಡಬೇಕು ಎಂದು ಒತ್ತಾಯಿಸಿದರು. ಧಾರವಾಡ ತಾಲೂಕಿನ ಶಿವಳ್ಳಿಯಲ್ಲಿ ಪಾಲಿಕೆಯ 67 ಎಕರೆ ಜಾಗ ಇದೆ. ಅಲ್ಲಿ ಡಾಗ್ ಝೊನ್ ಮಾಡಲು ಡಿಪಿಆರ್ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸದಸ್ಯರು ಸಲಹೆ ನೀಡಿದರು.

ಎಬಿಸಿ ಸಂಪೂರ್ಣ ವಿಫಲ:
ಪ್ರಾಣಿಗಳ ಸಮಗ್ರ ಮಾಹಿತಿ ಪಡೆದ ಪಾಲಿಕೆ ವಿರೋಧ ಪಕ್ಷದ ನಾಯಕ ಇಮ್ರಾನ್ ಯಲಿಗಾರ, ಪ್ರತಿ ತಿಂಗಳು ಸುಮಾರು 500 ನಾಯಿಗಳಿಗೆ ಸಂತಾನ ಶಕ್ತಿ ಹರಣ ಮಾಡಿದರೆ ಇಷ್ಟೊತ್ತಿಗೆ ಪೂರ್ಣಗೊಳ್ಳಬೇಕಿತ್ತು. ಆಗಿಲ್ಲವೆಂದರೆ ಈ ಯೋಜನೆ ಸಂಪೂರ್ಣ ವಿಫಲವಾಗಿದೆ. ನಾಯಿಯೊಂದಕ್ಕೆ 1650 ರೂ. ಖರ್ಚು ಮಾಡಲಾಗುತ್ತಿದೆ. ಇದರಲ್ಲಿ ಅವ್ಯವಹಾರ ಆಗುತ್ತಿದೆ ಎಂಬ ಸಂಶಯವಿದೆ ಎಂದು ದೂರಿದರು.

ಬದಲಾಗಿ ಅವಳಿನಗರದ ವಿವಿಧ ಕಡೆಗಳಲ್ಲಿ ಡಾಗ್ ಝೊನ್ ಮಾಡಿ ಅಲ್ಲಿ ಅವುಗಳಿಗೆ ವಾಸಕ್ಕೆ ವ್ಯವಸ್ಥೆ ಮಾಡಬೇಕು, ಆಹಾರವನ್ನು ಅಲ್ಲಿಗೆ ಪೂರೈಕೆ ಮಾಡಬೇಕು ಎಂದು ಸಲಹೆ ನೀಡಿದರು.

ಶೀಘ್ರ ಪರಿಹಾರದ ಭರವಸೆ
ಬೀದಿನಾಯಿ, ಜಾನುವಾರುಗಳ ನಿರ್ವಹಣೆಯಲ್ಲಿ ಈವರೆಗೆ ಪಾಲಿಕೆಯಿಂದ ತಪ್ಪಾಗಿರಬಹುದು. ಆದರೆ, ಮುಂದಿನ ದಿನಗಳಲ್ಲಿ ಡಾಗ್ ಕ್ಯಾಚರ್ ಕರೆಸಿ, ನಾಲ್ಕೆದು ಕಡೆ ಎಬಿಸಿ ಕೇಂದ್ರಗಳನ್ನು ಮಾಡಿ ಆದಷ್ಟು ಬೇಗ ಬೀದಿನಾಯಿ ಹಾವಳಿ ತಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ತಿಳಿಸಿದರು.

ಮಾಲೀಕರು, ದನಗಳನ್ನು ಒಂದು ತಿಂಗಳೊಳಗೆ ರಸ್ತೆಗಳಿಂದ ತೆರವು ಮಾಡಬೇಕು. ಇಲ್ಲದಿದ್ದರೆ ಹಿಡಿದು ಗೋಶಾಲೆಯಲ್ಲಿ ಇಡುತ್ತೇವೆ. ನಂತರ ಬಂದರೆ ಯಾವುದೇ ಕಾರಣಕ್ಕೂ ವಾಪಸ್ ಕೊಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಬೀದಿನಾಯಿ ಹಿಡಿಯಲು ಯಾರೂ ಸಿಗುತ್ತಿಲ್ಲ. ಆಸ್ಸಾಂನಿಂದ ಡಾಗ್ ಕ್ಯಾಚರ್ ಕರೆಸಬೇಕಾಗಿದೆ. ಡಾಗ್ ಝೊನ್ ಮಾಡಿ ಒಂದು ಕಡೆ ನಾಯಿಗಳನ್ನು ಬಿಡಲು ಕಾನೂನಿನಲ್ಲಿ ಅವಕಾಶ ಇಲ್ಲ. ಹಾಗಾಗಿ ಎಬಿಸಿ ಸೆಂಟರ್ ಗಳನ್ನೇ ಜಾಸ್ತಿ ಮಾಡಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಕಾರವಾರ ರಸ್ತೆ ಡಂಪಿಂಗ್ ಯಾರ್ಡ್ ಕಾಂಪೌಂಡ್ ಕಟ್ಟಿ ಅಲ್ಲಿಂದ ನಾಯಿಗಳು ಹೊರಗೆ ಹೋಗದಂತೆ ತಡೆಯಲಾಗುವುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಮೇಯರ್ ಜ್ಯೋತಿ ಪಾಟೀಲ ಮಾತನಾಡಿ, ಹಳೇಹುಬ್ಬಳ್ಳಿ ಸಿಮ್ಲಾನಗರದಲ್ಲಿ ಬಾಲಕಿ ಮೇಲೆ ಬೀದಿನಾಯಿ ದಾಳಿ ಆದ ನಂತರ ಜನರಲ್ಲಿ ಮತ್ತಷ್ಟು ಭಯ ಆವರಿಸಿದೆ. ಈ ದಿಸೆಯಲ್ಲಿ ಮಹಾನಗರ ಪಾಲಿಕೆ ಮೂರು ತಿಂಗಳಲ್ಲಿ ಸೂಕ್ತ ಪರಿಹಾರ ಕಂಡುಕೊಳ್ಳಲಿದೆ ಎಂದರು.

ಉಪಮೇಯರ್ ಸಂತೋಷ ಚವ್ಹಾಣ, ಸ್ಥಾಯಿ ಸಮಿತಿಯ ರಾಜಣ್ಣ ಕೊರವಿ, ಶಿವು ಹಿರೇಮಠ, ವಿಜಯಾನಂದ ಶೆಟ್ಟಿ, ಇತರರು ಇದ್ದರು.