ಹುಬ್ಬಳ್ಳಿ; ಯಾರೇ ಕೂಗಾಡಲಿ, ಊರೇ ಹೋರಾಡಲಿ ನಿನ ನೆಮ್ಮದಿಗೆ ಭಂಗವಿಲ್ಲ…. ಎಂಬ ಹಳೆಯ ಹಾಡು ಯಾರಿಗೆ ನೆನಪಿಲ್ಲ ಹೇಳಿ? ಈಗ ಇದೇ ಹಾಡನ್ನು ಎಮ್ಮೆ, ಆಕಳು, ಎತ್ತು, ಹೋರಿ ಎಲ್ಲ ಜಾನುವಾರುಗಳು ನಗರದಲ್ಲಿ ಹೇಳಿಕೊಂಡು ತಿರುಗಾಡುತ್ತಿವೆ. ನಾವು ಏನೇ ಮಾಡಿದರೂ ನಮ್ಮ ನೆಮ್ಮದಿಗೆ ಭಂಗವಿಲ್ಲ ಎಂದು ರಸ್ತೆಯಲ್ಲಿಯೇ ಠಿಕಾಣಿ ಹೂಡುತ್ತಿವೆ.
ಸಾಲದ್ದಕ್ಕೆ ರಸ್ತೆಯಲ್ಲೇ ಮಲಗುತ್ತವೆ, ಎದ್ದು ಅಲ್ಲೇ ಎಲ್ಲವನ್ನೂ ಮುಗಿಸಿ ಮೈಕೊಡವಿಕೊಂಡು ಸಂಚರಿಸುತ್ತವೆ. ಅಲ್ಲಿಇಲ್ಲಿ ಮೇಯ್ದು ಮತ್ತೆ ರಸ್ತೆಯನ್ನೇ ಮನೆಯನ್ನಾಗಿ ಮಾಡಿಕೊಂಡಿವೆ. ಕಳೆದ ಹಲವು ವರ್ಷಗಳಿಂದ ಇದು ನಡೆದುಕೊಂಡು ಬಂದಿದೆ. ಇದನ್ನು ತಡೆಯುವ ಗೋಜಿಗೆ ಯಾರೂ ಹೋಗಿಲ್ಲ.
ಇದರಲ್ಲಿ ಬಿಡಾಡಿ ದನಗಳು ಮಾತ್ರವಲ್ಲ, ಕೆಲವು ಮಾಲೀಕರು ಸಹ ಜಾನುವಾರುಗಳನ್ನು ಹೊರಗೆ ಬಿಡುತ್ತಿದ್ದಾರೆ. ಎಲ್ಲ ದನಕರುಗಳು ಸೇರಿಕೊಂಡು ರಸ್ತೆ, ಪಾರ್ಕ್ ಗಳನ್ನೇ ಆಶ್ರಯ ತಾಣ ಮಾಡಿಕೊಂಡಿವೆ. ಅಲ್ಲಲ್ಲಿ ಹಿಂಡು ಹಿಂಡಾಗಿ ಕಂಡು ಬರುವ ಜಾನುವಾರುಗಳ ದೃಶ್ಯಗಳು ಈ ಮಾತನ್ನು ದೃಢಪಡಿಸುತ್ತವೆ.
ಮಹಾನಗರ ಪಾಲಿಕೆಯಾಗಲಿ ಅಥವಾ ಬೇರೆ ಯಾವುದೇ ಇಲಾಖೆಯಾಗಲಿ ಬಿಡಾಡಿ ದನಗಳನ್ನು ನಿಯಂತ್ರಿಸುವ ಗಂಭೀರ ಪ್ರಯತ್ನ ಮಾಡಿಲ್ಲ.
ಅನೇಕ ಬಾರಿ ರಸ್ತೆ ಮಧ್ಯದಲ್ಲಿ ಮಲಗಿಕೊಂಡು ವಾಹನಗಳು ಹೋಗದಂತೆ ತಡೆ ಹಿಡಿಯುತ್ತವೆ. ರಸ್ತೆಯಲ್ಲಿ ವಾಹನ ಸವಾರರು, ಪಾದಚಾರಿಗಳಿಗೆ ಎದುರಾಗುವ ದನಕರುಗಳಿಂದ ಹಲವು ಬಾರಿ ಅಪಘಾತಗಳಾಗಿವೆ.
ರಸ್ತೆಯಲ್ಲಿಯೇ ಇವು ಬಿಡಾರ ಹೂಡುವುದರಿಂದ ಪಾದಚಾರಿಗಳು, ವಾಹನ ಸವಾರರು ಜತೆಗೊಂದು ಬಡಿಗೆ ಹಿಡಿದುಕೊಂಡು ಬರಬೇಕು. ಇವುಗಳನ್ನು ಬೆದರಿಸಿ ಕಳುಹಿಸಿ ಆನಂತರ ಮುಂದೆ ಸಾಗುವ ಪ್ರಸಂಗ ಎದುರಾಗುತ್ತಿವೆ.
ಬಿಡಾಡಿ ದನಗಳು ಒಂದೆಡೆಯಾದರೆ ಅನೇಕ ಕಡೆಗಳಲ್ಲಿ ಸಾಕಿದ ಜಾನುವಾರುಗಳು ರಸ್ತೆಗೆ ಬರುತ್ತಿವೆ. ಹಲವು ಆಕಳು, ಕರುಗಳ ಕೊರಳಲ್ಲಿ ಹಗ್ಗ, ಗಂಟೆ ಇವೆ. ಆದರೂ ಅವುಗಳನ್ನು ರಸ್ತೆಯಲ್ಲಿ ಬಿಟ್ಟಿರುವುದು ಏಕೆ ಎಂಬ ಪ್ರಶ್ನೆ ಸಾಮಾನ್ಯವಾಗಿ ಕಾಡುತ್ತಿದೆ.
ಅನೇಕ ಸಂದರ್ಭದಲ್ಲಿ ದೊಡ್ಡ ವಾಹನಗಳು ಬಡಿದು ಜಾನುವಾರುಗಳಿಗೂ ತೊಂದರೆಯಾಗಿದೆ. ಅನೇಕರು ಕೈಕಾಲು ಮುರಿದುಕೊಂಡಿದ್ದಾರೆ. ಜಾನುವಾರುಗಳು ರಸ್ತೆಗೆ ಬರುವುದರಿಂದ ಎಲ್ಲರೂ ತೊಂದರೆ ಅನುಭವಿಸಬೇಕಾಗಿದೆ.
ಸಂಚಾರಕ್ಕೆ ತೊಂದರೆಯಾದಾಗ ನಿತ್ಯ ಒಂದಿಲ್ಲೊಂದು ಕಡೆ ಜಾನುವಾರುಗಳನ್ನು ಎಬ್ಬಿಸಿ ರಸ್ತೆ ತೆರವು ಗೊಳಿಸುವುದೇ ಅನೇಕ ಪೊಲೀಸರಿಗೆ ಕೆಲಸವಾಗಿದೆ ಬಿಟ್ಟಿದೆ.
ಪಿಂಜರಾಪೋಳ:
ಬಿಡಾಡಿ ಹಾಗೂ ಬಿಟ್ಟು ಹೋದ ದನಗಳನ್ನು ಸಾಕಲೆಂದೆ ನಗರದಲ್ಲಿ ಪಿಂಜರಾಪೋಳ ನಿರ್ಮಿಸಲಾಗಿದೆ. ಅಲ್ಲಿ ಅನೇಕ ಜಾನುವಾರುಗಳಿಗೆ ಆಶ್ರಯ ಕಲ್ಪಿಸಲಾಗಿದೆ. ಆದರೆ, ನಗರದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜಾನುವಾರುಗಳು ಸಂಚಾರಕ್ಕೆ ತೊಂದರೆ ಮಾಡುತ್ತ ಓಡಾಡುತ್ತಿದ್ದರೂ ಅವುಗಳನ್ನು ಅಲ್ಲಿಗೆ ಸಾಗಿಸುವ ಕೆಲಸ ಆಗುತ್ತಿಲ್ಲ.
ಆಶ್ರಯ ತಾಣಗಳಿಗೆ ಬಿಟ್ಟರೆ ಅವುಗಳಿಗೂ ಉತ್ತಮ ಆರೈಕೆ ಸಿಗಲಿದೆ. ಮಹಾನಗರ ಪಾಲಿಕೆ ಬಿಡಾಡಿ ಜಾನುವಾರುಗಳಿಗೆ ಏನಾದರೂ ವ್ಯವಸ್ಥೆಯನ್ನಾದರೂ ಮಾಡಬೇಕು. ಇದರಿಂದ ದನಕರುಗಳು ಸೇರಿ ಎಲ್ಲರಿಗೂ ನೆಮ್ಮದಿ ಸಿಗಲಿದೆ ಎಂಬುದು ಸಾರ್ವಜನಿಕರ ಆಗ್ರಹ.