ಜಿಲ್ಲೆ

ಬೇಲೂರಿನಲ್ಲಿ ಅಡ್ಡಾದಿಡ್ಡಿ ಪಾರ್ಕಿಂಗ್ ಕಿರಿಕಿರಿ

ವಸಂತಕುಮಾರ್ ಬಿ

ಬಿ.ಎಲ್.ಲಕ್ಷ್ಮಣ್ ಬೇಲೂರು

ವಿಶ್ವ ಪಾರಂಪಾರಿಕ ಪಟ್ಟಿಗೆ ಸೇರಿದ ಪ್ರವಾಸಿ ತಾಣವಾದ ಬೇಲೂರು ಪಟ್ಟಣದ ಬಸ್ ನಿಲ್ದಾಣದ ಮುಂಭಾಗದ ಮೂಡಿಗೆರೆ ರಸ್ತೆಯ ಅಪೊಲೋ ಫಾರ್ಮಸಿ ಲೈನ್‌ನಲ್ಲಿ ಮೂರು, ನಾಲ್ಕು ಸಾಲಿನಲ್ಲಿ ನಿಲ್ಲಿಸುವ ಬೈಕ್‌ಗಳಿಂದಾಗಿ ವಾಹನ ದಟ್ಟಣೆ ಉಂಟಾಗುತ್ತಿದ್ದು, ಇಲ್ಲಿ ಸಂಚರಿಸಲು ಸರ್ಕಸ್ ಮಾಡುವಂತಾಗಿದೆ.

ಬೇಲೂರು ಪಟ್ಟಣದ ಮುಖ್ಯರಸ್ತೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 234 ರಲ್ಲಿ ಕಿರಿದಾದ ಮುಖ್ಯರಸ್ತೆ ಮೂಲಕವೇ ಸುಂದರ ಶಿಲ್ಪಕಲೆಗಳ ವೀಕ್ಷಣೆಗಾಗಿ ಆಗಮಿಸುವ ದೇಶ, ವಿದೇಶಗಳ ಪ್ರವಾಸಿಗರು ಸೇರಿದಂತೆ ಸ್ಥಳೀಯರು ಸಹ ಇಲ್ಲಿನ ವಾಹನ ದಟ್ಟಣೆಯಿಂದ ಕಿರಿಕಿರಿ ಅನುಭವಿಸುವಂತಾಗಿದೆ.
ಮೂಡಿಗೆರೆ ಮುಖ್ಯರಸ್ತೆಯ ನಿಲ್ದಾಣಕ್ಕೆ ಹೊಂದಿಕೊಂಡಂತೆ ಒಂದು ಬದಿಯಲ್ಲಿ ಆಟೋ ನಿಲ್ದಾಣ ಹಾಗೂ ಬಸ್ ನಿಲ್ದಾಣ ಮುಂಭಾಗದ ಅಪೊಲೋ ಫಾರ್ಮಸಿ ಲೈನ್‌ನ ಮತ್ತೊಂದು ರಸ್ತೆ ಬದಿಯಲ್ಲಿ ಮನಬಂದಂತೆ ಮೂರು, ನಾಲ್ಕು ಸಾಲುಗಳಲ್ಲಿ ಅಡ್ಡಾದಿಡ್ಡಿಯಾಗಿ ಬೈಕ್‌ಗಳನ್ನು ನಿಲ್ಲಿಸುವುದು ಸಾಮಾನ್ಯವಾಗಿದೆ. ಇದರಿಂದ ಮುಖ್ಯ ರಸ್ತೆಯಲ್ಲಿ ಓಡಾಡುವ ವಾಹನಗಳ ಸವಾರರು ಪರದಾಡುವ ಸ್ಥಿತಿಯಿದೆ.

ಈ ರಸ್ತೆ ಮೂಲಕವೇ ಎರಡು ಕಡೆಗೆ ವಾಹನಗಳು ಸಂಚರಿಸಬೇಕಿದೆ. ಸೋಮವಾರದ ಸಂತೆ ದಿನವಂತೂ ಈ ರಸ್ತೆಯಲ್ಲಿ ವಾಹನಗಳಿರಲಿ ಸಾರ್ವಜನಿಕರು, ವಿದ್ಯಾರ್ಥಿಗಳು ಒಂದು ಬದಿಯಿಂದ ಮತ್ತೊಂದು ಬದಿಗೆ ರಸ್ತೆ ದಾಟಬೇಕಾದರೆ ಜೀವ ಕೈಯಲ್ಲಿ ಹಿಡಿದೇ ಸಾಗಬೇಕಿದೆ. ಧರ್ಮಸ್ಥಳ, ಸುಬ್ರಹ್ಮಣ್ಯ, ಉಡುಪಿ, ಕುಂದಾಪುರ, ಮಂಗಳೂರು ಕಡೆಗೆ ಸಂಚರಿಸುವ ಎಲ್ಲ ವಾಹನಗಳು ಇದೇ ರಸ್ತೆಯಲ್ಲಿ ಬೇಲೂರು ಮಾರ್ಗವಾಗಿ ಸಂಚರಿಸುತ್ತವೆ. ಜತೆಗೆ ಪ್ರತಿನಿತ್ಯ ಸಾಕಷ್ಟು ವಾಹನಗಳು ಸಂಚರಿಸುವುದರಿಂದ ವಾಹನಗಳ ದಟ್ಟಣೆ ಉಂಟಾಗುತ್ತಿದೆ. ಇದನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಇದರೊಂದಿಗೆ ಗ್ರಾಮೀಣ ಭಾಗದಿಂದ ಪಟ್ಟಣಕ್ಕೆ ಬರುವವರು, ಬೇರೆ ಊರುಗಳಲ್ಲಿ ನೌಕರಿಗೆ ತೆರಳುವ ಸಾಕಷ್ಟು ಜನರು ತಮ್ಮ ಬೈಕ್‌ಗಳನ್ನು ಅಪೊಲೋ ಫಾರ್ಮಸಿ ಲೈನ್‌ನ ರಸ್ತೆಯಲ್ಲೆ ಪಾರ್ಕ್ ಮಾಡಿ ಹೋಗುವುದರಿಂದ ಮತ್ತಷ್ಟು ವಾಹನ ದಟ್ಟಣೆಗೆ ಕಾರಣವಾಗುತ್ತಿದೆ.

ಇಲ್ಲಿ ವಾಹನ ದಟ್ಟಣೆ ನಿಯಂತ್ರಣ ಮಾಡಬೇಕೆಂದರೆ ಒಂದೇ ಸಾಲಿನಲ್ಲಿ ಮಾತ್ರ ಬೈಕ್‌ಗಳನ್ನು ನಿಲ್ಲಿಸಲು ಅವಕಶ ಮಾಡಿಕೊಡಬೇಕು. 2-3 ಸಾಲಿನಲ್ಲಿ ನಿಲ್ಲಿಸುವವರಿಗೆ ತಿಳಿವಳಿಕೆ ನೀಡಿ ನಂತರ ದಂಡ ವಿಧಿಸಲು ಪೊಲೀಸರು ಕ್ರಮ ಕೈಗೊಂಡರೆ ಮಾತ್ರ ಸಮಸ್ಯೆ ಬಗೆಹರಿಯಲಿದೆ. ಅಲ್ಲದೇ ಸಂಪೂರ್ಣ ವಾಹನಗಳ ದಟ್ಟಣೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾದರೆ ಪಟ್ಟಣದ ಮುಖ್ಯರಸ್ತೆ ವಿಸ್ತರಣೆಯೊಂದೇ ಪರಿಹಾರವಾಗಿದೆ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಮುಖ್ಯರಸ್ತೆ ವಿಸ್ತರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕ. ಇಲ್ಲವೇ ರಸ್ತೆಯಲ್ಲಿ ಬೈಕ್ ನಿಲುಗಡೆ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಒಂದು ಸಾಲಿನಲ್ಲಿ ನಿಲ್ಲಿಸಿದರೆ ಸಮಸ್ಯೆಯಿಲ್ಲ: ಬೇಲೂರು ಪಟ್ಟಣದ ಮುಖ್ಯರಸ್ತೆಯ ಒಂದು ಬದಿಯಲ್ಲಿ ದ್ವಿಚಕ್ರ ವಾಹನ ಮತ್ತೊಂದು ಬದಿಯಲ್ಲಿ ನಾಲ್ಕು ಚಕ್ರಗಳ ವಾಹನ ನಿಲುಗಡೆಗೆ ನಿರ್ದಿಷ್ಟ ದಿನಗಳನ್ನು ನಿಗದಿ ಮಾಡಲಾಗಿದೆ. ಆದರೂ ಬಸ್ ನಿಲ್ದಾಣಕ್ಕೆ ಹತ್ತಿರವಾಗುತ್ತದೆ ಎಂಬ ಕಾರಣಕ್ಕೆ ಬೈಕ್ ಸವಾರರು ಅಪೊಲೋ ಫಾರ್ಮಸಿ ಲೈನ್‌ನ ರಸ್ತೆಯಲ್ಲೆ ವಾಹನಗಳನ್ನು ನಿಲ್ಲಿಸುವ ಮೂಲಕ ವಾಹನಗಳ ದಟ್ಟಣೆಗೆ ಕಾರಣವಾಗುತಿದ್ದಾರೆ. ಇಲ್ಲಿ ಒಂದು ಸಾಲಿನಲ್ಲಿ ಬೈಕ್‌ಗಳನ್ನು ಸರಿಯಾಗಿ ನಿಲ್ಲಿಸಿದರೆ ಯಾವುದೇ ಸಮಸ್ಯೆಯಾಗುವುದಿಲ್ಲ. ಆದರೆ 3-4 ಸಾಲಿನಲ್ಲಿ ಬೈಕ್‌ಗಳನ್ನು ನಿಲ್ಲಿಸದಂತೆ ಪೊಲೀಸರು ತಿಳಿವಳಿಕೆ ನೀಡುತ್ತಿದ್ದರೂ ಜನರು ಕೇಳುತ್ತಿಲ್ಲ. ಅಂತಹವರ ವಿರುದ್ಧ ಬಿಗಿ ಕ್ರಮ ಕೈಗೊಂಡರೆ ವಾಹನ ದಟ್ಟಣೆ ಸಮಸ್ಯೆ ಸ್ವಲ್ಪ ಮಟ್ಟಿಗೆ ಬಗೆಹರಿಯಲಿದೆ ಎನ್ನುತ್ತಾರೆ ಸಾರ್ವಜನಿಕರು.

ಸೂಕ್ತ ಸ್ಥಳ ನಿಗದಿ ಮಾಡಲಿ: ಪಟ್ಟಣದಲ್ಲಿ ವಾಹನಗಳ ನಿಲುಗಡೆಗೆ ಸರಿಯಾದ ಸ್ಥಳಾವಕಾಶವಿಲ್ಲದೆ ಬೈಕ್ ಹಾಗೂ ನಾಲ್ಕು ಚಕ್ರಗಳ ವಾಹನಗಳ ಸವಾರರು ಪಟ್ಟಣಕ್ಕೆ ಬಂದ ಸಂದರ್ಭ ತಮ್ಮ ವಾಹನಗಳನ್ನು ನಿಲ್ಲಿಸಲು ಪರದಾಡುವಂತಾಗಿದೆ. ಈ ಕಾರಣದಿಂದ ಎಲ್ಲೆಂದರಲ್ಲಿ ವಾಹನಗಳನ್ನು ಪಾರ್ಕ್ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ವಾಹನಗಳ ನಿಲುಗಡೆಗೆ ಸ್ಥಳ ಗುರುತಿಸುವ ಕೆಲಸವನ್ನು ಪೊಲೀಸರು ಮತ್ತು ಪುರಸಭೆಯವರು ಮಾಡಿದರೆ ಅನುಕೂಲವಾಗುತ್ತದೆ.

ಬೇಲೂರು ಪಟ್ಟಣದ ಮುಖ್ಯರಸ್ತೆ ಮೊದಲೇ ಕಿರಿದಾಗಿದೆ. ಈ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಓಡಾಡುವುದರಿಂದ ವಾಹನಗಳ ದಟ್ಟಣೆ ಇದ್ದೆ ಇರುತ್ತದೆ. ಆದರೆ ಬಸ್ ನಿಲ್ದಾಣದ ಪಕ್ಕದ ಮೂಡಿಗೆರೆ ರಸ್ತೆಯ ಅಪೊಲೋ ಫಾರ್ಮಸಿ ಸಾಲಿನ ಮುಂದಿನ ಅರ್ಧ ರಸ್ತೆಗೆ ಹೊಂದಿಕೊಂಡಂತೆ ಒಂದರ ಹಿಂದೆ ಒಂದರಂತೆ ಬೈಕ್‌ಗಳನ್ನು ನಿಲ್ಲಿಸುವುದರಿಂದ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಅಧಿಕಾರಿಗಳು ಇಲ್ಲಿನ ಸಮಸ್ಯೆ ನಿವಾರಣೆಗೆ ಮುಂದಾಗಬೇಕಿದೆ.
* ಚಂದ್ರು ಗೋವಿನಹಳ್ಳಿ, ಎವಿಎಸ್‌ಎಸ್ ಕಾರ್ಯದರ್ಶಿ ಬೇಲೂರು

ಬೈಕ್ ಸವಾರರು ಪಟ್ಟಣದ ಬಸ್ ನಿಲ್ದಾಣ ಮುಂಭಾಗದ ಅಪೊಲೋ ಫಾರ್ಮಸಿ ಲೈನ್‌ನಲ್ಲಿ ಮನಸ್ಸಿಗೆ ಬಂದಂತೆ ಬೈಕ್‌ಗಳನ್ನು ನಿಲ್ಲಿಸಿ ಹೋಗುತ್ತಿರುವುದರಿಂದ ಸಮಸ್ಯೆ ನಿರ್ಮಾಣವಾಗಿದೆ. ನಾವು ಸಾಕಷ್ಟು ಬಾರಿ ತಿಳಿವಳಿಕೆ ನೀಡಿ ದಂಡವನ್ನೂ ವಿಧಿಸಿದ್ದೇವೆ. ಜತೆಗೆ ಒಂದು ಸಾಲಿನಲ್ಲಿ ಮಾತ್ರ ಬೈಕ್ ನಿಲುಗಡೆಗೆ ಮಾರ್ಕಿಂಗ್ ಮಾಡಿ ನಂತರ ಒಂದರ ಹಿಂದೆ ಮತ್ತೊಂದು ಬೈಕ್ ನಿಲ್ಲಿಸದಂತೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು.
* ಸುಬ್ರಹ್ಮಣ್ಯ, ಪೊಲೀಸ್ ಇನ್ಸ್‌ಪೆಕ್ಟರ್ ಬೇಲೂರು ಪೊಲೀಸ್ ಠಾಣೆ